ಕನ್ನಡದ ಮೇಲೆ ಭಾಷೆಗಳಿಂದ ದಾಳಿ

| Published : Nov 11 2024, 11:48 PM IST

ಸಾರಾಂಶ

ಕನ್ನಡಕ್ಕೆ ಅನ್ನ ಕೊಡುವ ಶಕ್ತಿ ಇದೆ. ಆದರೆ, ಅದನ್ನು ತಿಳಿದು ಸರಿಯಾಗಿ ಮಾತೃ ಭಾಷೆಯನ್ನು ಬಳಸಿಕೊಳ್ಳಬೇಕಿದೆ. ಭಾರತವನ್ನು ಪ್ರೀತಿಸುವ ಮಕ್ಕಳನ್ನು ಬೆಳೆಸುವುದು, ಕನ್ನಡ ನಾಡು ಮತ್ತು ನುಡಿ ಉಳಿಸುವ ಕೆಲಸವನ್ನು ಸರ್ಕಾರಗಳು ಮಾಡಬೇಕು.

ಧಾರವಾಡ:

ಕನ್ನಡ ಭಾಷೆಯ ಮೇಲೆ ಅನೇಕ ಭಾಷೆಗಳಿಂದ ನಿರಂತರ ದಾಳಿ ನಡೆಯುತ್ತಿದ್ದು, ಕೇಂದ್ರದವರು ಹಿಂದಿ ಹಾಗೂ ರಾಜ್ಯದವರು ಆಂಗ್ಲ ಭಾಷೆಯನ್ನು ಒತ್ತಾಯವಾಗಿ ಕನ್ನಡಿಗರ ಮೇಲೆ ಹೇರುತ್ತಿದ್ದಾರೆ. ಆದ್ದರಿಂದ ಬೇರೆ ಭಾಷೆಗಳನ್ನು ಅದರದರ ಸ್ಥಾನದಲ್ಲಿಯೇ ಇಡಬೇಕೆಂದು ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ರಾಜ್ಯೋತ್ಸವ, ಕರ್ನಾಟಕ ನಾಮಕರಣ-50ರ ಸಂಭ್ರಮ ನಿಮಿತ್ತ ಶನಿವಾರ ಏರ್ಪಡಿಸಿದ್ದ ಧರೆಗೆ ದೊಡ್ಡವರು ಮಾಲಿಕೆಯಲ್ಲಿ ಮಾತನಾಡಿದರು.

ಕನ್ನಡಕ್ಕೆ ಅನ್ನ ಕೊಡುವ ಶಕ್ತಿ ಇದೆ. ಆದರೆ, ಅದನ್ನು ತಿಳಿದು ಸರಿಯಾಗಿ ಮಾತೃ ಭಾಷೆಯನ್ನು ಬಳಸಿಕೊಳ್ಳಬೇಕಿದೆ. ಭಾರತವನ್ನು ಪ್ರೀತಿಸುವ ಮಕ್ಕಳನ್ನು ಬೆಳೆಸುವುದು, ಕನ್ನಡ ನಾಡು ಮತ್ತು ನುಡಿ ಉಳಿಸುವ ಕೆಲಸವನ್ನು ಸರ್ಕಾರಗಳು ಮಾಡಬೇಕು ಎಂದು ಪ್ರತಿಪಾದಿಸಿದರು.

ಲೇಖಕರಲ್ಲಿ ಎರಡು ವಿಧಗಳಿವೆ. ಒಂದು ಹೆದ್ದಾರಿಯಾದರೆ, ಇನ್ನೊಂದು ಒಳದಾರಿ. ನಮ್ಮ ಬದುಕನ್ನು ಹಸನಾಗಿಸುವ ಒಳದಾರಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಒಳದಾರಿಯಲ್ಲಿ ಸಿಗುವ ಸತ್ಯ ಹೆದ್ದಾರಿಯಲ್ಲಿ ಸಿಗುವುದಿಲ್ಲ ಎಂದರು.

ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಮಾತನಾಡುವ ಸ್ವಾತಂತ್ರ್ಯ ನೀಡಬೇಕು. ಇಂದಿನ ಮೊಬೈಲ್​ ಯುಗದಲ್ಲಿ ಭಾಷೆಯನ್ನು ಟ್ರಿಮ್​ ಮಾಡುತ್ತಿದ್ದೇವೆ. ಅದು ಭಾಷೆಯನ್ನು ಪರಿರ್ಪೂಣವಾಗಿ ಬಳಸಲು ತಡೆ ಹಿಡಿಯುತ್ತಿದೆ. ಸಂಬಂಧ ವಾಚಕ ಪದಗಳೇ ಇಲ್ಲದ ಭಾಷೆ ಇಂಗ್ಲಿಷ್​. ಕನ್ನಡ ಸಂಬಂಧ ವಾಚಕ ಭಾಷೆಯಾಗಿದೆ. ಇಂತಹ ಭಾಷೆ, ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರು ಬೇಂದ್ರೆ, ಚಂಪಾ, ಚನ್ನವೀರ ಕಣವಿ, ಗೋವಿಂದ ರಾಜ್​ ಸೇರಿ ಅನೇಕರಿದ್ದಾರೆ ಎಂದರು.

ಸಂಘಕ್ಕೆ ₹5 ಕೋಟಿ ಕೊಡಿ

ಕನ್ನಡ ಎಂದರೆ ಕರ್ನಾಟಕ ವಿದ್ಯಾವರ್ಧಕ ಸಂಘ. ಕರ್ನಾಟಕದಲ್ಲಿ ಕನ್ನಡವನ್ನು ಗಟ್ಟಿಗೊಳಿಸಿದ ಸಂಘ ರಾಜಧಾನಿಯಿಂದ ದೂರ ಇರುವ ಕಾರಣಕ್ಕೆ ಸರ್ಕಾರದಿಂದ ಅಸಮರ್ಪಕ ಅನುದಾನ ಪಡೆಯುತ್ತಿಲ್ಲ. ರಾಜಕಾರಣಿಗಳು ವರ್ಷಕ್ಕೆ ಒಂದು ಕೋಟಿ ಅನುದಾನ ಕೊಡಿಸುವ ಕೆಲಸ ಮಾಡಬೇಕು. ರೈಲ್ವೆ, ಬಸ್​ ನಿಲ್ದಾಣದಲ್ಲಿ ಒಂದೇ ಒಂದು ಸಾಲು ಬೇಂದ್ರೆಯವರ ಕವಿತೆ ಕಾಣುವುದಿಲ್ಲ. ಇದು ನಮ್ಮನ್ನಾಳುವವರ ಕನ್ನಡ ಪ್ರೇಮಕ್ಕೆ ಹಿಡಿದ ಕೈಗನ್ನಡಿ. ಕನ್ನಡಕ್ಕೆ ಮೊದಲ ಪ್ರಾಶಸ್ತ್ಯ ಕೊಡುವ ಕೆಲಸವನ್ನು ಸರ್ಕಾರ ಮಾಡಬೇಕು. ಕನ್ನಡ ನೆಲ, ಜಲ, ಭಾಷೆಗೆ ಶ್ರಮಿಸುತ್ತಿರುವ ಸಂಘಕ್ಕೆ ತಕ್ಷಣವೇ ₹5 ಕೋಟಿ ಅನುದಾನ ಬಿಡುಗಡೆ ಮಾಡಬೇಕು ಎಂದು ಕುಂವಿ ಆಗ್ರಹಿಸಿದರು.

ಕಸಾಪ ಅಧ್ಯಕ್ಷ ಮಹೇಶ ಜೋಶಿ ಮನಸ್ಸು ಮಾಡಿ ಈ ಭಾಗದ ಮಹಿಳಾ ಸಾಹಿತಿಗಳನ್ನು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಿ ಎಂದ ಆಗ್ರಹಿಸಿದ ಕುಂವೀ, ಎಲ್ಲ ಚಳವಳಿಗೆ ತೊಟ್ಟಿಲು ಧಾರವಾಡ. 1980ರಿಂದ ನಡೆದ ಚಳವಳಿಗಳಲ್ಲಿ ಭಾಗವಹಿಸಿದ್ದೇನೆ. ಇದೇ ಕಾರಣಕ್ಕೆ ನಾನು ವಿಶ್ವ ವಿದ್ಯಾಲಯದ ಪ್ರಾಡಕ್ಟ್​ ಆಗದೆ ಚಳವಳಿ ಪ್ರಾಡಕ್ಟ್​ ಆಗಿದ್ದೇನೆ ಎಂದರು.

ಕುಂವಿ ಬದುಕು ಕುರಿತು ಕವಿ ಪ್ರಮೋದ ತುರವಿಹಾಳ ಮಾತನಾಡಿ, ಕುಂ. ವೀರಭದ್ರಪ್ಪ ಯಾವುದೇ ಸೌಲಭ್ಯ ಇಲ್ಲದ ಗ್ರಾಮದಲ್ಲಿ ಶಿಕ್ಷಕ ವೃತ್ತಿ ಆರಂಭಿಸಿ ಅಲ್ಲಿನ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಿ ಅವರ ಜೀವನದಲ್ಲಿ ಶಿಸ್ತು ಕಲ್ಪಿಸಿದ್ದಾರೆ. ಅವರ ಕತೆಗಳನ್ನು ಓದಿದರೆ ಅವರ ಬದುಕು ಅರ್ಥವಾಗಲಿದೆ. ಕಷ್ಟದ ಬದುಕಿನ ಮಧ್ಯೆಯೂ ತಮ್ಮ ವೃತ್ತಿ ಆರಂಭಿಸಿ ಯಶಸ್ವಿಯಾಗಿ ನೆರವೇರಿಸಿದ್ದಾರೆ. ಅವರ ಬದುಕು ವೈಚಾರಿಕತೆ, ಸಮಾಜದ ಪರವಾಗಿತ್ತು. ಅವರ ಕತೆಗಳ ಹಿಂದೆ ಸಂಕಷ್ಟದ ಬದುಕಿನ ಚಿತ್ರಣವೇ ಇದೆ ಎಂದರು.

ಕುಂವಿ ಸಾಹಿತ್ಯ ಕುರಿತು ಮೆಹಬೂಬ ಮಠದ ಮಾತನಾಡಿದರು. ಸಂಘದ ಉಪಾಧ್ಯಕ್ಷರಾದ ಪ್ರೊ. ಮಾಲತಿ ಪಟ್ಟಣಶೆಟ್ಟಿ, ಶಿವಾನಂದ ಭಾವಿಕಟ್ಟಿ, ಶಂಕರ ಕುಂಬಿ ಇದ್ದರು. ಸತೀಶ ತುರಮರಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಧನವಂತ ಹಾಜವಗೋಳ ನಿರೂಪಿಸಿದರು.