ಸಾರಾಂಶ
ಪ್ರಶಾಂತ್ ಕೆಂಗನಹಳ್ಳಿ
ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿಉಪ ಮುಖ್ಯಮಂತ್ರಿಗಳ ಆದೇಶ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರ ನಿರ್ದೇಶನದಂತೆ ದಾಸರಹಳ್ಳಿ ವಲಯದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ತೀವ್ರಗತಿಯಲ್ಲಿ ನಡೆಸಲಾಗುತ್ತಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನೀಡಿದ್ದ ಗಡುವು ಪೂರ್ಣಗೊಂಡಿದ್ದರೂ ಒಂದಷ್ಟು ರಸ್ತೆಗಳು ಡಾಂಬರು ಕಂಡಿದ್ದು ಬಿಟ್ಟರೆ, ಹಲವು ರಸ್ತೆಗಳು ಇನ್ನೂ ಗುಂಡಿಗಳಿಂದ ಮುಕ್ತವಾಗಿಲ್ಲ.
ದಾಸರಹಳ್ಳಿ ಕ್ಷೇತ್ರದ ಎಲ್ಲಾ ವಾರ್ಡ್‌ಗಳಲ್ಲೂ ರಸ್ತೆ ಗುಂಡಿಗಳನ್ನು ಗುರುತಿಸಿ ಸಕ್ರಿಯವಾಗಿ ಮುಚ್ಚುವ ಕೆಲಸ ಮಾಡಲಾಗುತ್ತಿದೆ. ತಮ್ಮ ಪ್ರದೇಶಗಳಲ್ಲಿ ಹಾಗೂ ತಾವು ಸಂಚರಿಸುವ ರಸ್ತೆಗಳಲ್ಲಿ ಗುಂಡಿ ಮುಚ್ಚುವ ಕೆಲಸವನ್ನು ಪಾಲಿಕೆ ಮಾಡುತ್ತಿದೆ. ಆದರೆ, ಇನ್ನೂ ಸಾಕಷ್ಟು ಗುಂಡಿಗಳಿದ್ದು, ಆ ಕಾರ್ಯಗಳು ಇನ್ನೂ ಪೂರ್ಣಗೊಂಡಿಲ್ಲ ಎಂದು ಸಾರ್ವಜನಿಕರು ಹಿಡಿಶಾಪ ಹಾಕುತ್ತಾ ಇದ್ದಾರೆ.ರಸ್ತೆ ಗುಂಡಿಗಳಿಗಿಂತ ಹೆಚ್ಚಾಗಿ ರಸ್ತೆಗಳಲ್ಲಿ ಸ್ಯಾನಿಟರಿ ಪೈಪ್ ಅಳವಡಿಕೆಗೆ, ಕುಡಿಯುವ ನೀರಿಗಾಗಿ, ವಿದ್ಯುತ್ ಕೇಬಲ್ ಅಳವಡಿಕೆಗೆ, ಟೆಲಿಕಾಂ ಕಂಪನಿಯೊಂದರ ಕೇಬಲ್ ಅಳವಡಿಕೆಗೆ ರಸ್ತೆ ಕಟಿಂರ್‌ಗಳಿಗಾಗಿ ಅಗೆದು ಹಾಳಾಗಿರುವ ರಸ್ತೆಗಳೇ ಜಾಸ್ತಿಯಾಗಿದೆ.
110 ಹಳ್ಳಿಗೆ ಸೇರಿದ ಪ್ರದೇಶಗಳಂತೂ ರಸ್ತೆಗುಂಡಿಗಳಲ್ಲದೆ, ಸಂಪೂರ್ಣ ರಸ್ತೆ ಹಾಳಾಗಿರುವ ಪ್ರದೇಶಗಳಿವೆ. ಈ ವ್ಯಾಪ್ತಿಗಳಲ್ಲಿ ರಸ್ತೆಗುಂಡಿ ಮುಚ್ಚುವ ಕಾರ್ಯ ನಡೆಯುತ್ತಿದೆ. ಈ ಭಾಗದಲ್ಲಿ ಮೂಲಭೂತ ಸೌಕರ್ಯಗಳ ಸಮಸ್ಯೆ ಸಾಕಷ್ಟು ಕೇಳಿ ಬರುತ್ತಿದೆ. ತೆರಿಗೆ ಕಟ್ಟುತ್ತೇವೆ, ಆದರೆ ಸರಿಯಾದ ರಸ್ತೆಗಳಿಲ್ಲ, ಕುಡಿಯುವ ನೀರಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಶಾಸಕ ಎಸ್.ಮುನಿರಾಜು ಮಾತನಾಡಿ, ನಮ್ಮ ಕ್ಷೇತ್ರದಲ್ಲಿ ಸಾಕಷ್ಟು ಗುಂಡಿ ಬಿದ್ದ ರಸ್ತೆಗಳು ಇದ್ದಾವೆ. 110 ಹಳ್ಳಿಗೆ ವ್ಯಾಪ್ತಿಗೆ ಒಳಪಡುವ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದೆ. ಸರ್ಕಾರದಿಂದ ಅನುದಾನ ನೀಡುತ್ತಿಲ್ಲ. ಅಭಿವೃದ್ಧಿ ಕೆಲಸಗಳು ಸಾಗುತ್ತಿಲ್ಲ ಎಂದು ಸರ್ಕಾರದ ವಿರುದ್ದ ಹರಿಹಾಯ್ದರು.
ಚಿಕ್ಕಸಂದ್ರ ನಿವಾಸಿ ಜಯದೇವ್ ಮಾತನಾಡಿ, ನಮ್ಮ ಪ್ರದೇಶದಲ್ಲಿ ಎಲ್ಲಾ ಕಡೆಗಳಲ್ಲೂ ಅಡ್ಡ ರಸ್ತೆ ಹಾಳಾಗಿದೆ. ಈಗ ಬಿಬಿಎಂಪಿ ಅಧಿಕಾರಿಗಳು ಗುಂಡಿಗಳನ್ನು ಮುಚ್ಚುತ್ತಾ ಇದ್ದಾರೆ. ಇನ್ನೂ ರಾಜಗೋಪಾಲನಗರದ ಹಲವು ಕಡೆಗಳಲ್ಲಿ ಗುಂಡಿಗಳು ಹಾಗೆ ಇದೆ ಎಂದರು.ಮೂರ್ನಾಲ್ಕು ವರ್ಷದಿಂದ ರಸ್ತೆಗಳು ಹಾಳಾಗಿದ್ದು, ಈಗ ನಮ್ಮ ಭಾಗದಲ್ಲಿ ಡಾಂಬರೀಕರಣ ಆಗಿದೆ. ಚಿಕ್ಕಸಂದ್ರ, ಶೆಟ್ಟಿಹಳ್ಳಿ ಮತ್ತು ಗೆಳೆಯರ ಬಳಗದಲ್ಲಿ ಕಾವೇರಿ ನೀರಿನ ಸಂಪರ್ಕಕ್ಕೆ ಆಗೆದ ರಸ್ತೆಗಳು, ಸ್ಯಾನಿಟರಿ ಪೈಪ್ ಅಳವಡಿಕೆಗೆ ಅಗೆದ ರಸ್ತೆಗಳು ಹಾಗೆಯೇ ಉಳಿದಿವೆ. ಎಲ್ಲವನ್ನು ಮುಚ್ಚುವ ಕಾರ್ಯ ಆಗಬೇಕು ಎಂದು ಸ್ಥಳೀಯ ನಿವಾಸಿ ಸಂಗೀತಾ ತಿಳಿಸಿದರು.
ರಸ್ತೆ ಗುಂಡುಗಳನ್ನು ಮುಚ್ಚುತ್ತಿದ್ದೇವೆ. ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ರಸ್ತೆಗಳು ಹಾಳಾಗಿದ್ದು, ರಸ್ತೆ ಗುಂಡಿಗಳನ್ನು ಹುಡುಕಿ ಮುಚ್ಚುವ ಕಾರ್ಯ ಮಾಡುತ್ತಿದ್ದೇವೆ ಎಂದು ಸಹಾಯಕ ಎಂಜಿನಿಯರ್ ವೆಂಕಟೇಶ್ ತಿಳಿಸಿದರು.ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬ್ರಾಂಡ್ ಬೆಂಗಳೂರು ಮಾಡುತ್ತಿವಿ ಅಂತ ಹೇಳುತ್ತಾರೆ. ಅದರೆ ರಸ್ತೆಗಳೇ ಸರಿ ಇಲ್ಲದೆ ಬ್ರಾಂಡ್ ಬೆಂಗಳೂರು ಮಾಡಲು ಹೇಗೆ ಸಾಧ್ಯ?
-ಎಸ್.ಮುನಿರಾಜು, ದಾಸರಹಳ್ಳಿ ಶಾಸಕ.
--ದಾಸರಹಳ್ಳಿ ಕ್ಷೇತ್ರದ ಎಲ್ಲಾ ವಾರ್ಡ್‌ಗಳಲ್ಲೂ ರಸ್ತೆ ಹಾಳಾಗಿದೆ. ರಸ್ತೆ ಗುಂಡಿಗಳನ್ನು ಮುಚ್ಚುವುದೇ ಆಗಿದ್ದರೆ ಬೇಗ ಮುಗಿಸಬಹುದು ಆದರೆ ಅಡ್ಡ ರಸ್ತೆಗಳಲ್ಲಿ ರೋಡ್ ಕಟ್ಟಿಂಗ್ಸ್ ಮಾಡಿ ರಸ್ತೆ ಎಲ್ಲ ಹಾಳಾಗಿದ್ದು ಸಂಪೂರ್ಣ ರಸ್ತೆಯನ್ನು ಡಾಂಬರೀಕರಣ ಮಾಡಬೇಕು. ಈಗ ಅನುದಾನ ಸಾಕಾಗುತ್ತಿಲ್ಲ.-ರವಿ, ಮುಖ್ಯ ಎಂಜಿನಿಯರ್, ದಾಸರಹಳ್ಳಿ ವಲಯ ಬಿಬಿಎಂಪಿ.