ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು-ವಿನಯ

| Published : Jan 19 2025, 02:19 AM IST

ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು-ವಿನಯ
Share this Article
  • FB
  • TW
  • Linkdin
  • Email

ಸಾರಾಂಶ

ಎಲ್ಲರೂ ರಸ್ತೆ ಸುರಕ್ಷತೆಯ ಮಹತ್ವ ಅರಿತುಕೊಳ್ಳಬೇಕು ಹಾಗೂ ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ವಿನಯ ಕಾಟೋಕರ ಹೇಳಿದರು.

ಹಾವೇರಿ: ಎಲ್ಲರೂ ರಸ್ತೆ ಸುರಕ್ಷತೆಯ ಮಹತ್ವ ಅರಿತುಕೊಳ್ಳಬೇಕು ಹಾಗೂ ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ವಿನಯ ಕಾಟೋಕರ ಹೇಳಿದರು.ಹಾವೇರಿ ಪ್ರಾದೇಶಿಕ ಸಾರಿಗೆ ಕಚೇರಿ ಆವರಣದಲ್ಲಿ 36ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಡಬ್ಲ್ಯೂಎಚ್‌ಒ ವರದಿ ಪ್ರಕಾರ ಪ್ರತಿ ವರ್ಷ ವಿಶ್ವದಾದ್ಯಂತ 1.3 ಮಿಲಿಯನ್ ಜನರು ರಸ್ತೆ ಅಪಘಾತದಲ್ಲಿ ಮರಣಹೊಂದುತ್ತಿದ್ದು, ಇವರಲ್ಲಿ ಯುವಕರ ಸಂಖ್ಯೆ ಹೆಚ್ಚಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಪ್ರಯಾಣಿಕರ ವಾಹನ ಹಾಗೂ ಶಾಲಾ ವಾಹನಗಳು ಸೇರಿದಂತೆ ಎಲ್ಲ ವಾಹನಗಳ ಮಾಲೀಕರು ಅರ್ಹತಾ ಪತ್ರ, ನೋಂದಣಿ ಮಾನ್ಯತೆ, ತೆರಿಗೆ ಪಾವತಿ, ಚಾಲನಾ ಅನುಜ್ಞಾನ ಪತ್ರ ಸೇರಿದಂತೆ ವಾಹನದ ಎಲ್ಲ ದಾಖಲೆಗಳನ್ನು ಕಾಲಕಾಲಕ್ಕೆ ಕಾಲೋಚಿತಗೊಳಿಸಬೇಕು ಹಾಗೂ ವಾಹನಗಳ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಬೇಕು ಎಂದು ಹೇಳಿದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಾ.ಕ.ರ.ಸಾ.ಸಂಸ್ಥೆ ಹಾವೇರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯಕುಮಾರ ಜಿ. ಮಾತನಾಡಿ, ಎಲ್ಲರ ಜೀವ ಬಹಳ ಮುಖ್ಯವಾದದ್ದು, ಹಾಗಾಗಿ ರಸ್ತೆ ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಬೇಕು. ನಾವೆಲ್ಲರೂ ರಸ್ತೆ ಬಳಕೆದಾರರು ಹಾಗೂ ವಾಹನ ಸವಾರರು ಪಾದಚಾರಿಗಳ ಬಗ್ಗೆ ನಿಗಾವಹಿಸಬೇಕು. ಸುರಕ್ಷತೆ ಎಂಬುದು ಘೋಷಣೆ ಯಾಗದೇ ಜೀವನದ ವಿಧಾನವಾಗಬೇಕು. ಟ್ರ್ಯಾಕ್ಟರ್ ಮಾಲೀಕರು ಟ್ರೇಲರಗಳಿಗೆ ಕಡ್ಡಾಯವಾಗಿ ರಿಫ್ಲೆಕ್ಟರ್ ಅಳವಡಿಸಬೇಕು ಎಂದು ಸಲಹೆ ನೀಡಿದರು.ಮೋಟಾರು ವಾಹನ ನಿರೀಕ್ಷಕ ಮಹೇಶ ಮೆಣಸಿನಕಾಯಿ ಅವರು ಮಾತನಾಡಿ, ಪ್ರತಿಯೊಬ್ಬರೂ ರಸ್ತೆ ಸುರಕ್ಷತೆ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು. ದ್ವಿಚಕ್ರವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು, ಮದ್ಯಪಾನಮಾಡಿ ವಾಹನ ಚಾಲನೆ ಮಾಡಬಾರದು ಹಾಗೂ ರಸ್ತೆ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಮೋಟಾರು ವಾಹನ ಚಾಲನಾ ತರಬೇತಿ ಕೇಂದ್ರಗಳ, ವಾಯು ಮಾಲಿನ್ಯ ತಪಾಸಣಾ ಕೇಂದ್ರಗಳ ಪ್ರತಿನಿಧಿಗಳು ಇತರರು ಉಪಸ್ಥಿತರಿದ್ದರು. ಪ್ರ.ದ.ಸ ಶ್ರೀಪಾದ ಬ್ಯಾಳಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.