ಸಾರಾಂಶ
ಕೃಷಿಸಖಿ ತರಬೇತಿಯನ್ನು ಹೆಣ್ಣು ಮಕ್ಕಳಿಗೆ ಆಯೋಜಿಸಿರುವುದು ನಿಮ್ಮಲ್ಲಿ ಆತ್ಮವಿಶ್ವಾಸ ತುಂಬಿ ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗಬೇಕು.
ಕನ್ನಡಪ್ರಭ ವಾರ್ತೆ ಮೈಸೂರು
ಇಂದು ನೈಸರ್ಗಿಕ ಹಾಗೂ ಸಾವಯವ ಆಹಾರ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ನಿಗದಿಪಡಿಸಲಾಗುತ್ತಿದೆ. ಹೀಗಾಗಿ, ರೈತ ಮಹಿಳೆಯರು ರಾಸಾಯನಿಕ ಮುಕ್ತ ಕೃಷಿ ಆರಂಭಿಸಿ, ಆರೋಗ್ಯಕರ ಪರಿಸರ ಹಾಗೂ ಆರೋಗ್ಯ ಉತ್ಪನ್ನಗಳನ್ನು ಉತ್ಪಾದಿಸಿ, ಆರೋಗ್ಯ ಮಟ್ಟವನ್ನು ಸುಧಾರಿಸಬೇಕು ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕಿ ಎಚ್.ಬಿ. ಮಧುಲತಾ ಕರೆ ನೀಡಿದರು.ಮೈಸೂರು ತಾಲೂಕು ನಾಗನಹಳ್ಳಿಯ ವಿಸ್ತರಣಾ ಶಿಕ್ಷಣ ಘಟಕದಲ್ಲಿ ಸಂಜೀವಿನಿ- ಕೆ.ಎಸ್.ಆರ್.ಎಲ್.ಪಿ.ಎಸ್, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೃಷಿ ವಿವಿ ಸಹಯೋಗದಲ್ಲಿ ಪರಿಸರ ಕೃಷಿ ವಿಧಾನಗಳು ಕುರಿತು ಕೃಷಿ ಜೀವನೋಪಾಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ (ಕೃಷಿಸಖಿ) 6 ದಿನಗಳ ತರಬೇತಿ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಈ ಕಾರ್ಯಕ್ರಮದ ಪ್ರಮುಖ ಹಂತವಾಗಿ ಕೃಷಿಸಖಿಯರಿಗಾಗಿ ಪರಿಸರ ಕೃಷಿ ವಿಧಾನಗಳ ಬಗ್ಗೆ 6 ದಿನಗಳು ಆಯೋಜಿಸಿರುವ ಎರಡನೇ ಮಾಡ್ಯುಲ್ ನ ತರಬೇತಿ ಬಹಳ ಉಪಯುಕ್ತವಾಗಿದೆ. ತರಬೇತಿಯನ್ನು ಪಡೆದು, ಕೃಷಿಸಖಿಯರು ಪ್ರಮುಖ ಇಲಾಖೆಗಳು ಹಾಗೂ ರೈತರಿಗೆ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಸಿ, ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿ ಶ್ರಮಿಸಬೇಕು ಎಂದು ಅವರು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ವಿಸ್ತರಣಾ ಶಿಕ್ಷಣ ಘಟಕದ ವಿಸ್ತರಣಾ ಮುಂದಾಳು ಡಾ.ಸಿ. ರಾಮಚಂದ್ರ ಮಾತನಾಡಿ, ಕೃಷಿಸಖಿ ತರಬೇತಿಯನ್ನು ಹೆಣ್ಣು ಮಕ್ಕಳಿಗೆ ಆಯೋಜಿಸಿರುವುದು ನಿಮ್ಮಲ್ಲಿ ಆತ್ಮವಿಶ್ವಾಸ ತುಂಬಿ ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗಬೇಕು. ತಾವೆಲ್ಲರೂ ಯಾವುದೇ ಹಿಂಜರಿಕೆಯಿಲ್ಲದೆ ಈ ಕಾರ್ಯಕ್ರಮದಲ್ಲಿ ಪಡೆದ ನೂತನ ತಾಂತ್ರಿಕೆಗಳನ್ನು ತಮ್ಮ ತಮ್ಮ ಗ್ರಾಮಗಳಲ್ಲಿ ನಡೆಯುವ ಗ್ರಾಮಸಭೆಗಳಲ್ಲಿ ಭಾಗವಹಿಸಿ, ರೈತರಿಗೆ ಮಾಹಿತಿ ನೀಡುವಂತೆ ತಿಳಿಸಿದರು.
ಸಾವಯವ ಕೃಷಿ ಸಂಶೋಧನಾ ಕೇಂದ್ರದ ಸಹ ಪ್ರಾಧ್ಯಾಪಕ ಡಾ.ಎನ್. ಉಮಾಶಂಕರ್ ಕುಮಾರ್ ಮಾತನಾಡಿ, ರೈತ ಮಹಿಳೆಯರು ಆರೋಗ್ಯಕರ ಪರಿಸರ ಮತ್ತು ಉತ್ಪನ್ನಗಳನ್ನು ಉತ್ಪಾದಿಸಿ, ಆರೋಗ್ಯ ಮಟ್ಟವನ್ನು ಸುಧಾರಿಸಿಕೊಳ್ಳುವ ಬಗ್ಗೆ ಮಾಹಿತಿ ನೀಡಬೇಕು ಎಂದರು.ಸಹಾಯಕ ಪ್ರಾಧ್ಯಾಪಕರಾದ ಡಾ.ಆರ್.ಎನ್. ಪುಷ್ಪಾ, ರಾಹುಲ್ ದಾಸ್ ಇದ್ದರು.