ಹಾಸನ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಹಿರಿಯ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಶನಿವಾರ ಹಾಸನಾಂಬೆ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ೧೧ರಿಂದ ೧೪ ದಿನಗಳ ಕಾಲ ರಾಜ್ಯದ ವಿವಿಧ ಭಾಗಗಳಿಂದ ಜನರು ಜಿಲ್ಲೆಗೆ ಆಗಮಿಸುವುದರಿಂದ, ಈ ಅವಧಿಯಲ್ಲಿ ಗ್ರಾಮೀಣ ಪ್ರವಾಸಿ ತಾಣಗಳ ಪರಿಚಯ, ಪ್ರವಾಸೋದ್ಯಮ ಚಟುವಟಿಕೆಗಳು ಹಾಗೂ ಸ್ಥಳೀಯ ಆಕರ್ಷಣೆಗಳನ್ನು ಉತ್ತೇಜಿಸಲು ಜಿಲ್ಲಾಡಳಿತ ಯೋಜನೆ ರೂಪಿಸಿದರೆ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಹಾಸನ: ಹಾಸನ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಹಿರಿಯ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಶನಿವಾರ ಹಾಸನಾಂಬೆ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಾಸನಾಂಬೆ ದೇವಿಯ ದರ್ಶನಕ್ಕೆ ಪ್ರತಿವರ್ಷಕ್ಕಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವುದನ್ನು ಕಂಡು ಸಂತೋಷವಾಗಿದೆ. ನನ್ನ ಅವಧಿಯಲ್ಲಿ ಭಕ್ತರಿಗೆ ದಿನದ ೨೪ ಗಂಟೆಯೂ ನಿರಂತರ ದರ್ಶನದ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ, ದರ್ಶನೋತ್ಸವದ ಅವಧಿಯನ್ನೂ ವಿಸ್ತರಿಸುವಂತೆ ಸರ್ಕಾರದ ಗಮನಕ್ಕೆ ಮನವಿ ಮಾಡಿದ್ದೇನೆ ಎಂದರು. ಈ ಹಿಂದೆ ಅರ್ಚಕರೊಂದಿಗೆ ಚರ್ಚಿಸಿದಾಗ ದಿನದ ೨೪ ಗಂಟೆಯೂ ದರ್ಶನ ಕಲ್ಪಿಸುವುದಕ್ಕೆ ಒಪ್ಪಿಗೆ ಸೂಚಿಸಿದ್ದರು. ಪ್ರತಿವರ್ಷ ದರ್ಶನೋತ್ಸವದ ಅವಧಿ ಮತ್ತು ಇಂದಿನ ಭಕ್ತರ ಸಂಖ್ಯೆಯನ್ನು ಹೋಲಿಸಿದರೆ ಈ ಬಾರಿ ಭಕ್ತರ ಆಗಮನ ಗಣನೀಯವಾಗಿ ಹೆಚ್ಚಾಗಿದೆ. ಹಾಸನಾಂಬೆ ದೇವಿಯ ದರ್ಶನ ಪಡೆಯಲು ವಿವಿಧ ಭಾಗಗಳಿಂದ ಜನರು ಆಗಮಿಸುತ್ತಿರುವುದು ವಿಶೇಷವಾಗಿದೆ. ಇಂತಹ ಧಾರ್ಮಿಕ ಉತ್ಸವಗಳು ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೂ ಉತ್ತಮ ಅವಕಾಶ ಒದಗಿಸುತ್ತವೆ ಎಂದರು. ಹಾಸನ ಜಿಲ್ಲೆಯಲ್ಲಿರುವ ಗ್ರಾಮೀಣ ಪ್ರವಾಸಿ ತಾಣಗಳತ್ತಲೂ ಹೆಚ್ಚಿನ ಗಮನಹರಿಸಬೇಕು. ಹಾಸನಾಂಬೆ ಜಾತ್ರೆಯ ಸಂದರ್ಭದಲ್ಲಿ ೧೧ರಿಂದ ೧೪ ದಿನಗಳ ಕಾಲ ರಾಜ್ಯದ ವಿವಿಧ ಭಾಗಗಳಿಂದ ಜನರು ಜಿಲ್ಲೆಗೆ ಆಗಮಿಸುವುದರಿಂದ, ಈ ಅವಧಿಯಲ್ಲಿ ಗ್ರಾಮೀಣ ಪ್ರವಾಸಿ ತಾಣಗಳ ಪರಿಚಯ, ಪ್ರವಾಸೋದ್ಯಮ ಚಟುವಟಿಕೆಗಳು ಹಾಗೂ ಸ್ಥಳೀಯ ಆಕರ್ಷಣೆಗಳನ್ನು ಉತ್ತೇಜಿಸಲು ಜಿಲ್ಲಾಡಳಿತ ಯೋಜನೆ ರೂಪಿಸಿದರೆ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.