ಸಾರಾಂಶ
ಕಾಡಾನೆ ಹಾವಳಿಯಿಂದ ಬಸವಳಿದ ರೈತರು ಬೇಲೂರು ತಾಲೂಕು ಬಿಕ್ಕೋಡು ಹೋಬಳಿಯ ತಗರೆಯಲ್ಲಿ ಸಕಲೇಶಪುರ- ಬೇಲೂರು ಮುಖ್ಯರಸ್ತೆ ತಡೆದು ದಿನವಿಡೀ ಪ್ರತಿಭಟನೆ ನಡೆಸಿದ್ದರಿಂದ ಅರೇಹಳ್ಳಿ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಶಾಲೆಯಿಂದ ಮನೆಗೆ ತೆರಳಲು ಸಾಧ್ಯವಾಗದೇ ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಪ್ರತಿಭಟನೆ ಮುಂದುವರಿದ ಪರಿಣಾಮ ಕತ್ತಲಾಗುತ್ತಿದ್ದರೂ ಬಸ್ ಬಾರದೇ ವಿದ್ಯಾರ್ಥಿಗಳು ಆತಂಕಕ್ಕೀಡಾದರು.
ಕನ್ನಡಪ್ರಭ ವಾರ್ತೆ ಬೇಲೂರು
ಕಾಡಾನೆ ಹಾವಳಿಯಿಂದ ಬಸವಳಿದ ರೈತರು ಬೇಲೂರು ತಾಲೂಕು ಬಿಕ್ಕೋಡು ಹೋಬಳಿಯ ತಗರೆಯಲ್ಲಿ ಸಕಲೇಶಪುರ- ಬೇಲೂರು ಮುಖ್ಯರಸ್ತೆ ತಡೆದು ದಿನವಿಡೀ ಪ್ರತಿಭಟನೆ ನಡೆಸಿದ್ದರಿಂದ ಅರೇಹಳ್ಳಿ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಶಾಲೆಯಿಂದ ಮನೆಗೆ ತೆರಳಲು ಸಾಧ್ಯವಾಗದೇ ಪರದಾಡುವ ಸ್ಥಿತಿ ನಿರ್ಮಾಣವಾಯಿತು. ರಸ್ತೆ ತಡೆ ವಿಚಾರ ತಿಳಿಯದ ವಿದ್ಯಾರ್ಥಿಗಳು ಬೆಳಗ್ಗೆ ಎಂದಿನಂತೆ ಶಾಲೆಗೆ ಬಂದಿದ್ದರು. ಪ್ರತಿಭಟನೆ ಮುಂದುವರಿದ ಪರಿಣಾಮ ೪ ಗಂಟೆಗೆ ಬಸ್ ನಿಲ್ದಾಣದ ಬಳಿ ಬಂದ ವಿದ್ಯಾರ್ಥಿಗಳು ಏಳು ಗಂಟೆಯಾಗಿ ಕತ್ತಲಾಗುತ್ತಿದ್ದರೂ ಬಸ್ ಬಾರದೇ ಆತಂಕಕ್ಕೀಡಾದರು. ಬೇರೆ ಊರಿಗೆ ತೆರಳಲು ಬಸ್‌ಗಾಗಿ ಕಾಯುತ್ತಿದ್ದ ಪ್ರಯಾಣಿಕರು ಸಹ ಸಮಸ್ಯೆ ಕುರಿತು ತಮ್ಮ ಸಂಬಂಧಿಕರಿಗೆ ಕರೆ ಮಾಡುತ್ತಿದ್ದರು. ಈ ವೇಳೆ ಅನುಗ್ರಹ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ೧೦ನೇ ತರಗತಿ ವಿದ್ಯಾರ್ಥಿನಿ ಚೈತನ್ಯ ಎಸ್.ಆರ್ ಮಾತನಾಡಿ, ನಾನು ಹಾಗೂ ಸ್ನೇಹಿತರು ಬಸ್ ನಿಲ್ದಾಣಕ್ಕೆ ಬಂದು ೨ ಗಂಟೆ ಕಳೆದರೂ ಒಂದೂ ಬಸ್ ಬಂದಿಲ್ಲ. ಕಾಡಾನೆಗಳ ಕಾಟದ ನಡುವೆ ಮನೆಗೆ ಹೋಗಲು ಭಯವಾಗುತ್ತದೆ. ಹಲವು ದಿನಗಳಿಂದ ಬಸ್ ಸಮಸ್ಯೆಯಿದ್ದು ಸರಿಯಾದ ಸಮಯಕ್ಕೆ ಶಾಲೆಗೆ ಬರಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸರಿಯಾದ ಸಮಯಕ್ಕೆ ಬಸ್ ಸಂಚಾರದ ವ್ಯವಸ್ಥೆ ಮಾಡಿದರೆ ಎಲ್ಲರಿಗೂ ಅನುಕೂಲವಾಗುತ್ತದೆ ಎಂದರು.ಈ ವೇಳೆ ವಿದ್ಯಾರ್ಥಿಗಳಾದ ವೈಭವ್, ತೇಜಸ್, ಸಹನಾ, ಪೃಥ್ವಿ ಸುವರ್ಣ, ಭವ್ಯ ಹಾಗೂ ಇನ್ನಿತರರು ಇದ್ದರು.