ಬೆಂಗಳೂರು : ₹5000 ಸಾಲ ವಾಪಸ್‌ ಕೇಳಿದ್ದಕ್ಕೆ ರೌಡಿ ಶೀಟರ್‌ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

| Published : Aug 25 2024, 01:49 AM IST / Updated: Aug 25 2024, 07:14 AM IST

Crime Scene
ಬೆಂಗಳೂರು : ₹5000 ಸಾಲ ವಾಪಸ್‌ ಕೇಳಿದ್ದಕ್ಕೆ ರೌಡಿ ಶೀಟರ್‌ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ
Share this Article
  • FB
  • TW
  • Linkdin
  • Email

ಸಾರಾಂಶ

ಹಣಕಾಸು ವಿಚಾರವಾಗಿ ರೌಡಿ ಶೀಟರ್‌ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಆರೋಪಿಗಳು ಪರಾರಿ ಆಗಿದ್ದಾರೆ.

 ಬೆಂಗಳೂರು : ಇತ್ತೀಚೆಗೆ ಹಣಕಾಸು ವಿಚಾರವಾಗಿ ರೌಡಿ ಶೀಟರ್‌ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದ ಪ್ರಕರಣ ಸಂಬಂಧ 8 ಮಂದಿ ಆರೋಪಿಗಳನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸಂಜೀವಿನಿನಗರ ನಿವಾಸಿಗಳಾದ ನಂದ, ಕಿರಿಣ್‌, ಶಿವು, ಮಾರುತಿ, ಸುನೀಲ್‌, ಶರತ್‌, ರಿತು ಹಾಗೂ ಮೂರ್ತಿ ಎಂಬುವವರನ್ನು ಬಂಧಿಸಲಾಗಿದೆ. ಆರೋಪಿಗಳು ಆ.22ರಂದು ಮುಂಜಾನೆ ಸುಮಾರು 2.15ಕ್ಕೆ ಸಹಕಾರನಗರ ಸಮೀಪದ ಸಂಜೀವಿನಿನಗರ 7ನೇ ಕ್ರಾಸ್‌ನಲ್ಲಿ ರೌಡಿ ಶೀಟರ್‌ ವಿಜಯ್‌ ಕುಮಾರ್‌(39) ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೈದು ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ನಡೆಸಿ 8 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಸಾಲ ವಾಪಾಸ್‌ ಕೇಳಿದ್ದಕ್ಕೆ ಜಗಳ:

ಕೊಡಿಗೇಹಳ್ಳಿ ಠಾಣೆ ರೌಡಿ ಶೀಟರ್‌ ಆಗಿರುವ ವಿಜಯ್‌ ಕುಮಾರ್‌ ಈ ಹಿಂದೆ ಆರೋಪಿ ಮೂರ್ತಿ ಬಳಿ 5000 ರು. ಸಾಲ ಪಡೆದುಕೊಂಡು ವಾಪಾಸ್‌ ನೀಡಿರಲಿಲ್ಲ. ಕೆಲ ದಿನಗಳ ಹಿಂದೆ ಏರಿಯಾದಲ್ಲಿ ನಡೆದ ಅಣ್ಣಮ್ಮದೇವಿ ಪೂಜೆಯಲ್ಲಿ ಆರೋಪಿಗಳು ಹಾಗೂ ವಿಜಯ್‌ ಕುಮಾರ್‌ ಭಾಗಿಯಾಗಿದ್ದರು. ಈ ವೇಳೆ ಮೂರ್ತಿ ಎಲ್ಲರ ಎದುರೇ 5000 ರು. ಸಾಲದ ಹಣ ವಾಪಾಸ್‌ ನೀಡುವಂತೆ ವಿಜಯ್‌ ಕುಮಾರ್‌ನನ್ನು ಕೇಳಿದ್ದಾನೆ. ಈ ವಿಚಾರವಾಗಿ ಆರೋಪಿಗಳು ಹಾಗೂ ವಿಜಯ್‌ ಕುಮಾರ್‌ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಈ ವೇಳೆ ಸ್ಥಳೀಯರು ಜಗಳ ಬಿಡಿಸಿ ಕಳುಹಿಸಿದ್ದಾರೆ.

ಮುಂಜಾನೆ ರಸ್ತೆಯಲ್ಲಿ ಹಲ್ಲೆಗೈದು ಪರಾರಿ: ಈ ನಡುವೆ ವಿಜಯ್‌ ಕುಮಾರ್‌ ಏರಿಯಾದಲ್ಲಿ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದ್ದ. ವಿನಾಕಾರಣ ಏರಿಯಾದ ಹುಡುಗರಿಗೆ ಆವಾಜ್‌ ಹಾಕಿ ಬೆದರಿಸುತ್ತಿದ್ದ. ಈತನ ವರ್ತನೆಯಿಂದ ಯುವಕರು ರೋಸಿ ಹೋಗಿದ್ದರು. ಆ.22ರಂದು ಮುಂಜಾನೆ ವಿಜಯ್‌ ಕುಮಾರ್‌ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ, ಕಾರೊಂದರಲ್ಲಿ ಬಂದ ಆರೋಪಿಗಳು ಏಕಾಏಕಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು.

ಬಳಿಕ ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ್ದ ಹೋಯ್ಸಳ ಪೊಲೀಸರು, ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿಜಯ್‌ ಕುಮಾರ್‌ನನ್ನು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು. ಈ ಸಂಬಂಧ ಗಾಯಾಳು ವಿಜಯ್‌ ಕುಮಾರ್‌ ತಾಯಿ ನೀಡಿದ ದೂರಿನ ಮೇರೆಗೆ ಕೊಡಿಗೇಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.