ಸಾರಾಂಶ
ಬೆಳ್ತಂಗಡಿ: ‘ಅಭಿವೃದ್ಧಿಯ ಹೆಸರಲ್ಲಿ ದೂಳು ತಿನ್ನಿಸಬೇಡಿ’, ‘ರಸ್ತೆ ಅಗಲೀಕರಣ ಜನಸ್ನೇಹಿಯಾಗಿರಲಿ’, ‘ಆಗಾಗ ರಸ್ತೆಗೆ ನೀರು ಹಾಕಿ’, ‘ರಸ್ತೆ ಬೇಕು ಧೂಳು ಬೇಡ’ ಇತ್ಯಾದಿ ರೀತಿಯ ಫಲಕಗಳು ಉಜಿರೆ ಸಮೀಪ ಕಂಡು ಬಂದಿವೆ.
ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕದ ಹೆದ್ದಾರಿ ಅಗಲಗೊಳ್ಳುತ್ತಿದ್ದು ಕಾಮಗಾರಿ ತೀವ್ರಗತಿಯಲ್ಲಿ ನಡೆಯುತ್ತಿದೆ. ಇದರಿಂದ ಸಂಚಾರದಲ್ಲಿ ವ್ಯತ್ಯಯವಾಗುತ್ತಿದೆ. ಪ್ರಸ್ತುತ ಮಣ್ಣಿನ ರಸ್ತೆಯಿದ್ದು ಸಹಜವಾಗಿ ಧೂಳು ಇತ್ಯಾದಿಗಳ ಸಮಸ್ಯೆ ಇದೆ. ಬೃಹತ್ ಕಾಮಗಾರಿ ಆಗುವಾಗ ಇದೆಲ್ಲಾ ಸಹಜವಾಗಿದ್ದರೂ ಭವಿಷ್ಯದ ದೃಷ್ಟಿಯಿಂದ ಅನಿವಾರ್ಯವೂ ಆಗಿದೆ. ಕೆಲ ಸಾರ್ವಜನಿಕರು ಅಲ್ಲಲ್ಲಿ ಫಲಕಗಳನ್ನು ಹಾಕಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.---
ಹೆದ್ದಾರಿ ಕಾಮಗಾರಿ: ವರ್ತಕರು, ಮಾಲಕರೊಂದಿಗೆ ಶಾಸಕ ಸಭೆಕನ್ನಡಪ್ರಭ ವಾರ್ತೆ ಬೆಳ್ತಂಗಡಿಪುಂಜಾಲಕಟ್ಟೆಯಿಂದ ಚಾರ್ಮಾಡಿಯವರೆಗೆ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಂದಾಗಿ ವರ್ತಕರ ಹಾಗೂ ಕಟ್ಟಡ ಮಾಲಕರ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳಲು ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಜನಸಂಪರ್ಕ ಸಭೆ ಭಾನುವಾರ ನಡೆಯಿತು.ತಾಲೂಕು ವರ್ತಕರ ಸಂಘದ ಬೇಡಿಕೆಯ ಮೇರೆಗೆ ಹೆದ್ದಾರಿ ಅಧಿಕಾರಿಗಳು, ಗುತ್ತಿಗೆದಾರರು, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಗುರುವಾಯನಕೆರೆ, ಹಳೇಕೋಟೆ, ಚರ್ಚ್ ರೋಡ್, ಸಂತೆ ಕಟ್ಟೆ, ಬಸ್ ನಿಲ್ದಾಣದಲ್ಲಿ ನಡೆದ ಸಭೆಯಲ್ಲಿ ವರ್ತಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.ವರ್ತಕರು ಸೇರಿದಂತೆ ಸಾರ್ವಜನಿಕರು, ಭಾರಿ ಧೂಳಿನಿಂದಾಗಿ ರಸ್ತೆಯಲ್ಲಿ ಸಂಚರಿಸಲು ಕಷ್ಟವಾಗುತ್ತಿದೆ. ಗುತ್ತಿಗೆದಾರರಲ್ಲಿ ನೀರು ಹಾಕುವಂತೆ ಸೂಚಿಸಿದರೂ ಸ್ಪಂದಿಸುತ್ತಿಲ್ಲ ಎಂದು ಶಾಸಕರಲ್ಲಿ ಹೇಳಿದಾಗ ಶಾಸಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು. ದಿನಂಪ್ರತಿ ಮೂರು ಹೊತ್ತು ಧೂಳು ಏಳದಂತೆ ನೀರು ಸಿಂಪಡಿಸಬೇಕು ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದರು. ಒಂದು ವೇಳೆ ನೀರು ಹಾಕದಿದ್ದರೆ ನನ್ನ ಗಮನಕ್ಕೆ ತರುವಂತೆ ಶಾಸಕರು ತಿಳಿಸಿದರು.ಚರಂಡಿ ನಿರ್ಮಾಣದ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು ಮಳೆಗಾಲದಲ್ಲಿ ಮಳೆ ನೀರು ಹರಿದು ಹೋಗಲು ಸರಿಯಾದ ಕ್ರಮ ಕೈಗೊಳ್ಳಬೇಕು, ರಸ್ತೆ ಒತ್ತುವರಿ ಬಗ್ಗೆ ಸಮರ್ಪಕ ಮಾಹಿತಿ ಇನ್ನೂ ಬಂದಿಲ್ಲ ಈ ಬಗ್ಗೆಯೂ ಸಂಪೂರ್ಣ ಮಾಹಿತಿಯನ್ನು ಎಲ್ಲರಿಗೂ ತಿಳಿಸಬೇಕು ಎಂದು ವರ್ತಕರು ಹೇಳಿದಾಗ , ಇನ್ನು ಎರಡು ದಿನದೊಳಗೆ ಈ ಬಗ್ಗೆ ವಿವರಗಳನ್ನು ನೀಡಲಾಗುವುದು ಎಂದು ಎಂಜಿನಿಯರ್ ಶಿವಪ್ರಸಾದ್ ಅಜಿಲ ತಿಳಿಸಿದರು.ಶಾಲೆ ಇರುವ ಪ್ರದೇಶದಲ್ಲಿ ಶಾಲಾ ಮಕ್ಕಳು ರಸ್ತೆ ದಾಟಲು ಯಾವ ರೀತಿಯ ಕ್ರಮ ಕೈಗೊಂಡಿದ್ದೀರಿ ಈಗಾಗಲೇ ವಾಹನ ದಟ್ಟಣೆಯಿಂದ ರಸ್ತೆ ಕ್ರಾಸ್ ಮಾಡಲು ಪರದಾಡುವಂತಾಗಿದೆ. ಮುಂದೆ ಹೆದ್ದಾರಿಯಾದಲ್ಲಿ ಇನ್ನಷ್ಟು ಸಮಸ್ಯೆ ಉಂಟಾಗಿ ಶಾಲಾ ಮಕ್ಕಳಿಗೆ ತೊಂದರೆಯಾದೀತು ಎಂದು ಕುಶಾಲಪ್ಪ ಗೌಡ ಆತಂಕ ವ್ಯಕ್ತ ಪಡಿಸಿದರು. ಶಾಲಾ ಮಕ್ಕಳಿಗಾಗಿ ಹಾಗೂ ಸಾರ್ವಜನಿಕರ ಉಪಯೋಗಕ್ಕಾಗಿ ನಿರ್ದಿಷ್ಟ ಸ್ಥಳದಲ್ಲಿ ಓವರ್ ಬ್ರಿಡ್ಜ್ ಅಳವಡಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.