ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾವೇರಿ ನಿವಾಸಕ್ಕೆ ಕಳೆದ 24 ಗಂಟೆಗಳಿಂದ ಸಾಲು ಸಾಲಾಗಿ ಬಿಜೆಪಿ ನಾಯಕರು ಭೇಟಿ ನೀಡುತ್ತಿದ್ದು, ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾವೇರಿ ನಿವಾಸಕ್ಕೆ ಕಳೆದ 24 ಗಂಟೆಗಳಿಂದ ಸಾಲು ಸಾಲಾಗಿ ಬಿಜೆಪಿ ನಾಯಕರು ಭೇಟಿ ನೀಡುತ್ತಿದ್ದು, ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಬುಧವಾರ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರು. ಬೆನ್ನಲ್ಲೇ ಗುರುವಾರ ಮಾಜಿ ಸಚಿವರು ಹಾಗೂ ಶಾಸಕರಾದ ರಮೇಶ್ ಜಾರಕಿಹೊಳಿ, ಬಿಜೆಪಿ ಮಾಜಿ ಶಾಸಕ ನರಸಿಂಹ ನಾಯಕ್ (ರಾಜುಗೌಡ) ಭೇಟಿ ಮಾಡಿದ್ದಾರೆ.
ರಮೇಶ್ ಜಾರಕಿಹೊಳಿ ಅವರು ಒಂದು ತಾಸಿಗೂ ಹೆಚ್ಚು ಕಾಲ ಸಿದ್ದರಾಮಯ್ಯ ಅವರೊಂದಿಗೆ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದಾರೆ. ಇದೇ ವೇಳೆ ತಾವು ಸಕ್ರಿಯ ರಾಜಕಾರಣದಲ್ಲೇ ಮುಂದುವರೆಯಬೇಕು ಎಂದು ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.
ಮಾತುಕತೆ ಬಗ್ಗೆ ಕುತೂಹಲ:
ರಮೇಶ್ ಜಾರಕಿಹೊಳಿ ಅವರು ಕಾಂಗ್ರೆಸ್ ಪಕ್ಷದಲ್ಲೇ ಇದ್ದವರು ಹಾಗೂ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದವರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿಗೆ ಸೇರಿ ಸಚಿವರಾಗಿದ್ದರು. ಸದ್ಯ ಬಿಜೆಪಿಯಲ್ಲಿದ್ದರೂ ಪಕ್ಷದ ರಾಜ್ಯ ನಾಯಕತ್ವದ ಜತೆ ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿಲ್ಲ. ಇದರ ನಡುವೆಯೇ ಸಿದ್ದರಾಮಯ್ಯ ಭೇಟಿ ಹಾಗೂ ಸುದೀರ್ಘ ಮಾತುಕತೆ ಕುತೂಹಲ ಮೂಡಿಸಿದೆ.
ಚಿಕ್ಕ ಹುಡುಗನಿದ್ದಾಗಲಿಂದಲೂ ಸಿದ್ದರಾಮಯ್ಯ ಅಭಿಮಾನಿ
ಮತ್ತೊಂದೆಡೆ ನಾನು ಚಿಕ್ಕ ಹುಡುಗನಿದ್ದಾಗಲಿಂದಲೂ ಸಿದ್ದರಾಮಯ್ಯ ಅಭಿಮಾನಿ ಎಂದು ಹೇಳಿಕೊಳ್ಳುವ ಬಿಜೆಪಿ ಮಾಜಿ ಶಾಸಕ ರಾಜುಗೌಡ ಸಹ ಸಿದ್ದರಾಮಯ್ಯ ಜತೆ ಚರ್ಚೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಅವರು, ಇದೊಂದು ವೈಯಕ್ತಿಯ ನೆಲೆಯ ಭೇಟಿ ಅಷ್ಟೇ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಬಿಜೆಪಿ ನಾಯಕರು ಸಾಲು-ಸಾಲಾಗಿ ಕಾವೇರಿ ನಿವಾಸಕ್ಕೆ ಭೇಟಿ ನೀಡುತ್ತಿರುವುದು ಚರ್ಚೆಗೆ ಕಾರಣವಾಗಿದೆ.
