ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕಳೆದ 72 ವರ್ಷಗಳಿಂದ ರೋಟರಿ ಮಡಿಕೇರಿ ಸಮಾಜಕ್ಕೆ ಹಲವು ಕೊಡುಗೆ ಹಾಗೂ ಸೇವೆಗಳನ್ನು ನೀಡುತ್ತಾ ಬಂದಿದ್ದು, ಈ ಬಾರಿಯೂ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನೀಡಿದೆ ಎಂದು ರೋಟರಿ 3181 ಜಿಲ್ಲಾ ಗರ್ವನರ್ ವಿಕ್ರಂದತ್ತ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಯೋ ನಿರ್ಮೂಲನೆ ಕಾರ್ಯಕ್ರಮದಲ್ಲಿ ಪ್ರಮುಖ ಪಾತ್ರವಾಹಿಸಿರುವ ರೋಟರಿ ಕ್ಲಬ್ ಉತ್ತಮ ಸೇವೆಗಳನ್ನು ಸಲ್ಲಿಸುವ ಮೂಲಕ ಸಮಾಜದಲ್ಲಿ ತನ್ನದೇ ಛಾಪನ್ನು ಮೂಡಿಸುತ್ತಾ ಬಂದಿದೆ ಎಂದರು.
ಕೊಡಗಿನಲ್ಲಿ 14 ಕ್ಲಬ್‌ಗಳನ್ನು ಹೊಂದಿದ್ದು, 700 ಸದಸ್ಯರಿದ್ದಾರೆ. ರೋಟರಿಯ ನಾಲ್ಕು ಜಿಲ್ಲೆಗಳಲ್ಲಿ ರು.15 ಕೋಟಿ ವೆಚ್ಚದ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕಳೆದ 6 ತಿಂಗಳಿನಲ್ಲಿ 3 ರಕ್ತದಾನ ಶಿಬಿರಗಳನ್ನು ಆಯೋಜಲಾಗಿದೆ. ಮಡಿಕೇರಿಯ ಅಶ್ವಿನಿ ಆಸ್ಪತ್ರೆಗೆ ಕೆಲವು ಸಲಕರಣೆಗಳನ್ನು ನೀಡಲಾಗಿದೆ. ಪ್ರಾಕೃತಿಕ ವಿಕೋಪದ ಸಂದರ್ಭ ಸೋಮವಾರಪೇಟೆಯಲ್ಲಿ ಸಂತ್ರಸ್ತರಿಗೆ ಮನೆಗಳನ್ನು ನೀಡಿದೆ ಎಂದು ಹೇಳಿದರು.ಹಿರಿಯ ನಾಗರೀಕರಿಗೆ ಸಂಧ್ಯಾ ಸುರಕ್ಷ ಯೋಜನೆ ಮೂಲಕ ಉಪಕರಣಗಳನ್ನು ನೀಡಿದೆ, ಹಲವು ಅಂಗನವಾಡಿ ಕೇಂದ್ರ ಹಾಗೂ ಸರ್ಕಾರಿ ಶಾಲೆಗಳಿಗೆ ಅಗತ್ಯ ಸಲಕರಣೆಗಳನ್ನು ನೀಡಲಾಗಿದೆ. ಮಡಿಕೇರಿಯ ವಿವಿಧ ಶಾಲೆಗಳ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿಯ 300 ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವನ್ನು ನಗರದ ಸರ್ಕಾರಿ ಪಿಯು ಕಾಲೇಜಿನ ಆವರಣದಲ್ಲಿ ನಡೆಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಭವಿಷ್ಯ ರೂಪಿಸಲು ಸಹಾಯವಾಗಿದೆ ಎಂದರು.
ಕಳೆದ ಹಲವು ವರ್ಷಗಳಿಂದ 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿಯ ಸರ್ಕಾರಿ ಶಾಲೆಯ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುತ್ತಾ ಬಂದಿದೆ. ಈ ಬಾರಿ 40 ವಿದ್ಯಾರ್ಥಿಗಳಿಗೆ ತಲಾ ರು.40 ಸಾವಿರ ವಿದ್ಯಾರ್ಥಿವೇತನ ವಿತರಿಸಲಾಗಿದೆ. ಮಡಿಕೇರಿಯ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ರು.20 ಸಾವಿರ ಮೌಲ್ಯದ ಸ್ಯಾನಿಟರಿ ನ್ಯಾಫ್ಕಿನ್ ಡಿಸ್ಪೋಸಿಬಲ್ ಮಿಷನ್ ಅಳವಡಿಸಲಾಗಿದೆ. ಜ.24, 25 ಮತ್ತು 26 ರಂದು ಮಂಗಳೂರಿನಲ್ಲಿ ಜಿಲ್ಲಾ ಅಧಿವೇಶನ ನಡೆಯಲಿದ್ದು, ಸುಮಾರು 1 ಸಾವಿರ ರೋಟರಿಯನ್ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.ರೋಟರಿ ಮಡಿಕೇರಿ ಅಧ್ಯಕ್ಷ ಸುದಯ್ ನಾಣಯ್ಯ ಮಾತನಾಡಿ, ಈಗಾಗಲೇ ಸರ್ವಿಕಲ್ (ಗರ್ಭಕಂಠ)ದ ಕ್ಯಾನ್ಸರ್ ಬಗ್ಗೆ ಮೈಸೂರಿನ ಹೆಸರಾಂತ ವೈದ್ಯರಾದ ಡಾ.ಸೋನಿಯ ಮಂದಪ್ಪ ಅವರಿಂದ ವಿದ್ಯಾರ್ಥಿನಿಯರಿಗಾಗಿ ಮಾಹಿತಿ ಕಾರ್ಯಾಗಾರ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಸುಮಾರು ರು.2 ಸಾವಿರ ವೆಚ್ಚದ ಸರ್ವಿಕಲ್ ವ್ಯಾಕ್ಸಿನ್ ಅನ್ನು ರೋಟರಿ ಸಂಸ್ಥೆ ವತಿಯಿಂದ 100 ವಿದ್ಯಾರ್ಥಿನಿಯರಿಗೆ ಉಚಿತವಾಗಿ ನೀಡುವ ಉದ್ದೇಶ ಹೊಂದಿದ್ದೇವೆ ಎಂದರು.
ಸಹಾಯಕ ಗರ್ವನರ್ ಡಿ.ಎಂ.ಕಿರಣ್, ಕಾರ್ಯದರ್ಶಿ ಪ್ರಿನ್ಸ್ ಪೊನ್ನಣ್ಣ, ಜಿಲ್ಲಾ ತರಬೇತಿ ಕಾರ್ಯದರ್ಶಿ ಡಾ.ಶಿವಪ್ರಸಾದ್ ಹಾಗೂ ಜಿಲ್ಲಾ ಆಡಳಿತ ಕಾರ್ಯದರ್ಶಿ ರಿತೇಶ್ ಬಾಳಿಗ ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))