ಪೊಲೀಸ್‌ ಗುಂಡೇಟಿಗೆ ರೌಡಿಶೀಟರ್‌ ಬಲಿ

| Published : Oct 19 2025, 01:03 AM IST

ಪೊಲೀಸ್‌ ಗುಂಡೇಟಿಗೆ ರೌಡಿಶೀಟರ್‌ ಬಲಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಸಿಂದಗಿ ಬೈಕ್‌ ಸವಾರನಿಗೆ ಚಾಕು ತೋರಿಸಿ ದರೋಡೆ ಮಾಡಿದ್ದ ರೌಡಿಶೀಟರ್‌ವೊಬ್ಬ ಪೊಲೀಸರ ಗುಂಡಿಗೆ ಬಲಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ರಾಂಪೂರ ಗ್ರಾಮದ ಹೊರಭಾಗದಲ್ಲಿ ನಡೆದಿದೆ. ದೇವಣಗಾಂವ ಗ್ರಾಮದ ಯುನಸ್ ಇಕ್ಲಾಸ್ ಪಟೇಲ್ (35) ಗುಂಡಿಗೆ ಬಲಿಯಾದ ರೌಡಿಶೀಟರ್.

ಕನ್ನಡಪ್ರಭ ವಾರ್ತೆ ಸಿಂದಗಿ

ಬೈಕ್‌ ಸವಾರನಿಗೆ ಚಾಕು ತೋರಿಸಿ ದರೋಡೆ ಮಾಡಿದ್ದ ರೌಡಿಶೀಟರ್‌ವೊಬ್ಬ ಪೊಲೀಸರ ಗುಂಡಿಗೆ ಬಲಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ರಾಂಪೂರ ಗ್ರಾಮದ ಹೊರಭಾಗದಲ್ಲಿ ನಡೆದಿದೆ. ದೇವಣಗಾಂವ ಗ್ರಾಮದ ಯುನಸ್ ಇಕ್ಲಾಸ್ ಪಟೇಲ್ (35) ಗುಂಡಿಗೆ ಬಲಿಯಾದ ರೌಡಿಶೀಟರ್.

ನಟೋರಿಯಸ್ ಹಂತಕನಾಗಿದ್ದ ಯುನಸ್ ಪಟೇಲ್ ಶುಕ್ರವಾರ ಬೈಕ್‌ ಸವಾರನಿಗೆ ಚಾಕು ತೋರಿಸಿ ಆತನ ಬಳಿಯಿದ್ದ ₹ 25 ಸಾವಿರ ಹಣವನ್ನು ದರೋಡೆ ಮಾಡಿ, ಸ್ಕೂಟಿ ಸಮೇತ ಪರಾರಿಯಾಗಿದ್ದನು. ಈ ಕುರಿತು ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಬೈಕ್‌ ಸವಾರ ಪ್ರಕರಣ ದಾಖಲಿಸಿದ್ದ.

ಬಳಿಕ, ಆತನಿಗಾಗಿ ಶೋಧ ನಡೆಸಿದ್ದ ಪೊಲೀಸರು ಆರೋಪಿ ಯುನಸ್ ಆತನ ಸ್ವಗ್ರಾಮ ಆಲಮೇಲ ತಾಲೂಕಿನ ದೇವಣಗಾಂವ್ ಗ್ರಾಮದತ್ತ ತೆರಳುತ್ತಿರುವ ಮಾಹಿತಿ ಪಡೆದು ರಾಂಪುರ ಬಳಿ ಕಾದು ನಿಂತಿದ್ದರು. ಈ ವೇಳೆ ಪೊಲೀಸರು ಆರೋಪಿ ಯುನಸ್‌ನನ್ನು ಬಂಧಿಸಲು ಮುಂದಾಗಿದ್ದು, ಆಗ ಪೊಲೀಸ್‌ ಸಿಬ್ಬಂದಿಯ ಮೇಲೆಯೇ ಚಾಕುವಿನಿಂದ ಹಲ್ಲೆ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಆಯತಪ್ಪಿ ಬಿದ್ದ ಇನ್ಸ್‌ಪೆಕ್ಟರ್ ಪ್ರದೀಪ್ ತಳಕೇರಿ ಈ ವೇಳೆ ಎಚ್ಚರಿಕೆ ನೀಡಲು ಗಾಳಿಯಲ್ಲಿ ಗುಂಡು‌ ಹಾರಿಸಿದ್ದಾರೆ. ಆದರೂ ಯುನಸ್‌ ಶರಣಾಗದ ಹಿನ್ನೆಲೆಯಲ್ಲಿ ಆತ್ಮರಕ್ಷಣೆಗಾಗಿ ಕಾಲಿಗೆ ಗುಂಡು ಹಾರಿಸಿದ್ದಾರೆ.

ಬಳಿಕ ಕೆಳಗೆ ಬಿದ್ದಿದ್ದ ಆರೋಪಿಯನ್ನು ಸಿಂದಗಿ ತಾಲೂಕು ಅಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ, ನಂತರ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿತ್ತು. ಆಷ್ಟೊತ್ತಿಗಾಗಲೇ ಆರೋಪಿ ಯುನಸ್ ಮೃತಪಟ್ಟಿದ್ದಾಗಿ ಜಿಲ್ಲಾಸ್ಪತ್ರೆ ವೈದ್ಯರು ಸ್ಪಷ್ಟಪಡಿಸಿದರು.

ಬಳಿಕ ವಿಷಯ ತಿಳಿದು ಎಸ್ಪಿ ಲಕ್ಷ್ಮಣ ನಿಂಬರಗಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ಆರೋಪಿ ಯುನಸ್ ಮೇಲೆ ಎರಡು ಕೊಲೆ, ಒಂದು ಕೊಲೆ ಯತ್ನ ಸೇರಿದಂತೆ 12 ಪ್ರಕರಣಗಳಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ.