ಹಳೇ ದ್ವೇಷದ ಹಿನ್ನೆಲೆಯಲ್ಲಿ ರೌಡಿಶೀಟರ್‌ವೊಬ್ಬನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದ ಪ್ರಕರಣದ ಸಂಬಂಧ ಎಂಟು ಆರೋಪಿಗಳನ್ನು ಬಂಡೇಪಾಳ್ಯ ಠಾಣೆ ಪೊಲೀಸರು ಬಂಧಿಸಿದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಹಳೇ ದ್ವೇಷದ ಹಿನ್ನೆಲೆಯಲ್ಲಿ ರೌಡಿಶೀಟರ್‌ವೊಬ್ಬನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದ ಪ್ರಕರಣದ ಸಂಬಂಧ ಎಂಟು ಆರೋಪಿಗಳನ್ನು ಬಂಡೇಪಾಳ್ಯ ಠಾಣೆ ಪೊಲೀಸರು ಬಂಧಿಸಿದಾರೆ.ಹೊಸರೋಡ್ ನಿವಾಸಿ ಶಬ್ಬೀರ್ (29) ಎಂಬಾತನ ಕೊಲೆ ಮಾಡಿದ್ದ ಆರೋಪದ ಮೇಲೆ ಮಂಗಮ್ಮನಪಾಳ್ಯ ನಿವಾಸಿಗಳಾದ ನೂರುಲ್ಲಾ (33), ನದೀಮ್ (34), ಸಲ್ಮಾನ್ ಖಾನ್ (27), ಮೊಹಮ್ಮದ ಅಲಿ (29), ಸೈಯದ್ ಇಸ್ಮಾಯಿಲ್ (30), ಮೊಹಮ್ಮದ್ ಸಿದ್ದೀಕ್ (30), ಸೈಯದ್ ಕಲೀಮ್ (32) ಮತ್ತು ಉಮ್ರೇಜ್ ರೇಹಮಾನ್ (26) ಎಂಬ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಮ್ಮನಪಾಳ್ಯದ ಮುಖ್ಯರಸ್ತೆಯಲ್ಲಿ ಜ.12 ರಂದು ತಡರಾತ್ರಿ ಶಬ್ಬೀರ್‌ನನ್ನು ಕೊಲೆ ಮಾಡಲಾಗಿತ್ತು. ಮೃತ ಶಬ್ಬೀರ್ ತಂದೆ ಕೆಎಸ್‌ಆರ್‌ಪಿಯಲ್ಲಿ ಎಎಸ್‌ಐ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾಗಿದ್ದಾರೆ. ಶಬ್ಬೀರ್ ಹೊಸರೋಡ್‌ನ ಮನೆ ಸಮೀಪಲ್ಲೇ ಗುಜರಿ ಅಂಗಡಿ ಇಟ್ಟುಕೊಂಡಿದ್ದ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಂಬಂಧಿಕರೊಬ್ಬರು ಚಿಕಿತ್ಸೆಗೆ ದಾಖಲಾಗಿದ್ದರಿಂದ ಶಬ್ಬೀರ್ ಅವರನ್ನು ನೋಡಿಕೊಂಡು ತಡರಾತ್ರಿ 11 ಗಂಟೆ ಸುಮಾರಿಗೆ ಸ್ನೇಹಿತರ ಜತೆ ಆಟೋದಲ್ಲಿ ಮನೆಗೆ ಹೋಗುತ್ತಿದ್ದ. ಅದೇ ವೇಳೆ ಆರೋಪಿಗಳ ಗುಂಪು ಆಟೋ ನಿಲ್ಲಿಸಿ ಶಬ್ಬಿರ್ ಕಣ್ಣಿಗೆ ಕಾರದ ಪುಡಿ ಎರಚಿ, ಮಾರಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆ ನಡೆಸಿ, ಹತ್ಯೆಗೈದು ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.