ಲೋಕಭವನ (ರಾಜಭವನ) ಮತ್ತು ಆರೋಗ್ಯ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ 1.12 ಕೋಟಿ ರು. ವಂಚಿಸಲಾಗಿದ್ದು, ಈ ಸಂಬಂಧ ಸಿಸಿಬಿಯಲ್ಲಿ ಪ್ರಕರಣ ದಾಖಲಾಗಿದೆ
ಕನ್ನಡಪ್ರಭ ವಾರ್ತೆ ಬೆಂಗಳೂರು
ಲೋಕಭವನ (ರಾಜಭವನ) ಮತ್ತು ಆರೋಗ್ಯ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ 1.12 ಕೋಟಿ ರು. ವಂಚಿಸಲಾಗಿದ್ದು, ಈ ಸಂಬಂಧ ಸಿಸಿಬಿಯಲ್ಲಿ ಪ್ರಕರಣ ದಾಖಲಾಗಿದೆ. ಆರ್.ಟಿ.ನಗರ ನಿವಾಸಿ ಅಬ್ದುಲ್ ರಜಾಕ್ ಎಂಬುವರು ನೀಡಿದ ದೂರಿನ ಮೇರೆಗೆ ಸಿಸಿಬಿ ಪೊಲೀಸರು ರಾಜೇಂದ್ರ ಪ್ರಸಾದ್, ವಿಠಲ್ ಮೂಗೂರ, ಪ್ರಮೋದ್, ಸಿದ್ದಯ್ಯ ಮತ್ತು ಪುಟ್ಟಮಾದಯ್ಯ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ದೂರುದಾರರಿಗೆ ಸ್ನೇಹಿತರೊಬ್ಬರ ಮೂಲಕ ರಾಜೇಂದ್ರ ಪ್ರಸಾದ್ ಮತ್ತು ಇತರೆ ಆರೋಪಿಗಳು ಪರಿಚಯವಾಗಿದ್ದಾರೆ. ನಂತರ ನಿಮಗೂ ಹಾಗೂ ನಿಮ್ಮ ಸಂಬಂಧಿಕರು, ಸ್ನೇಹಿತರಿಗೆ ರಾಜಭವನದಲ್ಲಿ ಕಂಪ್ಯೂಟರ್ ಆಪರೇಟರ್ ಮತ್ತು ಆರೋಗ್ಯ ಇಲಾಖೆಯಲ್ಲಿ ಎಫ್‌ಡಿಎ ಮತ್ತು ಎಸ್‌ಡಿಎ ಹುದ್ದೆ ಕೊಡಿಸುವುದಾಗಿ ನಂಬಿಸಿದ್ದಾರೆ. ನಂತರ 2022ರಲ್ಲಿ ಎಂ.ಎಸ್. ಬಿಲ್ಡಿಂಗ್ ಬಳಿಯ ಪಾರ್ಕ್‌ನಲ್ಲಿ 50 ಸಾವಿರ ರು. ಪಡೆದು, ನಂತರ ಹಂತ-ಹಂತವಾಗಿ 2023ರವರೆಗೆ ರಾಜೇಂದ್ರ ಪ್ರಸಾದ್, 94.50 ಲಕ್ಷ ರು. ವಿಠಲ್ ಮೂಗೂರು 17.50 ಲಕ್ಷ ರು. ಸೇರಿ ಒಟ್ಟು 1.12 ಕೋಟಿ ರು. ಪಡೆದುಕೊಂಡಿದ್ದಾರೆ. ಆದರೆ, ಯಾವುದೇ ಕೆಲಸ ಕೊಡಿಸಿಲ್ಲ. ಹಣ ವಾಪಸ್ ಕೇಳಿದಾಗ ಆರೋಪಿಗಳು ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.