ಸಾರಾಂಶ
ಹುಬ್ಬಳ್ಳಿ: ಕುರುಡ ಮತ್ತು ಮೂಕ ಮಕ್ಕಳು ತಮ್ಮ ಭಾವನೆಗಳನ್ನು ಅಭಿವ್ಯಕ್ತಪಡಿಸಲಾಗದೆ ಮಾನಸಿಕ ಒತ್ತಡಕ್ಕೆ ಒಳಗಾಗಿರುತ್ತಾರೆ. ಇದನ್ನು ಅರಿತು ರೋಟರಿ ಸಂಸ್ಥೆ ಒಳ್ಳೆಯ ಕೆಲಸ ಮಾಡುತ್ತಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಇಲ್ಲಿಯ ವಿವೇಕಾನಂದ ನಗರದಲ್ಲಿ ಶನಿವಾರ ರೋಟರಿ ಸಂಸ್ಥೆಯ ಡಾ. ಪಿ.ವಿ. ದತ್ತಿ ರೋಟರಿ ಕಿವುಡ, ಮೂಗ ಮಕ್ಕಳ ತರಬೇತಿ ಶಾಲೆಯ ಸುವರ್ಣ ಮಹೋತ್ಸವ ಹಾಗೂ ಸುವರ್ಣ ಮಹೋತ್ಸವ ನೂತನ ಕೊಠಡಿ ಉದ್ಘಾಟಿಸಿ ಮಾತನಾಡಿದರು.ಯಾರಿಗೆ ಯಾವ ಕೊರತೆ ಇರುತ್ತದೆಯೋ ಅದನ್ನು ನೀಗಿಸುವ ಕೆಲಸವನ್ನು ರೋಟರಿ ಮಾಡುತ್ತದೆ. ಕೊರತೆ ಇದ್ದಾಗಲೇ ಅದರ ಮಹತ್ವ ಅರಿಯಲು ಸಾಧ್ಯವಾಗುತ್ತದೆ. ಮಾತು ಬರುವವರು ತಮ್ಮಲ್ಲಿರುವ ಭಾವನೆಗಳನ್ನು ಮಾತುಗಳ ಮೂಲಕ ಅಭಿವ್ಯಕ್ತಪಡಿಸಿ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳುತ್ತಾರೆ. ವಿಶೇಷಚೇತನ ಮಕ್ಕಳಿಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಅವಕಾಶ ಕಲ್ಪಿಸುವ ಕೆಲಸವನ್ನು ರೋಟರಿ ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಖಾಸಗಿ ವಲಯದಲ್ಲಿ ಸಾಕಷ್ಟು ಅಭಿವೃದ್ಧಿಯಾಗುತ್ತಿದ್ದು, ಅಲ್ಲಿ ಅಭಿವೃದ್ಧಿಯಾದರೆ ಬಡವರಿಗೆ ಅನುಕೂಲವಾಗುವುದಿಲ್ಲ. ಕೆಎಂಸಿಆರ್‌ಐ ಇನ್ನಷ್ಟು ಅಭಿವೃದ್ಧಿಯಾಗಬೇಕು. ಹೊರ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅದಕ್ಕೆ ಪೂರಕ ಔಷಧಿ ಸೇರಿದಂತೆ ಎಲ್ಲ ಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಬೇಕಿದೆ ಎಂದರು.ನಾನು ಸಿಎಂ ಆಗಿದ್ದಾಗ ಈ ಭಾಗದಲ್ಲಿ ವೈದ್ಯಕೀಯ ಕ್ಷೇತ್ರ ಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸಿದ್ದೇನೆ. ಕಿವುಡರಿಗೆ ಕಾಂಕ್ಲಿಯರ್ ಇನ್ಫ್ಲಾಂಟ್ ಯೋಜನೆ ಆರಂಭಿಸಿದೆ. ಇದರಿಂದ ಉತ್ತರ ಕರ್ನಾಟಕ ಭಾಗದಲ್ಲಿ ಬಹಳಷ್ಟು ಸಮಾಜದ ಬಡಜನರಿಗೆ ಅನುಕೂಲವಾಗಿದೆ ಎಂಬ ಆತ್ಮಸಂತೃಪ್ತಿ ಇದೆ ಎಂದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ದೇವರು ಅಂಗವಿಕಲ ಮಕ್ಕಳಿಗೆ ಅದ್ಭುತ ಶಕ್ತಿ ನೀಡಿದ್ದಾನೆ. ಶಾಸಕರ ಅಭಿವೃದ್ಧಿ ನಿಧಿಯಿಂದ ಶಾಲೆಗೆ ₹20 ಲಕ್ಷ ನೀಡುತ್ತೇನೆ. ಈ ವಿಶೇಷ ಮಕ್ಕಳ ಶ್ರೇಯೋಭಿವೃದ್ಧಿ ಕಾರ್ಯಕ್ಕೆ ಸಮಾಜದಿಂದಲೂ ಹೆಚ್ಚೆಚ್ಚು ಸಹಾಯ ಧನ ದೊರೆಯುವಂತಾಗಬೇಕು ಎಂದರು.ಶಾಲಾ ಸಂಸ್ಥಾಪಕ ಅಧ್ಯಕ್ಷ ಡಾ. ಪಿ.ವಿ. ದತ್ತಿ ಅವರು 50 ವರ್ಷದ ಶಾಲೆ ನಡೆದು ಬಂದ ದಾರಿ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಪ್ರೊ. ಸಿ.ಸಿ. ದಿಕ್ಷಿತ, ಡಾ. ಎಸ್.ಎಸ್. ಹಿರೇಮಠ, ಶೇಷಗಿರಿ ಕುಲಕರ್ಣಿ, ಸುಹಾಸ ಜವಳಿ, ವೀಣಾ ಹೆಗಡೆ, ಎಂ.ಕೆ. ಪಾಟೀಲ, ಆರ್.ಬಿ. ಪಾಟೀಲ ಸೇರಿದಂತೆ ಹಲವರಿದ್ದರು.
ವಿಶೇಷಚೇತನರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಅತ್ಯಾಧುನಿಕ ತಂತ್ರಜ್ಞಾನಗಳು ಬಂದಿವೆ. ಅವುಗಳನ್ನು ರೋಟರಿ ಸಂಸ್ಥೆ ಸದ್ಬಳಕೆ ಮಾಡಿಕೊಳ್ಳಬೇಕು. 50 ವರ್ಷಗಳ ಹಿಂದೆಯೇ ಡಾ. ಪಿ.ವಿ. ದತ್ತಿ ಹಾಗೂ ಮಾಜಿ ಸಿಎಂ ದಿ. ಎಸ್.ಆರ್. ಬೊಮ್ಮಾಯಿ ಅವರು ಉತ್ತಮ ಆಲೋಚನೆಯೊಂದಿಗೆ ಶಾಲೆ ತೆರೆದಿರುವುದು ಶ್ಲಾಘನೀಯ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.