ರಾಯರಡ್ಡಿ ಫಾರ್ಮಹೌಸ್‌ನಲ್ಲಿ ದರೋಡೆಗೆ ಯತ್ನ!

| Published : Aug 21 2025, 01:00 AM IST

ಸಾರಾಂಶ

ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಅವರ ಇಲ್ಲಿಯ ಫಾರ್ಮ್‌ ಹೌಸ್‌ನಲ್ಲಿ ದರೋಡೆಗೆ ಯತ್ನ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಧಾರವಾಡ: ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಹಾಗೂ ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಅವರ ಇಲ್ಲಿಯ ಫಾರ್ಮ್‌ ಹೌಸ್‌ನಲ್ಲಿ ದರೋಡೆಗೆ ಯತ್ನ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಹೊರವಲಯದ ದಡ್ಡಿ ಕಮಲಾಪೂರ ಗ್ರಾಮದ ಬಳಿ ಮಮತಾ ಫಾರ್ಮ್‌ ಹೌಸ್‌ನಲ್ಲಿ ಕಳೆದ ಆ. 13ರಂದು ಹತ್ತಕ್ಕೂ ಹೆಚ್ಚು ಜನರ ದರೋಡೆಕೋರರು ನುಗ್ಗಿ ಫಾರ್ಮಹೌಸ್‌ನಲ್ಲಿ ಮಲಗಿದ್ದ ಕೆಲಸಗಾರರಾದ ಕಣ್ಣಪ್ಪ ಜಡಿ, ಹನಮಂತ ಧನದಾವರ, ಅಶೋಕ ಪೋತಲಿ, ಲಕ್ಷ್ಮಣ ಚಂದರಗಿ ಎಂಬುವರಿಗೆ ಚಾಕು ತೊರಿಸಿ ಕೈ‌ಕಾಲು ಕಟ್ಟಿ ದರೋಡೆಗೆ ಯತ್ನಿಸಿದ್ದಾರೆ. ಚಾಕು ತೋರಿಸಿ ಹೆದರಿಸಿದ ಕಳ್ಳರ ಗುಂಪು ಹಣಕ್ಕಾಗಿ ಹುಡುಕಾಡಿದ್ದು, ಏನೂ ಸಿಗದಿದ್ದಾಗ ಎರಡು ಮೊಬೈಲ್ ಫೋನ್ ಮತ್ತು ಇತರೆ ವಸ್ತು ಕದ್ದುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಇದೆ.

ಮರುದಿನ ಕೆಲಸಗಾರರು ಈ ಕೃತ್ಯದ ಕುರಿತು ಧಾರವಾಡ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಭೇಟಿ‌ ನೀಡಿ ಪರಿಶೀಲನೆ ನಡೆಸಿದ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಎಂಟು ಜನರ ಪೊಲೀಸರ ತಂಡ ರಚನೆ ಮಾಡಿ ಪರಿಶೀಲಿಸಿದ್ದಾರೆ. ಪೊಲೀಸರ ತಂಡಗಳು ಬಳ್ಳಾರಿ, ರಾಯಚೂರು, ವಿಜಯನಗರ, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಮತ್ತು ಬೆಂಗಳೂರಿನಲ್ಲಿ ಈ ದರೋಡೆಕೋರರನ್ನು ಹುಡುಕಿದೆ. ಕೊನೆಗೆ 15 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಗುಂಜನ್‌ ಆರ್ಯ ತಿಳಿಸಿದ್ದಾರೆ.

ಆರೋಪಿಗಳಿಂದ 16 ಮೊಬೈಲ್, 7 ವಾಹನ ವಶಕ್ಕೆ ಪಡೆದಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.