ಐದು ಪಾಲಿಕೆಗಳ ಸಿಬ್ಬಂದಿಗೆಮೊದಲ ತಿಂಗಳ ವೇತನವಿಲ್ಲ

| Published : Oct 05 2025, 02:00 AM IST

ಐದು ಪಾಲಿಕೆಗಳ ಸಿಬ್ಬಂದಿಗೆಮೊದಲ ತಿಂಗಳ ವೇತನವಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದಡಿ ರಚನೆಯಾದ ಐದು ನಗರ ಪಾಲಿಕೆಯ ಅಧಿಕಾರಿ-ಸಿಬ್ಬಂದಿಗೆ ಸೆಪ್ಟೆಂಬರ್ ವೇತನ (ಜಿಬಿಎ ರಚನೆಯಾದ ಮೊದಲ ತಿಂಗಳು) ಪಾವತಿಯಾಗಿಲ್ಲ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದಡಿ ರಚನೆಯಾದ ಐದು ನಗರ ಪಾಲಿಕೆಯ ಅಧಿಕಾರಿ-ಸಿಬ್ಬಂದಿಗೆ ಸೆಪ್ಟೆಂಬರ್ ವೇತನ (ಜಿಬಿಎ ರಚನೆಯಾದ ಮೊದಲ ತಿಂಗಳು) ಪಾವತಿಯಾಗಿಲ್ಲ.

ಕಳೆದ ಸೆ.2ರಂದು ಬಿಬಿಎಂಪಿ ವಿಸರ್ಜನೆಯಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾಯಿತು. ಆಗ ಐದು ನಗರ ಪಾಲಿಕೆಗಳೂ ಅಸ್ತಿತ್ವಕ್ಕೆ ಬಂದವು. ಇದನ್ನು ಅರಿತಿದ್ದ ಬಿಬಿಎಂಪಿ ಅಧಿಕಾರಿಗಳು ಆಗಸ್ಟ್ ವೇತನವನ್ನು ಆ ತಿಂಗಳ ಕೊನೆಯ ವಾರದಲ್ಲೇ ಪಾವತಿಸಿದ್ದರು. ಆದರೆ, ಜಿಬಿಎ, ನಗರ ಪಾಲಿಕೆಗಳು ಅಸ್ತಿತ್ವಕ್ಕೆ ಬಂದು ಮೊದಲ ತಿಂಗಳ (ಸೆಪ್ಟೆಂಬರ್) ವೇತನವನ್ನು ಅಕ್ಟೋಬರ್ 4 ಕಳೆದರೂ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಪಾವತಿ ಮಾಡಿಲ್ಲ. ತುರ್ತು ನಿರ್ವಹಣೆ, ಸಿಬ್ಬಂದಿ ವೇತನಕ್ಕೆ ನಗರ ಪಾಲಿಕೆಗಳ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಲಾಗಿದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಹೇಳಿದ್ದಾರೆ.ಈ ಹಿಂದಿನ ವರ್ಷಗಳಲ್ಲಿ ಆಯುಧಪೂಜೆ ವೇಳೆ ಸಿಬ್ಬಂದಿಗೆ ಮುಂಗಡವಾಗಿ ವೇತನ ಪಾವತಿಸುವ ಪ್ರಕ್ರಿಯೆ ಇತ್ತು. ಆದರೆ, ಈ ಬಾರಿ ಆಯುಧಪೂಜೆ, ವಿಜಯ ದಶಮಿ ಮುಗಿದು ಹೋಗಿದ್ದರೂ ವೇತನ ಪಾವತಿಸಿಲ್ಲ ಎಂದು ಸಿಬ್ಬಂದಿ ದೂರಿದ್ದಾರೆ.

‘ಪಾಲಿಕೆಯ ಈ ಹಿಂದಿನ 10 ವರ್ಷಗಳಲ್ಲಿ ನೌಕರರಿಗೆ ಇಂತಹ ದಯನೀಯ ಸ್ಥಿತಿ ಎದುರಾಗಿರಲಿಲ್ಲ. ಸೆ.2ರಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾಗಿದೆ. ಈ ದಿನದವರೆಗೂ ಸೆಪ್ಟೆಂಬರ್ ವೇತನವನ್ನು ಪಾವತಿಸಲು ಕ್ರಮವಹಿಸಿಲ್ಲ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ-ನಗರ ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ.ಅಮೃತ್ ರಾಜ್ ಹೇಳಿದ್ದಾರೆ.

ತ್ವರಿತವಾಗಿ ಪಾವತಿಗೆ ಮನವಿ:

ಇನ್ನು ಮುಂದೆ ಸಹ ನಮ್ಮ ಕರ್ತವ್ಯ ನಿರ್ವಹಿಸುತ್ತೇವೆ. ಆದರೆ, ಬೆಂಗಳೂರಿನಂತಹ ಒಂದು ದೊಡ್ಡ ನಗರದಲ್ಲಿ ಸಮಯಕ್ಕೆ ಸರಿಯಾಗಿ ವೇತನ ಪಾವತಿಯಾಗದೆ ಇದ್ದಲ್ಲಿ ಹಲವಾರು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ದಯಮಾಡಿ ಪಾಲಿಕೆ ಉನ್ನತ ಅಧಿಕಾರಿಗಳು ಈ ವಿಷಯದ ಬಗ್ಗೆ ಗಮನಹರಿಸಿ ಸೆಪ್ಟೆಂಬರ್ ವೇತನವನ್ನು ತ್ವರಿತವಾಗಿ ಪಾವತಿಸಬೇಕು ಎಂದು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಿಗೆ ಸಂಘದ ಅಧ್ಯಕ್ಷ ಎ.ಅಮೃತ್‌ ರಾಜ್‌ ಮನವಿ ಸಲ್ಲಿಸಿದ್ದಾರೆ.

ಗಣತಿಗೆ ಲೆಕ್ಕ ಶಾಖೆ

ಸಿಬ್ಬಂದಿ: ಬಿಲ್‌ ಇಲ್ಲ

ಈ ಮಧ್ಯೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025ರ ಕಾರ್ಯಕ್ಕೆ ನಗರ ಪಾಲಿಕೆಗಳ ಬಿ ಮತ್ತು ಸಿ ದರ್ಜೆಯ ಸಿಬ್ಬಂದಿ ನಿಯೋಜಿಸಿದ್ದು ಪಾಲಿಕೆ ಯಾವ ಕಚೇರಿಯಲ್ಲೂ ಸಹ ವೇತನ ಬಿಲ್ಲನ್ನು ತಯಾರಿಸಲಾಗಿಲ್ಲ. ಆ ಬಿಲ್ಲನ್ನು ಪಾವತಿಸುವ ಬಗ್ಗೆ ಕ್ರಮವಹಿಸಲು ಲೆಕ್ಕ ಶಾಖೆಯಲ್ಲಿ ಸಿಬ್ಬಂದಿ ಇರುವುದಿಲ್ಲ. ಅವರೆಲ್ಲ ಚುನಾವಣೆ ಕರ್ತವ್ಯ, ಸಮೀಕ್ಷೆ ಕಾರ್ಯಗಳು ಮತ್ತು ಇತರೆ ಕೆಲಸಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ.