ಒನಕೆ ಓಬವ್ವ ತತ್ವಾದರ್ಶ ಅಳವಡಿಸಿಕೊಳ್ಳಿ

| Published : Nov 11 2024, 11:48 PM IST

ಸಾರಾಂಶ

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಭಾರತದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಬೇಕು ಎಂದು ಹಂಪಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ. ಎಸ್. ಚಿನ್ನಸ್ವಾಮಿ ಸೋಸಲೆ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಭಾರತದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಬೇಕು ಎಂದು ಹಂಪಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ. ಎಸ್. ಚಿನ್ನಸ್ವಾಮಿ ಸೋಸಲೆ ಒತ್ತಾಯಿಸಿದರು. ನಗರದ ಡಾ. ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ಸೋಮವಾರ ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕರ್ನಾಟಕ ಜನಸಂಸ್ಕೃತಿಯಲ್ಲಿ ಸಮಾನ ಭಾವ ಮೂಡಿಸಿ ವಾಸ್ತವತೆಯನ್ನು ಸಾರಿದ ಶರಣ ಸಾಹಿತ್ಯದ ರೂವಾರಿ ಬಸವಣ್ಣನವರನ್ನು ರಾಜ್ಯ ಸರ್ಕಾರ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಭಾರತದ ಸಾಂಸ್ಕೃತಿಕ ನಾಯಕ ಎಂದು ಘೋಷಿಸುವ ಅವಶ್ಯಕತೆಯಿದೆ ಎಂದರು. ಇತಿಹಾಸದಲ್ಲಿ ತಳ ಸಮುದಾಯದ ಓಬವ್ವ ಒಬ್ಬ ಕಾವಲುಗಾರನ ಪತ್ನಿಯಾಗಿ ಸ್ವಾಮಿ ನಿಷ್ಠೆಗಾಗಿ ಹಾಗೂ ತಮ್ಮ ರಾಜ್ಯದ ಉಳಿವಿಗಾಗಿ ಒನಕೆಯಿಂದ ಶತ್ರುಗಳನ್ನು ಸದೆ ಬಡಿದು ವೀರವನಿತೆಯಾದಳು. ಅವರ ತತ್ವ, ಆದರ್ಶಗಳನ್ನು ಮಹಿಳೆಯರು ಅಳವಡಿಸಿಕೊಳ್ಳಬೇಕು. ಈ ಮೂಲಕ ಛಲವಾದಿ ಸಮುದಾಯದಲ್ಲಿ ಜಾಗೃತಿ ಮೂಡಿಸಿ ಛಲವಾದಿ ಎಂಬ ಪದಕ್ಕೆ ಅರ್ಥ ತುಂಬಿ ನಿರೂಪಿಸಿದರು. ಅಂತೆಯೇ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಕೂಡ ಯಾವುದೇ ಫಲಾಪೇಕ್ಷೆಯಿಲ್ಲದೆ ಸಂವಿಧಾನ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬುನಾದಿ ಹಾಕಿ ತಳ ಸಮುದಾಯದಲ್ಲಿ ಧೈರ್ಯ ತುಂಬಿದ್ದಾರೆ ಎಂದರು. ಅಪರ ಜಿಲ್ಲಾಧಿಕಾರಿ ಡಾ.ಎನ್. ತಿಪ್ಪೇಸ್ವಾಮಿ ಮಾತನಾಡಿ, ಶತ್ರುಗಳ ವಿರುದ್ಧ ಏಕಾಂಗಿಯಾಗಿ ಹೋರಾಡಿ ಸಾಹಸ ಮೆರೆದ ವೀರ ಮಹಿಳೆ ಓಬವ್ವ ಶೌರ್ಯ, ಸ್ವಾಮಿನಿಷ್ಠೆ, ದೇಶಭಕ್ತಿಯ ಪ್ರತೀಕ ಎಂದರು.

ನಾಡಿನ ವೀರವನಿತೆಯರಾದ ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕನ ಸಾಲಿನಲ್ಲಿ ನಿಲ್ಲುವ ಮತ್ತೊಬ್ಬ ಧೀರ ಮಹಿಳೆಯೇ ಒನಕೆ ಓಬವ್ವ. ಯುದ್ದ ತಂತ್ರ ಅರಿಯದ ಒನಕೆ ಓಬವ್ವ ಕತ್ತಿ ಹಿಡಿಯದೇ ಕೈಗೆ ಸಿಕ್ಕಿದ ಒನಕೆಯಿಂದಲೇ ಶತೃಗಳನ್ನು ಮಣಿಸುವ ಮೂಲಕ ತನ್ನ ನಾಡನ್ನು ರಕ್ಷಿಸಿದ ದೇಶಕ್ಕೆ ಆದರ್ಶ ಪ್ರಾಯರಾಗಿದ್ದಾರೆ ಎಂದು ಹೇಳಿದರು.ಇದಕ್ಕೂ ಮುನ್ನ ಒನಕೆ ಓಬವ್ವನವರ ಭಾವಚಿತ್ರವನ್ನು ಬಿ.ಜಿ.ಎಸ್. ವೃತ್ತದಿಂದ ಡಾ. ಗುಬ್ಬಿವೀರಣ್ಣ ಕಲಾಕ್ಷೇತ್ರದವರೆಗೆ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ತರಲಾಯಿತು. ಈ ಮೆರವಣಿಗೆಯಲ್ಲಿ ನಗರ ಶಾಸಕ ಜಿ.ಬಿ. ಜ್ಯೋತಿ ಗಣೇಶ್ ಭಾಗವಹಿಸಿದ್ದರು.ಪ್ರೊ. ಎನ್. ಲಕ್ಷ್ಮೀ, ಎಲ್. ಲಲಿತಾಂಬ, ರತ್ನಮ್ಮ ಎಚ್.ಟಿ, ವಿಜಯಲಕ್ಷ್ಮೀ ಎಂ.ಆರ್, ಲಲಿತಮ್ಮ, ಅಪ್ಪಾಜಯ್ಯ ಎನ್. ಗೌಡಗೆರೆ ವರದರಾಜು, ಶೈಲಾಪುರದ ಕಹಳೆ ತಿಮ್ಮಣ್ಣ, ಬೇವಿನಹಳ್ಳಿ ಬಿ.ಕೆ. ನರಸಿಂಹರಾಜು, ಎಚ್.ಎಸ್. ಪರಮೇಶ್, ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಎಚ್.ಎಂ. ಸೋನಾ, ನಂದನ್ ಕುಮಾರ್, ಎಲ್. ಚಿನ್ನಸ್ವಾಮಿ, ಕೆ.ಆರ್. ರಶ್ಮಿ, ಪುಷ್ಪಾಂಜಲಿ, ಎಂ. ಲಲಿತಾ, ಎಸ್.ಆರ್. ಯಶಸ್ ಹಾಗೂ ಆರ್. ನಂದನ್ ಕುಮಾರ್ ಹಾಗೂ ಎಸ್.ಎಸ್.ಎಲ್.ಸಿ.ಯಲ್ಲಿ ಹೆಚ್ಚು ಅಂಕ ಪಡೆದ ಜಿ. ಸುಜಯ್, ಸಿ.ಬಿ. ಶ್ರೀರಕ್ಷಾ, ಧನುಶ್ರೀ, ಬಿ.ಎನ್. ಮೇಘನ, ವಿ.ಎಸ್. ನವ್ಯಶ್ರೀ, ಲಿಖಿತಾ ಅವರನ್ನು ಸನ್ಮಾನಿಸಲಾಯಿತು.

ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ, ತಹಸೀಲ್ದಾರ್ ರಾಜೇಶ್ವರಿ, ರೇಷ್ಮೆ ಇಲಾಖೆ ಉಪ ನಿರ್ದೇಶಕ ಟಿ. ಲಕ್ಷ್ಮೀನರಸಯ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಿ.ಎಂ. ಚಂದ್ರಶೇಖರ್, ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಪ್ಪೇಸ್ವಾಮಿ ಎಂ.ಎನ್., ತುಮಕೂರು ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ಎಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್ ಕು. ಮಿರ್ಜಿ, ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ. ಲಕ್ಷ್ಮಣದಾಸ್, ಜಿಲ್ಲಾ ಛಲವಾದಿ ಮಹಾಸಭಾ ಅಧ್ಯಕ್ಷ ಸಿ. ಭಾನುಪ್ರಕಾಶ್, ದಲಿತ ಛಲವಾದಿ ಮಹಾಸಭಾ ಅಧ್ಯಕ್ಷ ಡಾ. ಪಿ.ಚಂದ್ರಪ್ಪ, ತುಮಕೂರು ಹಾಲು ಒಕ್ಕೂಟ ನಿಯಮಿತ ವ್ಯವಸ್ಥಾಪಕ ನಿರ್ದೇಶಕ ಜಿ. ಶ್ರೀನಿವಾಸನ್, ವೀರವನಿತೆ ಒನಕೆ ಓಬವ್ವ ಮಹಿಳಾ ಬಳಗ ಅಧ್ಯಕ್ಷ ಎಂ.ಆರ್. ವಿಜಯಲಕ್ಷ್ಮಿ ಉಪಸ್ಥಿತರಿದ್ದರು.