ಕತ್ತು ಕುಯ್ದರೂ ರಸ್ತೆ ವಿಸ್ತರಣೆ ಶತಸಿದ್ಧ: ದೇವೇಂದ್ರಪ್ಪ

| Published : Apr 28 2025, 11:47 PM IST

ಸಾರಾಂಶ

ಪಟ್ಟಣದಲ್ಲಿ ಹಾದುಹೋಗಿರುವ ಮಲ್ಪೆ, ಮೊಳಕಾಲ್ಮೂರು ರಾಜ್ಯ ಹೆದ್ದಾರಿ ಅತಿಕ್ರಮಣವಾಗಿದೆ. ಪಟ್ಟಣದ ರಸ್ತೆ ವಿಸ್ತರಣೆ ಖಚಿತವಾಗಿ ಕಾನೂನಿನ ಪ್ರಕಾರವೇ ಆಗಲಿದೆ. ಅಭಿವೃದ್ಧಿ ವಿಚಾರವಾಗಿ ನನ್ನ ಕತ್ತು ಕುಯ್ದರೂ ನಾನು ರಸ್ತೆ ವಿಸ್ತರಣೆ ಮಾಡಿಯೇ ಸಿದ್ಧ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದ್ದಾರೆ.

- ಮಲ್ಪೆ, ಮೊಳಕಾಲ್ಮೂರು ರಾಜ್ಯ ಹೆದ್ದಾರಿ ಅತಿಕ್ರಮಣವಾಗಿದೆ: ಶಾಸಕ ಹೇಳಿಕೆ

- - -

ಕನ್ನಡಪ್ರಭ ವಾರ್ತೆ ಜಗಳೂರು

ಪಟ್ಟಣದಲ್ಲಿ ಹಾದುಹೋಗಿರುವ ಮಲ್ಪೆ, ಮೊಳಕಾಲ್ಮೂರು ರಾಜ್ಯ ಹೆದ್ದಾರಿ ಅತಿಕ್ರಮಣವಾಗಿದೆ. ಪಟ್ಟಣದ ರಸ್ತೆ ವಿಸ್ತರಣೆ ಖಚಿತವಾಗಿ ಕಾನೂನಿನ ಪ್ರಕಾರವೇ ಆಗಲಿದೆ. ಅಭಿವೃದ್ಧಿ ವಿಚಾರವಾಗಿ ನನ್ನ ಕತ್ತು ಕುಯ್ದರೂ ನಾನು ರಸ್ತೆ ವಿಸ್ತರಣೆ ಮಾಡಿಯೇ ಸಿದ್ಧ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ವರ್ತಕರ ಜೊತೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸಾರ್ವಜನಿಕರ ಹಿತದೃಷ್ಟಿಯಿಂದ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಚಳ್ಳಕೆರೆ ವೃತ್ತದವರೆಗೆ ರಸ್ತೆ ವಿಸ್ತರಣೆಗೆ ₹20 ಕೋಟಿ ಅನುದಾನ ಬಂದಿದೆ. ಆದರೆ, 63 ವರ್ತಕರು ಅಧಿಕೃತವಾಗಿ ರಸ್ತೆ ವಿಸ್ತರಣೆ ಮಾಡದಂತೆ ಮತ್ತು ಪರಿಹಾರಕ್ಕಾಗಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ ಎಂದರು.

ಈಗಾಗಲೇ ಸಾಕಷ್ಟು ಸಭೆಗಳನ್ನು ಮಾಡಿ, ರಸ್ತೆ ಅಭಿವೃದ್ಧಿ ವಿಚಾರವಾಗಿ ಮನವರಿಕೆ ಮಾಡಿಕೊಟ್ಟಿದ್ದೇನೆ. ರಸ್ತೆ ಮಧ್ಯದಿಂದ ಎರಡೂ ಬದಿಯಲ್ಲಿ 69 ಅಡಿ ರಸ್ತೆ ವಿಸ್ತರಣೆಗೆ ಮಾರ್ಕಿಂಗ್ ಮಾಡಲಾಗಿದೆ. ಆದರೆ, ಕೆಲವರು ಅಡ್ಡಿಪಡಿಸುತ್ತಿದ್ದಾರೆ. ಅಪಘಾತದಿಂದ ಕಳೆದ 6 ತಿಂಗಳ ಹಿಂದೆ 2 ಜೀವಗಳು ಬಲಿಯಾದವು. ನಿಮ್ಮ ಕೈಲಿ ಆ ಜೀವಗಳನ್ನು ವಾಪಸ್ ತರಲು ಸಾಧ್ಯವೇ? ದಿನೇದಿನೇ ವಾಹನಗಳ ದಟ್ಟಣೆ ಹೆಚ್ಚಾಗುತ್ತಿದೆ. ವರ್ತಕರು ಸಮಸ್ಯೆಯನ್ನು ತುಲನಾತ್ಮಕವಾಗಿ ನೋಡಬೇಕು. ಈಗಾಗಲೇ ಅಡ್ವೊಕೇಟ್ ಜನರಲ್ (ಎಜೆ) ಜೊತೆ ಚರ್ಚೆ ಮಾಡಿದ್ದೇನೆ. ಅವರು ಕಾನೂನು ಸಲಹೆ ನೀಡಿದ್ದಾರೆ ಎಂದರು.

ನಿಯಮಗಳ ಪ್ರಕಾರ ಭೂ ದಾಖಲೆಗಳನ್ನು ಅಧಿಕೃತವಾಗಿ ಹೊಂದಿರುವ ವರ್ತಕರು ಪರಿಹಾರ ಕೇಳುತ್ತಿದ್ದಾರೆ. ಅಧಿಕಾರಿಗಳು ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದಾರೆ. ಅತಿಕ್ರಮಣ ಮಾಡಿಕೊಂಡವರು ಅಡ್ಡಿಪಡಿಸಿದರೆ ಅಧಿಕಾರಿಗಳು ವಾಗ್ವಾದ ಮಾಡಬೇಡಿ. ದಾಖಲೆಗಳ ಸಹಿತ ನನ್ನ ಗಮನಕ್ಕೆ ತನ್ನಿ. ಅಂತಹವರ ವಿರುದ್ಧ ಹೇಗೆ ವರ್ತಿಸಬೇಕು ಎಂಬುದು ನನಗೆ ಗೊತ್ತು. ನನ್ನ ಪ್ರಾಣ ಹೋದರೂ ಅವರ ವಿರುದ್ಧ ಕ್ರಮ ಕಾನೂನು ರೀತಿ ಕ್ರಮ ಕೈಗೊಳ್ಳದೇ ಬಿಡುವುದಿಲ್ಲ ಎಂದು ವರ್ತಕರು ಮತ್ತು ಬೀದಿಬದಿ ವ್ಯಾಪಾರಿಗಳಿಗೆ ಎಚ್ಚರಿಕೆ ಸಂದೇಶವನ್ನು ಶಾಸಕರು ರವಾನಿಸಿದರು.

ಶಾಲೆಗಳು ಮತ್ತು ಮಳೆಗಾಲ ಆರಂಭವಾಗುವ ಮೊದಲು ಹಗಲು-ರಾತ್ರಿ ರಸ್ತೆ ವಿಸ್ತರಣೆ ಕಾರ್ಯ ಮಾಡಬೇಕು ಎಂದು ಗುತ್ತಿಗೆದಾರ ಮತ್ತು ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.

ಸಭೆಯಲ್ಲಿ ಪಿಡಬ್ಯ್ಲೂಡಿ ಎಇ ಪುರುಷೋತ್ತಮ ರೆಡ್ಡಿ ಹೈಕೋರ್ಟ್ ಆದೇಶದ ಪ್ರತಿಯಲ್ಲಿದ್ದ ಮಾಹಿತಿಯನ್ನು ಸಭೆ ಗಮನಕ್ಕೆ ತಂದರು. ಪ.ಪಂ. ಚೀಫ್ ಆಫೀಸರ್ ಲೋಕ್ಯಾನಾಯ್ಕ್, ವರ್ತಕರು ಅತಿಕ್ರಮಿಸಿಕೊಂಡ ಸರ್ಕಾರಿ ಜಾಗದ ಬಗ್ಗೆ ವಿವರಿಸಿದರು. ಮಾಜಿ ಜಿಪಂ ಸದಸ್ಯ ಕೆ.ಪಿ.ಪಾಲಯ್ಯ, ಮಧು, ಇದ್ದರು.

- - -

(ಬಾಕ್ಸ್‌) * 69 ಅಡಿ ಬೇಡ, 50 ಅಡಿವರೆಗೆ ರಸ್ತೆ ವಿಸ್ತರಣೆ ಮಾಡಿ

ಸಭೆ ಆರಂಭದಲ್ಲಿ ವರ್ತಕರ ಸಂಘದ ತಾಲೂಕು ಅಧ್ಯಕ್ಷ ದಾದಾ ಖಲಂದರ್ ಮಾತನಾಡಿ, ನಿಯಮಗಳಂತೆ 69 ಅಡಿ ವಿಸ್ತರಣೆ ಮಾಡಿದರೆ ವರ್ತಕರು ಎಲ್ಲವನ್ನೂ ಬಿಟ್ಟು ಕೊಡಬೇಕಾಗುತ್ತದೆ. ಹೀಗಾಗಿ ಎಲ್ಲ ವರ್ತಕರ ಅಭಿಪ್ರಾಯ ಸಂಗ್ರಹಿಸಿದ್ದು, 69 ಅಡಿ ಬದಲಿಗೆ 50 ಅಡಿವರೆಗೆ ರಸ್ತಗೆ ವಿಸ್ತರಣೆಗೆ ನಾವೆಲ್ಲ ಬದ್ಧರಾಗಿ, ಜಾಗ ಬಿಟ್ಟುಕೊಡಲು ಸಿದ್ಧರಿದ್ದೇವೆ. ಅಷ್ಟೇ ಅಲ್ಲ ಯಾವುದೇ ಪರಿಹಾರವನ್ನೂ ಕೇಳದೇ ನಾವೇ ಜಾಗವನ್ನು ಜೆಸಿಬಿ ಮೂಲಕ ಸ್ವಯಂ ತೆರವುಗೊಳಿಸಿ ಅಭಿವೃದ್ಧಿಗೆ ಸಹಕಾರ ನೀಡಲು ಸಿದ್ಧ ಎಂದು ಶಾಸಕ ಬಿ.ದೇವೇಂದ್ರಪ್ಪ ಮತ್ತು ಅಧಿಕಾರಿಗಳಿಗೆ ಭರವಸೆ ನೀಡಿದರು.

- - -

-28ಜೆಎಲ್ಆರ್ಚಿತ್ರ1:

ಜಗಳೂರು ಪಟ್ಟಣದಲ್ಲಿ ಹಾದುಹೋಗಿರುವ ಮಲ್ಪೆ-ಮೊಳಕಾಲ್ಮೂರು ರಾಜ್ಯ ಹೆದ್ದಾರಿ ವಿಸ್ತರಣೆ ಕುರಿತು ಶಾಸಕ ಬಿ.ದೇವೇಂದ್ರಪ್ಪ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.