ಸಾರಾಂಶ
- ಹರಳಹಳ್ಳಿಯಲ್ಲಿ ಅಂಚೆ ಕಚೇರಿ ಶಾಖೆ ಉದ್ಘಾಟಿಸಿ ಸಂಸದೆ ಡಾ.ಪ್ರಭಾ ಹೇಳಿಕೆ
- - -ಕನ್ನಡಪ್ರಭ ವಾರ್ತೆ ಮಲೇಬೆನ್ನೂರು ಕೊನೆ ಭಾಗದ ಭದ್ರಾ ನಾಲೆಗಳ ದುರಸ್ತಿಪಡಿಸಲು ₹100 ಕೋಟಿ ಅನುದಾನ ಕೇಳಿದ್ದು, ಉಪ ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ಇಲ್ಲಿಗೆ ಸಮೀಪದ ಹರಳಹಳ್ಳಿ ಗ್ರಾಮದ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಸೋಮವಾರ ನೂತನ ಅಂಚೆ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು. ಮೊನ್ನೆ ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಸುವ ಸಂದರ್ಭ ಈ ಬಗ್ಗೆ ಮನವಿ ಸಲ್ಲಿಸಲಾಯಿತು. ಆಗ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಾಲೆಗಳ ದುರಸ್ತಿಗೆ ಅನುದಾನ ನೀಡಲು ಒಪ್ಪಿದ್ದಾರೆ. ರೈತರು ಆತಂಕಪಡುವ ಕಾರಣವಿಲ್ಲ ಎಂದರು.ಅಂಚೆ ಇಲಾಖೆ ಸಿಬ್ಬಂದಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿ ಸೌಲಭ್ಯಗಳನ್ನು ಮಹಿಳಾ ಸಂಘಗಳಿಗೆ, ವಿದ್ಯಾರ್ಥಿ ಸಮೂಹಕ್ಕೆ ನಾಗರೀಕರ ಮನೆ ಬಾಗಿಲಿಗೆ ತಲುಪಿಸುವ ಡೈನಾಮಿಕ್ ಕಾರ್ಯ ಇಲಾಖೆಯಿಂದ ನಡೆಯಬೇಕಿದೆ. ಇಲಾಖೆ ಸೌಲಭ್ಯಗಳ ಮಾಹಿತಿ ಜನತೆಗೆ ಕಾಣುವಂತೆ ಫಲಕ ಪ್ರದರ್ಶಿಸಬೇಕು. ಕನ್ನಡ ಬಳಕೆಯೂ ಆಗಬೇಕು ಎಂದು ಸೂಚಿಸಿದರು.
ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಅಂಚೆ ಇಲಾಖೆ ಸಿಬ್ಬಂದಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ತಿಳಿಸಬೇಕು. ಆ ಮೂಲಕ ಪ್ರಾಮಾಣಿಕತೆ, ದಕ್ಷತೆಯಿಂದ ಸೇವೆ ಸಲ್ಲಿಸಬೇಕು ಎಂದರು.ಉಪ ಅಂಚೆ ಅಧೀಕ್ಷಕ ನರೇಂದ್ರ ನಾಯ್ಕ್ ಮಾತನಾಡಿ, ಭಾರತದಲ್ಲಿ ೧೮೫೪ ರಲ್ಲಿ ಅಂಚೆ ಸೇವೆ ಆರಂಭವಾಗಿದೆ. ಅಂದು ಪತ್ರ ತಲುಪಿಸಲು ಸೀಮಿತವಾಗಿದ್ದು, ೧೭೧ ವರ್ಷಗಳ ಇತಿಹಾಸ ಹೊಂದಿದೆ. ಪ್ರಸ್ತುತ ಲಕ್ಷ ಗ್ರಾಮೀಣ ಭಾಗದಲ್ಲಿ ಒಂದೂವರೆ ಲಕ್ಷ ಅಂಚೆ ಕಚೇರಿಗಳಲ್ಲಿ ₹5 ಲಕ್ಷ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಅಂಚೆ ಉಳಿತಾಯ, ಆವರ್ತಕ ಠೇವಣಿ, ಸುಕನ್ಯಾ ಸಮೃದ್ಧಿ ಖಾತೆ, ಮಹಿಳಾ ಸಮ್ಮಾನ್ ಉಳಿತಾಯ ಪತ್ರ, ಹಿರಿಯ ನಾಗರೀಕರ ಉಳಿತಾಯ, ಮಾಸಿಕ ವರಮಾನ ಯೋಜನೆಯು ಇಲಾಖೆಯಲ್ಲಿ ಜಾರಿಯಲ್ಲಿದೆ ಎಂದರು.
ಅಂಚೆ ಅಧೀಕ್ಷಕ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಹರಿಹರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎನ್.ಎಚ್. ಶ್ರೀನಿವಾಸ್, ಗ್ರಾಪಂ ಅಧ್ಯೆಕ್ಷೆ ಲಕ್ಷ್ಮೀ, ಉಪಾಧ್ಯಕ್ಷೆ ಜಯಮ್ಮ, ಜಿ.ಮಂಜುನಾಥ್, ಅಬಿದ್ ಅಲಿ, ಜನಪ್ರನಿಧಿಗಳಾದ ಹನುಮಂತಪ್ಪ, ಶ್ರೀನಿವಾಸ್, ಫಕ್ಕೀರಪ್ಪ, ದೇವಕಿ, ರೂಪ, ವಿಮಾ ಅಭಿವೃದ್ಧಿ ಅಧಿಕಾರಿ ಮಹೇಶ್, ಮಾರುಕಟ್ಟೆ ಅಧಿಕಾರಿ ಸಂತೋಷ್ ಹಾಗೂ ಗ್ರಾಪಂ ಸದಸ್ಯರು, ಅಂಚೆ ಪಾಲಕರು ಇದ್ದರು.- - -
-ಚಿತ್ರ೧: ಹರಳಹಳ್ಳಿಯಲ್ಲಿ ಅಂಚೆ ಕಚೇರಿಯನ್ನು ಸಂಸದೆ ಡಾ.ಪ್ರಭಾ ಉದ್ಘಾಟಿಸಿದರು.