ಹುಬ್ಬಳ್ಳಿ: ಸಮಾಜದ ಬಲಿಷ್ಠ ಭವಿಷ್ಯ ನಿರ್ಮಾಣಕ್ಕೆ ಯುವಶಕ್ತಿಯ ಪಾತ್ರ ಅತ್ಯಂತ ಪ್ರಮುಖವಾಗಿದೆ. ಯುವಕರು ಎದ್ದರೆ ಸಮಾಜ ಎದ್ದು ನಿಲ್ಲುತ್ತದೆ, ಸಮಾಜ ಎದ್ದರೆ ಹೊಸ ಇತಿಹಾಸ ನಿರ್ಮಾಣವಾಗುತ್ತದೆ ಎಂದು ಎಸ್‌ಎಸ್‌ಕೆ ಸಮಾಜದ ರಾಜ್ಯಾಧ್ಯಕ್ಷ ಡಾ. ಶಶಿಕುಮಾರ್ ಮೆಹರವಾಡೆ ಹೇಳಿದರು.

ಅವರು ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ರಾಜ್ಯ ಎಸ್‌ಎಸ್‌ಕೆ ಸಮಾಜದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಎಸ್‌ಎಸ್‌ಕೆ ಯುವ ಘಟಕದ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಪೂರ್ವಭಾವಿ ಸಭೆಗಳನ್ನು ಆಯೋಜಿಸಿ ಮುಂದಿನ ದಿನಗಳಲ್ಲಿ ಎಸ್‌ಎಸ್‌ಕೆ ಸಮಾಜದ ಯುವ ಘಟಕದ ಐತಿಹಾಸಿಕ ರಾಜ್ಯಮಟ್ಟದ ಸಮಾವೇಶ ನಡೆಸುವ ಗುರಿ ಹೊಂದಲಾಗಿದೆ. ರಾಜ್ಯದ ಮೂಲೆಮೂಲೆಗಳಿಂದ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಯುವಕರು ಭಾಗವಹಿಸುವ ನಿರೀಕ್ಷೆಯಿದೆ ಎಂದರು.

ಸಮಾಜದ ಅಭಿವೃದ್ಧಿಗೆ ಕೇವಲ ವ್ಯಕ್ತಿಗಳ ಸಾಧನೆ ಸಾಕಾಗುವುದಿಲ್ಲ. ಯುವಶಕ್ತಿ ಸಂಘಟಿತವಾಗಿ, ಜಾಗೃತವಾಗಿ ಮತ್ತು ಸಮಾಜದ ಬಗ್ಗೆ ಕಾಳಜಿ ಹೊಂದಿ ಮುಂದೆ ಬರಬೇಕು. ಶಿಕ್ಷಣ, ಉದ್ಯೋಗ, ವ್ಯಾಪಾರ, ರಾಜಕೀಯ ಮತ್ತು ಸಾಮಾಜಿಕ ಸೇವೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಎಸ್‌ಎಸ್‌ಕೆ ಸಮಾಜದ ಯುವಕರು ತಮ್ಮ ಛಾಪು ಮೂಡಿಸುವ ಸಮಯ ಬಂದಿದೆ ಎಂದರು.

ಇದೇ ಸಂದರ್ಭದಲ್ಲಿ ಎಸ್‌ಎಸ್‌ಕೆ ಸಮಾಜ ಯುವ ಘಟಕದ ರಾಜ್ಯಾಧ್ಯಕ್ಷರಾಗಿ ವೆಂಕಟೇಶ್ ಕಾಟವೆ, ಧಾರವಾಡ ಜಿಲ್ಲಾಧ್ಯಕ್ಷರಾಗಿ ಯೋಗೇಶ್ ಹಬೀಬ ಸೇರಿದಂತೆ ರಾಜ್ಯದ 13 ಜಿಲ್ಲೆಗಳ ಜಿಲ್ಲಾಧ್ಯಕ್ಷರನ್ನು ಅಧಿಕೃತವಾಗಿ ನೇಮಕ ಮಾಡಲಾಯಿತು.


ಮಾಜಿ ಶಾಸಕರಾದ ಅಶೋಕ್ ಕಾಟವೆ, ಸಮಾಜದ ಹು-ಧಾ ಚೀಫ್ ಟ್ರಸ್ಟಿ ಸತೀಶ್ ಮೆಹರವಾಡೆ, ಶ್ಯಾಮ ಕಬಾಡೆ, ಟಿ.ಎಂ. ಮೆಹರವಾಡೆ, ಭಾಸ್ಕರ್ ಜಿತೂರಿ, ವಿಠ್ಠಲ ಲದವಾ, ಅಶೋಕ್ ರಾಯಬಾಗಿ, ಮಾರುತಿರಾವ್ ಪವಾರ, ರಾಮಚಂದ್ರ ಕಬಾಡೆ, ಕೃಷ್ಣಮೂರ್ತಿ ರಂಗ್ರೆಜ್, ನೀಲಕಂಠಸಾ ಜಡಿ, ರಮೇಶ್ ಬುರಬುರೆ ಸೇರಿದಂತೆ ಹಲವರಿದ್ದರು.