ಬಿರುಗಾಳಿ ಮಳೆಗೆ ಹಾರಿ ಹೋದ ಮೇಲ್ಛಾವಣಿ, ತೋಟಗಾರಿಕಾ ಬೆಳೆ ನಾಶ

| Published : Apr 23 2025, 12:33 AM IST

ಸಾರಾಂಶ

ತಾಲೂಕಿನ ಕೆಲವೆಡೆ ಸೋಮವಾರ ರಾತ್ರಿ ಗುಡುಗು-ಮಿಂಚು ಸಹಿತ ಆರ್ಭಟದ ಬಿರುಗಾಳಿ ಜೊತೆ ಸುರಿದ ಮಳೆಗೆ ಗಿಡಮರಗಳು ಸೇರಿದಂತೆ ಕೆಲ ಮನೆಗಳಿಗೂ ಹಾನಿಯಾಗಿರುವ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ತಿಪಟೂರು

ತಾಲೂಕಿನ ಕೆಲವೆಡೆ ಸೋಮವಾರ ರಾತ್ರಿ ಗುಡುಗು-ಮಿಂಚು ಸಹಿತ ಆರ್ಭಟದ ಬಿರುಗಾಳಿ ಜೊತೆ ಸುರಿದ ಮಳೆಗೆ ಗಿಡಮರಗಳು ಸೇರಿದಂತೆ ಕೆಲ ಮನೆಗಳಿಗೂ ಹಾನಿಯಾಗಿರುವ ಘಟನೆ ನಡೆದಿದೆ.

ತಾಲೂಕಿನ ಮತ್ತಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಯ್ಯನಬಾವಿಯ ಗ್ರಾಮದ ಸೋಮಶೇಖರ್, ಲಕ್ಷ್ಮಮ್ಮ ಹಾಗೂ ಸುಜಾತ ಎಂಬುವವರಿಗೆ ಸೇರಿದ ಮೂರು ಮನೆಗಳ ಮೇಲ್ಛಾವಣಿ ಬಿರುಗಾಳಿಗೆ ಸಿಲುಕಿ ಸಂಪೂರ್ಣ ಹಾಳಾಗಿವೆ. ಸಿಮೆಂಟ್ ಶೀಟ್, ಗೃಹ ಉಪಯೋಗಿ ವಸ್ತುಗಳು ಸೇರಿದಂತೆ ಸುಮಾರು 5ಲಕ್ಷ ರು. ಮೌಲ್ಯದ ವಸ್ತುಗಳು ನಾಶವಾಗಿವೆ. ಸೋಮಶೇಖರ್ ಎಂಬುವವರ ಮನೆಯಲ್ಲಿದ್ದ 20ಚೀಲ ರಾಗಿ ಮಳೆಯ ನೀರಿನಲ್ಲಿ ನೆನೆದು ಹೋಗಿದ್ದು ಮನೆಯಲ್ಲಿದ್ದ ಟಿ.ವಿ, ಪಾತ್ರೆ ಸೇರಿದಂತೆ ಮನೆಯ ದಿನಸಿ ಹಾಗೂ ಇತರೇ ಸಾಮಗ್ರಿಗಳು ನಾಶವಾಗಿವೆ. ಸ್ಥಳಕ್ಕೆ ಮತ್ತಿಹಳ್ಳಿ ಗ್ರಾಮ ಪಂಚಾಯಿತಿಯ ಪಿಡಿಒ ಶಿವರಾಜ್ ಹಾಗೂ ಕಾರ್ಯದರ್ಶಿ ಭೇಟಿ ನೀಡಿ ಪರಿಶೀಲನೆ ಮಾಡಿ ಪರಿಹಾರ ಕೊಡಿಸುವ ಬಗ್ಗೆ ಭರವಸೆ ನೀಡಿದ್ದಾರೆ.

ಹಾಗೆಯೇ ಅಯ್ಯನಬಾವಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಿಸಿಯೂಟ ತಯಾರಿಸುವ ಅಡುಗೆ ಮನೆಯ ಮೇಲೆ ಬಿರುಗಾಳಿ ಮಳೆಗೆ ಮರಬಿದ್ದು ಗೋಡೆ ಸೇರಿದಂತೆ ಕೆಲ ವಸ್ತುಗಳು ನಾಶವಾಗಿದ್ದು ಅರಣ್ಯ ಇಲಾಖೆ ಸಿಬ್ಬಂದಿ ಬಂದು ಮರವನ್ನು ತೆರವುಗೊಳಿಸಿದರು. ತಾಲೂಕಿನ ಕೆಲ ಭಾಗಗಳಲ್ಲಿ ಬೀಸಿದ ಗಾಳಿಗೆ ವಿವಿಧೆಡೆ ಬಾಳೆ, ತೆಂಗು ಹಾಗೂ ತರಕಾರಿ ಬೆಳೆಗಳಿಗೆ ಹಾನಿ ಉಂಟಾಗಿದೆ. ಕೆಲ ಕಡೆ ಬಾಳೆ ಗಿಡಗಳು ಗೊನೆ ಸಹಿತ ನೆಲಕ್ಕುರುಳಿದ್ದು ಮಾವಿನ ಕಾಯಿಗಳು ಸಹ ಭೂಮಿಪಾಲಾಗಿರುವ ಘಟನೆ ನಡೆದಿದೆ.