ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಭಾರತೀಯ ಭಾಷಾ ಸಂಸ್ಕೃತಿಯನ್ನು ಬೆಳೆಸುವಲ್ಲಿ ಸಂಗೀತ ಮತ್ತು ನೃತ್ಯಕಲೆಗಳ ಪಾತ್ರ ಹಿರಿದಾಗಿದೆ. ಮಕ್ಕಳಿಗೆ ನಮ್ಮ ಸಂಸ್ಕೃತಿಯ ಅರಿವು ಮೂಡಿಸಲು ಮೊದಲು ನಮ್ಮ ಮಾತೃಭಾಷೆಯನ್ನು ಕಲಿಸಬೇಕು ಅಂಕುರ ಆಸ್ಪತ್ರೆಯ ಡಾ.ಎ.ಎಸ್.ಮಾಲಿ ಪಾಟೀಲ ನುಡಿದರು.ನೂಪುರ ನೃತ್ಯ ಅಕಾಡೆಮಿ ವತಿಯಿಂದ ನಡೆದ ಕರ್ನಾಟಕ ರಾಜ್ಯೋತ್ಸವ ಮತ್ತು ಭಗವದ್ಗೀತಾ ಪಠಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾತೃಭಾಷೆ ಬಗ್ಗೆ ಅಭಿಮಾನ ಪಡುವಂತೆ ಮನೆಯಲ್ಲಿ ವಾತಾವರಣ ಮೂಡಿಸಿದರೆ ಕನ್ನಡದ ಬೆಳವಣಿಗೆ ಸಾಧ್ಯವಿದೆ. ಕನ್ನಡ ಕಲಿತವರು ಕೂಡ ವೈದ್ಯರು, ಎಂಜಿನಿಯರ್ ಆಗಬಹುದು ಎಂದರು.
ಕನ್ನಡವೆಂಬುದು ಕೇವಲ ಭಾಷೆ ಮಾತ್ರವಲ್ಲ, ಅದು 3000 ವರ್ಷಗಳಿಂದ ಅನುಸರಿಸಿಕೊಂಡು ಬಂದಿರುವ ಸಂಸ್ಕೃತಿಯಾಗಿದೆ. ಜನರ ಜೀವನ ಕ್ರಮವಾಗಿದೆ. ಪ್ರತಿಯೊಬ್ಬ ಕನ್ನಡಿಗನ ಮನೆ ಮಾತು ಮತ್ತು ಮಾತೃ ಹೃದಯದ ಪರಿಭಾಷೆಯೇ ಆಗಿದೆ ಎಂದರು.ಇಂಗ್ಲೀಷ್ ಭಾಷೆ ವ್ಯಾಮೋಹಕ್ಕೆ ಬಲಿಯಾಗುವುದರಿಂದ ಮಕ್ಕಳಲ್ಲಿ ಕನ್ನಡ ಮಾತನಾಡುವ ಅಭ್ಯಾಸ ಕಡಿಮೆಯಾಗುತ್ತದೆ. ಅದರಲ್ಲೂ ಗಡಿನಾಡು ಬೀದರಿನಲ್ಲಿ ಕನ್ನಡಕ್ಕಿಂತಲೂ ಹಿಂದಿ ಮಾತನಾಡುವುದೇ ಹೆಚ್ಚು ಪ್ರಚಲಿತದಲ್ಲಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಜೆಮಿನಿ ಗ್ರಾಫಿಕ್ಸ್‌ನ ಯಶಸ್ವಿನಿ ವಿ. ಶೆಣೈ ಮಾತನಾಡಿ, ಇಂದು ಜಾಗತೀಕರಣದ ದೆಸೆಯಿಂದ ಇಂಗ್ಲೀಷ್ ಮಾಧ್ಯಮ ಕಲಿಕೆಗೆ ಜನರು ಮಾರು ಹೋಗುತ್ತಿದ್ದಾರೆ. ಮನೆಯಲ್ಲಾದರೂ ಕನ್ನಡ ಪುಸ್ತಕ, ಪ್ರತಿಕೆ ಓದುವುದನ್ನು ಕಲಿಸುವ ಮೂಲಕ ಕನ್ನಡ ಮಾತನಾಡುವುದನ್ನು ಕಲಿಸಬಹುದಾಗಿದೆ ಎಂದರು.ಭಗವದ್ಗೀತಾ ಪಠಣ ಶಿಬಿರವನ್ನು ಗೀತೆಯ ಪುಸ್ತಕಕ್ಕೆ ಪೂಜೆ ಸಲ್ಲಿಸುವ ಮೂಲಕ ಆರಂಭಿಸಿದ ಹಿರಿಯ ಸಂಸ್ಕೃತ ವಿದ್ವಾಂಸ ಪರಮೇಶ್ವರಭಟ್ ಅವರು ಭಕ್ತಿ, ಧರ್ಮ, ಜ್ಞಾನ, ಯೋಗ ಸಿದ್ಧಾಂತಗಳನ್ನು ತಿಳಿಸುವ, ಫಲಾಪೇಕ್ಷೆಯಿಲ್ಲದೆ ಸತ್ಕರ್ಮಗಳನ್ನು ಮಾಡುವಾತನಿಗೆ ಉತ್ತಮ ಫಲಗಳು ದೊರೆಯುತ್ತವೆ ಎಂದರು.
ಗೀತಾ ಪರಮೇಶ್ವರ ಭಟ್ ಅವರು ಭಗವದ್ಗೀತಾ ಶ್ಲೋಕಗಳ ಸಮೂಹ ಪಠಣ ನೆರವೇರಿಸಿದರು. ನೂಪುರ ನೃತ್ಯ ಅಕಾಡೆಮಿಯಲ್ಲಿ ಪ್ರತಿ ಶನಿವಾರ ಸಾಯಂಕಾಲ ಉಚಿತ ಭಗವದ್ಗೀತಾ ಕಲಿಕೆ ನಡೆಯಲಿದ್ದು ಆಸಕ್ತರು ಪಾಲ್ಗೊಳ್ಳಬಹುದಾಗಿದೆ ಎಂದು ತಿಳಿಸಿದರು.ಸಮಾರಂಭದ ಅಧ್ಯಕ್ಷತೆ ನೂಪುರ ನೃತ್ಯ ಅಕಾಡೆಮಿಯ ಉಷಾ ಪ್ರಭಾಕರ ವಹಿಸಿದ್ದರು. ಉದ್ಯಮಿ ದಿವ್ಯಾ ಸತೀಶ, ನೂಪುರ ನೃತ್ಯ ಅಕಾಡೆಮಿಯ ಸದಸ್ಯರಾದ ಸುಬ್ರಹ್ಮಣ್ಯ ಪ್ರಭು, ಮಮತಾ ಸತೀಶ, ನಾಗೇಶ್ವರಿ, ಅಧ್ಯಕ್ಷರಾದ ಎ.ಎಸ್. ಪ್ರಭಾಕರ, ಸಿದ್ರಾಮಪ್ಪ ಮಾಸಿಮಡೆ, ಶಂಭುಲಿಂಗ ವಾಲದೊಡ್ಡಿ, ರಘುರಾಮ ಉಪಾಧ್ಯಾಯ, ಬಸವರಾಜ ರುದನೂರು, ಪ್ರಾಣೇಶ, ಪ್ರಫುಲ್ಲಾ ಪ್ರಭು, ಅಶ್ವಿನಿ, ಉಮಾಭಟ್ ಭಾಗವಹಿಸಿದ್ದರು.