ಸಾರಾಂಶ
ಕಳೆದ ನ. 30ರಂದು ತಡರಾತ್ರಿ ಮಾಗಡಿ- ಬೆಂಗಳೂರು ರಸ್ತೆಯಲ್ಲಿ ಮಾಗಡಿ ತಾಲೂಕಿನ ಜ್ಯೋತಿಪಾಳ್ಯ ಕ್ರಾಸ್ ಬಳಿ ಬೆಂಗಳೂರು ಕಡೆಗೆ ಹೋಗುತ್ತಿದ್ದ ಕಾರೊಂದನ್ನು ಹೊಂಡಾ ಸಿಟಿ ಕಾರಿನಲ್ಲಿ ಅಡ್ಡಗಟ್ಟಿ ಕಾರಿನಲ್ಲಿದ್ದವರಿಗೆ ಮಾರಕಾಸ್ತ್ರಗಳಿಂದ ಹಲ್ಲೆಗೈದು 1400 ರು. ನಗದು, ಮೊಬೈಲ್ ಹಾಗೂ ಸ್ವಿಫ್ಟ್ ಕಾರನ್ನು ದೋಚಿಕೊಂಡು ಹೋಗಿದ್ದು, ಈ ಬಗ್ಗೆ ಮಾಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಮಾಗಡಿ ಪೊಲೀಸರ ಯಶಸ್ವಿ ಕಾರ್ಯಾಚರಣೆ
ಕನ್ನಡಪ್ರಭ ವಾರ್ತೆ ಮಾಗಡಿದಾರಿಯಲ್ಲಿ ಹೋಗುತ್ತಿದ್ದ ಕಾರನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಾಗಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಬಂಧಿತರಿಂದ 10.10 ಲಕ್ಷ ರು. ಮೌಲ್ಯದ ಮೂರು ಕಾರು ಹಾಗೂ ಎರಡು ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಗಡಿ ಪೊಲೀಸ್ ಇನ್ಸ್ಪೆಕ್ಟರ್ ಜಿ.ವೈ.ಗಿರಿರಾಜ್ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಲಕ್ಕೂರು ಗ್ರಾಮದ ಜೆ.ತೇಜ (23), ಬೆಂಗಳೂರು ದಕ್ಷಿಣ ತಾಲೂಕು. ಕೆಂಗೇರಿ ಹೋಬಳಿ, ಹೆಮ್ಮಿಗೆಪುರ ಗ್ರಾಮದ ನಿವಾಸಿ ಜಿ.ನಾಗೇಂದ್ರ (20) ಎಂಬ ಆರೋಪಿಗಳನ್ನು ಬಂಧಿಸಲಾಗಿದ್ದು, ಆರೋಪಿಗಳ ವಿರುದ್ಧ ಬೆಂಗಳೂರಿನ ಜಯನಗರ ಹಾಗೂ ಎಚ್.ಎಸ್.ಆರ್ ಲೇಔಟ್ ಠಾಣೆಗಳಲ್ಲಿ ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ.ಕಳೆದ ನ. 30ರಂದು ತಡರಾತ್ರಿ ಮಾಗಡಿ- ಬೆಂಗಳೂರು ರಸ್ತೆಯಲ್ಲಿ ಮಾಗಡಿ ತಾಲೂಕಿನ ಜ್ಯೋತಿಪಾಳ್ಯ ಕ್ರಾಸ್ ಬಳಿ ಬೆಂಗಳೂರು ಕಡೆಗೆ ಹೋಗುತ್ತಿದ್ದ ಕಾರೊಂದನ್ನು ಹೊಂಡಾ ಸಿಟಿ ಕಾರಿನಲ್ಲಿ ಅಡ್ಡಗಟ್ಟಿ ಕಾರಿನಲ್ಲಿದ್ದವರಿಗೆ ಮಾರಕಾಸ್ತ್ರಗಳಿಂದ ಹಲ್ಲೆಗೈದು 1400 ರು. ನಗದು, ಮೊಬೈಲ್ ಹಾಗೂ ಸ್ವಿಫ್ಟ್ ಕಾರನ್ನು ದೋಚಿಕೊಂಡು ಹೋಗಿದ್ದು, ಈ ಬಗ್ಗೆ ಮಾಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.
ಕಾರ್ಯಾಚರಣೆಯಲ್ಲಿ ಮಾಗಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜಿ.ವೈ ಗಿರಿರಾಜ್, ಕುದೂರು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ನವೀನ್ ಹಾಗೂ ಠಾಣಾ ಸಿಬ್ಬಂದಿ ಬೀರಪ್ಪ, ಮಂಜುನಾಥ್, ಪ್ರಮೋದ, ಮುನೀಂದ್ರ, ನಾಗರಾಜ, ವೀರಭದ್ರಪ್ಪ, ತಾವರೆಕೆರೆ ಪೊಲೀಸ್ ಠಾಣೆಯ ಹೇಮಂತ್ ಕುಮಾರ್ ಹಾಗೂ ಉಮೇಶ್ ರವರು ಭಾಗಿಯಾಗಿದ್ದರು. ಸಿಬ್ಬಂದಿಗೆ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಅಭಿನಂದಿಸಿದ್ದಾರೆ.