ಪರಪ್ಪನ ಜೈಲಿನಲ್ಲಿ ರೌಡಿ ಜನ್ಮದಿನಾಚರಣೆ: ವಿಡಿಯೋ ವೈರಲ್

| Published : Oct 05 2025, 02:00 AM IST

ಪರಪ್ಪನ ಜೈಲಿನಲ್ಲಿ ರೌಡಿ ಜನ್ಮದಿನಾಚರಣೆ: ವಿಡಿಯೋ ವೈರಲ್
Share this Article
  • FB
  • TW
  • Linkdin
  • Email

ಸಾರಾಂಶ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರೌಡಿ ಗುಬ್ಬಚ್ಚಿ ಸೀನ ಜನ್ಮದಿನಾಚರಣೆ ದೃಶ್ಯ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಟ ದರ್ಶನ್ ತಂಡಕ್ಕೆ ವಿಶೇಷ ಆತಿಥ್ಯ ನೀಡಿದ ವಿವಾದದ ನಂತರ ಮತ್ತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ತನ್ನ ಸಹಚರರ ಜತೆ ರೌಡಿಯೊಬ್ಬ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಸರ್ಜಾಪುರ ಠಾಣೆ ರೌಡಿಶೀಟರ್‌ ಶ್ರೀನಿವಾಸ್ ಅಲಿಯಾಸ್ ಗುಬ್ಬಚ್ಚಿ ಸೀನನ ಹುಟ್ಟು ಹಬ್ಬ ಆಚರಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕುರಿತು ವಿಚಾರಣೆ ನಡೆಸಿ ವರದಿ ನೀಡುವಂತೆ ದಕ್ಷಿಣ ವಲಯ ಡಿಐಜಿ (ಕಾರಾಗೃಹ) ಕೆ.ಸಿ.ದಿವ್ಯಶ್ರೀ ಅವರಿಗೆ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಬಿ.ದಯಾನಂದ್ ಸೂಚಿಸಿದ್ದಾರೆ.

ಕಳೆದ ವರ್ಷ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್ ಹಾಗೂ ಅವರ ಸಹಚರರಿಗೆ ವಿಶೇಷ ಸೌಲಭ್ಯ ನೀಡಿದ ಆರೋಪಕ್ಕೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಅಧಿಕಾರಿ ಮತ್ತು ಸಿಬ್ಬಂದಿ ತುತ್ತಾಗಿದ್ದರು. ಅಲ್ಲದೆ ದರ್ಶನ್ ಅವರ ಜಾಮೀನು ರದ್ದತಿ ಆದೇಶದಲ್ಲಿ ಜೈಲಿನ ವಿಶೇಷ ಸೌಲಭ್ಯ ವ್ಯವಸ್ಥೆ ಕಲ್ಪಿಸಿದ್ದ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಪ್ರಕರಣ ಮರೆಯುವ ಮುನ್ನವೇ ಕೊಲೆ ಪ್ರಕರಣದ ಆರೋಪಿ ರೌಡಿಗೆ ಹುಟ್ಟುಹಬ್ಬ ಆಚರಣೆಗೆ ಅವಕಾಶ ನೀಡಿದ ಆರೋಪ ಬಂದಿದೆ.

ಎಡಿಜಿಪಿಗೆ ಮೃತನ ಪತ್ನಿ ದೂರು:

ಹಳೇ ವೈಷಮ್ಯ ಹಿನ್ನೆಲೆಯಲ್ಲಿ ಕಳೆದ ಜನವರಿಯಲ್ಲಿ ಮಾಜಿ ರೌಡಿ ವೆಂಕಟೇಶ್‌ನನ್ನು ರೌಡಿ ಗುಬ್ಬಚ್ಚಿ ಸೀನ ಹಾಗೂ ಆತನ ಸಹಚರರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದರು. ಈ ಸಂಬಂಧ ಸೀನನ ತಂಡವನ್ನು ಸರ್ಜಾಪುರ ಠಾಣೆ ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದರು. ಜೈಲಿನಲ್ಲಿ ತನ್ನ ಸಹಚರರ ಜತೆ ಸೀನ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ‘ಸಾಗರ್’ ಹೆಸರಿನ ಖಾತೆಯಲ್ಲಿ ಹಂಚಿಕೊಂಡಿದ್ದನು. ಜೈಲಿನಲ್ಲಿ ನನ್ನ ಪತಿ ಕೊಲೆ ಪ್ರಕರಣದ ಆರೋಪಿ ಸೀನ ಹಾಗೂ ಆತನ ಬೆಂಬಲಿಗರಿಗೆ ವಿಶೇಷ ಸೌಲಭ್ಯ ನೀಡಲಾಗಿದೆ ಎಂದು ಆರೋಪಿಸಿ ಎಡಿಜಿಪಿ ದಯಾನಂದ್ ಅವರಿಗೆ ಮೃತ ವೆಂಕಟೇಶ್ ಪತ್ನಿ ದೂರು ನೀಡಿದ್ದರು. ಈ ದೂರು ಆಧರಿಸಿ ಎಡಿಜಿಪಿ ಅವರು, ಡಿಐಜಿ ನೇತೃತ್ವದಲ್ಲಿ ವಿಚಾರಣೆಗೆ ಸೂಚಿಸಿದ್ದಾರೆ. ಹಳೇ ವಿಡಿಯೋ?

ರೌಡಿ ಹುಟ್ಟುಹಬ್ಬದ ಆಚರಣೆ ಸಂಬಂಧ ವಿಡಿಯೋ ಎರಡ್ಮೂರು ತಿಂಗಳ ಹಳೆಯದ್ದಾಗಿರಬಹುದು. ಎಡಿಜಿಪಿ ಅವರಿಗೆ ವೆಂಕಟೇಶ್ ಪತ್ನಿ ದೂರು ಕೊಟ್ಟು 10 ದಿನಗಳು ಕಳೆದಿವೆ. ಹೀಗಾಗಿ ಘಟನೆ ಯಾವಾಗ ನಡೆದಿದೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರೌಡಿಶೀಟರ್ ಹುಟ್ಟುಹಬ್ಬ ಆಚರಣೆ ಆರೋಪ ಕುರಿತು ಡಿಐಜಿ ಅವರಿಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ. ವರದಿ ಬಳಿಕ ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತದೆ.

- ಬಿ.ದಯಾನಂದ್, ಎಡಿಜಿಪಿ, ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ