ಸಾರಾಂಶ
ವಿಶೇಷ ವರದಿ
ರೋಣ: ಪಟ್ಟಣದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜ್ ಬಿಲ್ಡಿಂಗ್ ಹೆಸರಿಗೆ ಮಾತ್ರ ಎಂಬಂತಿದೆ. ಇಲ್ಲಿನ ಪ್ರತಿಯೊಂದು ಕೊಠಡಿಗಳು ಶಿಥಿಲಗೊಂಡಿದ್ದು, ಜೀವ ಭಯದಲ್ಲಿ ವಿದ್ಯಾರ್ಥಿಗಳು ತರಗತಿಗೆ ಹಾಜರಾಗುವ ಪರಿಸ್ಥಿತಿ ಇದೆ.ಕೂಡಲೇ ಸಂಬಂಧಿಸಿದ ಇಲಾಖೆ ಅಧಿಕಾರಿಗಳು, ಸ್ಥಳೀಯ ಶಾಸಕರು ಗಮನ ಹರಿಸಿ, ಕಾಲೇಜಿಗೆ ಸೂಕ್ತ ಸೌಕರ್ಯ, ಅಗತ್ಯ ಕಾಯಕಲ್ಪ ಕಲ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಸಾಲಿನಲ್ಲಿ ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಸೇರಿ ಒಟ್ಟು 224 ವಿದ್ಯಾರ್ಥಿಗಳಿದ್ದಾರೆ. ಆದರೆ ಕೇವಲ 2 ಕೊಠಡಿಗಳು ಮಾತ್ರ ಸುಸ್ಥಿಯಲ್ಲಿವೆ. ಇನ್ನುಳಿದ ಕೊಠಡಿಗಳು ಶಿಥಿಲಾವಸ್ಥೆಗೊಂಡಿವೆ. ಇದರಿಂದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಕೊನೆಯ ಸಾಲಿನಲ್ಲಿ ಕುಳಿದ ವಿದ್ಯಾರ್ಥಿಗಳಿಗೆ ಉಪನ್ಯಾಸಕರ ಧ್ವನಿ ಕೇಳಿಸುವುದಿಲ್ಲ. ಬೋರ್ಡ್ ಮೇಲೆ ಬರೆದ ಯಾವುದೇ ವಿಷಯ ಕಾಣಿಸುವುದಿಲ್ಲ. ಇದರಿಂದ ಅಬ್ಯಾಸಕ್ಕೆ ತೊಂದರೆಯಾಗುತ್ತಿದೆ.ಪಟ್ಟಣದ ಸರ್ಕಾರಿ ಪಿಯು ಕಾಲೇಜು ಹಳೆಯ ಕಟ್ಟಡ ತೆರವಿಗೆ ಈಗಾಗಲೆ ಆದೇಶವಾಗಿದ್ದು, ವಿವೇಕ ಯೋಜನೆಯಡಿ ಕಾಲೇಜಿಗೆ ಮಂಜೂರಾಗಿದ್ದ 10 ಕೊಠಡಿಗಳ ಪೈಕಿ 4 ಕೊಠಡಿಗಳನ್ನು ಚಿಂಚಲಿ ಗ್ರಾಮದ ಪಿಯು ಕಾಲೇಜಿಗೆ ವರ್ಗಾಯಿಸಲಾಗಿದೆ. ರೋಣ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ಸ್ವತಃ ಸರ್ಕಾರವೆ ಅನ್ಯಾಯ ಮಾಡುತ್ತಿದೆ. ಸದ್ಯ ಎರಡು ನೂತನ ಕೊಠಡಿಗಳು ಮತ್ತು ಉಳಿದ ಶಿಥಿಲಾವಸ್ಥೆ ತಲುಪಿದ ಹಳೆಯ ಕೊಠಡಿಗಳಲ್ಲಿಯೆ ತರಗತಿಗಳು ನಡೆಯುತ್ತಿದ್ದು, ಪ್ರಾಚಾರ್ಯರ ಕೊಠಡಿ ಸಿಬ್ಬಂದಿ ಕೊಠಡಿ ಮತ್ತು ಕಾರ್ಯಾಲಯಗಳು ಸಹಿತ ಹಳೆಯ ಕೊಠಡಿಯಲ್ಲಿಯೆ ಕಾರ್ಯ ಮುಂದುವರಿಸಿದ್ದು, ಕಾಲೇಜು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಜೀವ ಭಯದಿಂದಲೇ ದಿನಗಳೆಯುವಂತಾಗಿದೆ.
ರೋಣ ಕಾಲೇಜಿಗೆ ಪ್ರಾಚಾರ್ಯರು ಸೇರಿದಂತೆ ಒಟ್ಟು 16 ಹುದ್ದೆಗಳ ಮಂಜೂರಾತಿ ಇದ್ದರೂ ಪ್ರಾಚಾರ್ಯರ ಹುದ್ದೆ ಸೇರಿದಂತೆ 11 ಹುದ್ದೆಗಳು ಖಾಲಿ ಇದೆ. ಉಪನ್ಯಾಸಕರ ನೇಮಕಾತಿ ಮತ್ತು ನಿಯುಕ್ತಿಯಾಗದ ಕಾರಣ ವಿಜ್ಞಾನ ವಿಭಾಗಕ್ಕೆ ಪ್ರವೇಶಾತಿ ಸಹ ಸದ್ಯ ನೀಡುತ್ತಿಲ್ಲ ಎಂಬುದು ಖೇದಕರ ಸಂಗತಿಯಾಗಿದೆ.ಮೂರು ಕಾಲೇಜಗಳಿಗಿವೆ ಸಮಸ್ಯೆ ನೂರಾರು: ರೋಣ ಪಟ್ಟಣ ಹಾಗೂ ತಾಲೂಕಿನ ಹುಲ್ಕೂರ, ಹಿರೇಹಾಳದಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜು ನೂರಾರು ಸಮಸ್ಯೆಗಳನ್ನು ಎದುರಿಸುತ್ತಿವೆ. ಈ ಕುರಿತು ಉಪನ್ಯಾಸಕರು ಸಾಕಷ್ಟು ಬಾರಿ ಮೇಲಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.
ಕಾಲೇಜು ಪ್ರವೇಶಾತಿ ಮಾತ್ರ ಪ್ರತಿ ವರ್ಷ ಹೆಚ್ಚುತ್ತಲಿದ್ದರೂ ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯಗಳು ಮಾತ್ರ ಲಭಿಸುತ್ತಿಲ್ಲ. ತಾಲೂಕಿನ ಉಳಿದೆರಡು ಸರ್ಕಾರಿ ಪದವಿ ಪೂರ್ವ ಕಾಲೇಜುಗಳು ಹಿರೇಹಾಳ ಮತ್ತು ಹುಲ್ಲೂರ ಗ್ರಾಮದಲ್ಲಿದ್ದು, ಈ ಎರಡೂ ಕಾಲೇಜುಗಳು ಸೂಕ್ತ ಕಟ್ಟಡ ಹೊಂದಿದ್ದರೂ ಸಿಬ್ಬಂದಿ ಇಲ್ಲ. ಹಿರೇಹಾಳ ಕಾಲೇಜಿಗೆ ಒಟ್ಟು 9 ಮಂಜೂರಾದ ಹುದ್ದೆಗಳ ಪೈಕಿ ಕೇವಲ ಇಬ್ಬರು ಮಾತ್ರ ಕಾಯಂ ಉಪನ್ಯಾಸಕರಿದ್ದು, ಅದರಲ್ಲಿಯೆ ಒಬ್ಬರು ಪ್ರಭಾರಿ ಪ್ರಾಚಾರ್ಯರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಉಳಿದಂತೆ ಕಳೆದ ನಿಯೋಜನೆ ಮೇಲೆ ಒಬ್ಬರು ಮತ್ತು 3 ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದು, ಸದ್ಯ ಮೂವತ್ತು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಕಲಾ ವಿಭಾಗ ಮಾತ್ರ ಪ್ರವೇಶಾತಿ ಹೊಂದಿದ್ದು, ವಾಣಿಜ್ಯ ವಿಭಾಗಕ್ಕೆ ಅನುಮತಿ ಇದ್ದರೂ ಸೂಕ್ತ ಸಿಬ್ಬಂದಿ ನಿಯೋಜಿಸದ ಕಾರಣ ಪ್ರವೇಶಾತಿ ಪಡೆಯಲು ವಿದ್ಯಾರ್ಥಿಗಳು ಹಿಂಜರಿಯುತ್ತಿದ್ದಾರೆ. ಹುಲ್ಲೂರ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಕೂಡಾ ಸಿಬ್ಬಂದಿ ಕೊರತೆ ಎದುರಿಸುತ್ತಿದ್ದು, ಮಂಜೂರಾದ ಆರು ಹುದ್ದೆಗಳ ಪೈಕಿ ಕೇವಲ ಇಬ್ಬರು ಮಾತ್ರ ಕಾಯಂ ಉಪನ್ಯಾಸಕರಿದ್ದು, 4 ಅತಿಥಿ ಉಪನ್ಯಾಸಕರನ್ನು ನಿಯೋಜಿಸಿಕೊಳ್ಳಲಾಗಿದೆ.ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ರೋಣದಲ್ಲಿ ಸಿಬ್ಬಂದಿ ಕೊರತೆಯ ಜತೆಗೆ ಕಟ್ಟಡದ ಸಮಸ್ಯೆ ಕೂಡಾ ಇದ್ದು, ಇಷ್ಟೆಲ್ಲ ಸಮಸ್ಯೆಗಳ ಮಧ್ಯೆಯೂ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಫಲಿತಾಂಶ ಕೂಡಾ ಪ್ರತಿ ವರ್ಷ ಶೇ. 75ಕ್ಕಿಂತ ಹೆಚ್ಚು ಸಾಧಿಸುತ್ತಿದ್ದೇವೆ ಎಂದು ರೋಣ ಸರ್ಕಾರಿ ಪಪೂ ಕಾಲೇಜು ಪ್ರಭಾರಿ ಪ್ರಾಚಾರ್ಯ ಬಿ.ಎಸ್. ಮಾನೇದ ಹೇಳುತ್ತಾರೆ.ಹಿರೇಹಾಳ ಪದವಿ ಪೂರ್ವ ಕಾಲೇಜಿನಲ್ಲಿ ಸದ್ಯ ಇಬ್ಬರು ಮಾತ್ರ ಕಾಯಂ ಉಪನ್ಯಾಸಕರಿದ್ದು, ಕೆಲವೊಮ್ಮೆ ನಿಯೋಜನೆ ಮೇರೆಗೆ ಮತ್ತೆ ಕೆಲವೊಮ್ಮೆ ಅತಿಥಿ ಉಪನ್ಯಾಸಕರೊಂದಿಗೆ ಕಾಲೇಜು ನಡೆಸುತ್ತಿದ್ದು, ಉಪನ್ಯಾಸಕರ ಕೊರತೆಯ ಕಾರಣ ವಾಣಿಜ್ಯ ವಿಭಾಗಕ್ಕೆ ಅನುಮತಿ ಇದ್ದರೂ ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯಲು ಹಿಂಜರಿಯುತ್ತಿದ್ದಾರೆ ಎಂದು ಹಿರೇಹಾಳ ಸರ್ಕಾರಿ ಪಿಯು ಕಾಲೇಜು ಪ್ರಭಾರಿ ಪ್ರಾಚಾರ್ಯ ಎಸ್.ಬಿ. ಗಡಗಿ ಹೇಳುತ್ತಾರೆ.