ಕನ್ನಡಪ್ರಭ ವಾರ್ತೆ ಅಥಣಿ

ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಚಿನ್ನಾಭರಣ ಕರಿಯುತ್ತಿದ್ದ ಮಹಾರಾಷ್ಟ್ರ ಮೂಲದ ಇಬ್ಬರು ಕಳ್ಳಿಯರನ್ನು ಅಥಣಿ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರ ಮೂಲದ ಹೇಮಾ ಕಸಬೇಕರ ಹಾಗೂ ನೀಲಂ ಕಾಂಬಳೆ ಎಂಬುವರು ಅಥಣಿ ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದಾಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪೊಲೀಸರ ವಿಚಾರಣೆಯಲ್ಲಿ ವಿವಿಧ ಕಡೆ ನಡೆದ ನಾಲ್ಕು ಕಳ್ಳತನ ಪ್ರಕರಣಗಳಲ್ಲಿ ಈ ಇಬ್ಬರು ಕಳ್ಳಿಯರು ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಪ್ರಯಾಣಿಕರಂತೆ ನಟಿಸಿ ಇನ್ನುಳಿದ ಪ್ರಯಾಣಿಕರೊಂದಿಗೆ ಬಸ್ಸಿನಲ್ಲಿ ಹತ್ತುವ ಮತ್ತು ಇಳಿಯುವ ಸಂದರ್ಭದಲ್ಲಿ ಮಹಿಳೆಯರ ಚಿನ್ನಾಭರಣಗಳನ್ನು ಕದಿಯುತ್ತಿದ್ದರು. ಬಂಧಿತ ಈ ಮಹಿಳೆಯರಿಂದ ₹ 68 ಲಕ್ಷ ಮೌಲ್ಯದ 42.5 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಥಣಿ ಪಟ್ಟಣದಲ್ಲಿ ಬಹಳ ದಿನಗಳಿಂದ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದವು, ಅಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದರೂ ಕೂಡ ಕಳ್ಳತನ ನಿಯಂತ್ರಣವಾಗಿರಲಿಲ್ಲ. ಅನೇಕ ಬಾರಿ ಆಭರಣ ಕಳೆದುಕೊಂಡ ಮಹಿಳಾ ಪ್ರಯಾಣಿಕರು ಬಸ್‌ನ್ನೇ ಪೊಲೀಸ್ ಠಾಣೆಗೆ ತಂದು ಒಬ್ಬೊಬ್ಬರನ್ನು ತಪಾಸಣೆ ಮಾಡಿದ ಪ್ರಕರಣಗಳು ನಡೆದಿದ್ದವು. ಇಂತಹ ಸಂದರ್ಭಗಳಲ್ಲಿ ಬಸ್ ಪ್ರಯಾಣಿಕರ ಮಧ್ಯೆ ಜಗಳಕ್ಕೆ ಕಾರಣವಾಗಿದ್ದವು. ಈ ಇಬ್ಬರು ಕಳ್ಳಿಯರ ಬಂಧನದಿಂದ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಆರೋಪಿಗಳ ಬಂಧನದಲ್ಲಿ ಯಶಸ್ವಿಯಾದ ಅಥಣಿ ಪೊಲೀಸರ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಅಥಣಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಪೊಲೀಸ್ ಸಿಬ್ಬಂದಿಯನ್ನು ನೇಮಿಸುವುದು ಅಗತ್ಯವಾಗಿದೆ. ಬಸ್ ನಿಲ್ದಾಣದಲ್ಲಿ ಪೊಲೀಸ್ ಚೌಕಿ ಎಂಬ ಕೌಂಟರ್ ತೆರೆಯಲಾಗಿದ್ದು, ಆದರೆ ಇಲ್ಲಿ ಯಾವುದೇ ಸಿಬ್ಬಂದಿ ಇರುವುದಿಲ್ಲ. ಹೀಗಾಗಿ, ಮಹಿಳಾ ಪ್ರಯಾಣಿಕರಿಗೆ ಸುರಕ್ಷತೆ ಇಲ್ಲದಂತಾಗಿದ್ದು, ಅಧಿಕಾರಿಗಳು ಕೂಡಲೇ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.