ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ 100 ಅಡಿ ರಸ್ತೆ ಅಭಿವೃದ್ಧಿಗೆ ಸರ್ಕಾರಕ್ಕೆ 175 ಕೋಟಿ ರು. ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ಮಂಗಳವಾರ ಹೇಳಿದರು.ಪಟ್ಟಣದ ನಗರಸಭಾ ಕಚೇರಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಮದ್ದೂರು ಪಟ್ಟಣದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಪ್ರವಾಸಿ ಮಂದಿರದಿಂದ ಕೊಲ್ಲಿ ವೃತ್ತದವರೆಗೆ 2.5 ಕಿ.ಮೀ ರಸ್ತೆಯನ್ನು 100 ಅಡಿ ರಸ್ತೆಯನ್ನಾಗಿ ಅಭಿವೃದ್ಧಿ ಮಾಡಲು ಸರ್ಕಾರಕ್ಕೆ 175 ಕೋಟಿ ರು. ಪ್ರಸ್ತಾವನೆ ಸಲ್ಲಿಸಲಾಗಿದೆ. ಒಂದು ತಿಂಗಳಲ್ಲಿ ತಾಂತ್ರಿಕ ಅನುಮೋದನೆ ದೊರಕಲಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅನುದಾನ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದರು.
ಮದ್ದೂರು ಪುರಸಭೆಯನ್ನು ನಗರಸಭೆಯನ್ನಾಗಿ ರಾಜ್ಯ ಸರ್ಕಾರ ಮೆಲ್ದರ್ಜೆಗೆರಿಸಿದೆ. ಹೀಗಾಗಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಸರ್ಕಾರಕ್ಕೆ ವಿಶೇಷ ಅನುದಾನಕ್ಕೆ ಮನವಿ ಮಾಡಲಾಗಿದೆ. ಇನ್ನು ಎರಡು-ಮೂರು ತಿಂಗಳಲ್ಲಿ 50 ಕೋಟಿಗೂ ಹೆಚ್ಚಿನ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗುವುದು ಎಂದು ಸಭೆಗೆ ತಿಳಿಸಿದರು.ಪಟ್ಟಣವನ್ನು ಸೌಂದರ್ಯಕರಣ ಮತ್ತು ಕ್ಲೀನ್ ಸಿಟಿ ಮಾಡಲು ರೂಪುರೇಷೆ ಸಿದ್ಧವಾಗುತ್ತಿದೆ. ಹೂ, ಹಣ್ಣು ಹಾಗೂ ತರಕಾರಿಗಳನ್ನು ಒಂದೇ ಕಡೆ ಮಾರಾಟ ಮಾಡಲು ಹಳೇ ಬಸ್ ನಿಲ್ದಾಣದ ಬಳಿ ಬೃಹತ್ ಮಾರುಕಟ್ಟೆ ಸಂಕೀರ್ಣ ನಿರ್ಮಿಸಲಾಗುವುದು. ಮಟನ್, ಚಿಕನ್ ಮತ್ತು ಮೀನು ಮಾರಾಟ ಮಾಡಲು ಶಿವಪುರದಲ್ಲಿ ಮಾರುಕಟ್ಟೆ ನಿರ್ಮಾಣಕ್ಕೆ ಈಗಾಗಲೇ ಯೋಜನೆ ರೂಪಿಸಲಾಗಿದೆ. ಅಲ್ಲಿ ಬಿಟ್ಟು ಬೇರೆ ಎಲ್ಲೂ ವ್ಯಾಪಾರ ಮಾಡಲು ಅನುಮತಿ ನೀಡುವುದಿಲ್ಲ ಎಂದರು.
ಪೇಟೆ ಬೀದಿ ಅಗಲೀಕರಣದ ಬಳಿಕ ಪುಟ್ ಪಾತ್ ವ್ಯಾಪಾರವನ್ನು ಸಂಪೂರ್ಣವಾಗಿ ನಿಷೇಧಿಸಿ ಅವರಿಗೂ ಸಹ ಒಂದೇ ಕಡೆ ವ್ಯಾಪಾರ ವಹಿವಾಟು ನಡೆಸಲು ಅವಕಾಶ ಕಲ್ಪಿಸಲಾಗುವುದು. ರಸ್ತೆ ಅಗಲೀಕರಣದ ಸಂಬಂಧ ಸರ್ಕಾರದಿಂದ ಅನುದಾನ ಬಿಡುಗಡೆ ನಂತರ ಪಟ್ಟಣ ವ್ಯಾಪ್ತಿ ಜನಪ್ರತಿನಿಧಿಗಳ ಸಭೆ ನಡೆಸಿ ಚರ್ಚೆ ನಡೆಸಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.ಈಗಾಗಲೇ ಕೆಮ್ಮಣ್ಣು ನಾಲೆ ಆಧುನೀಕರಣ ಕಾಮಗಾರಿ ನಡೆಯುತ್ತಿದೆ. ಪಟ್ಟಣದ ಚರಂಡಿ ಮತ್ತು ಒಳಚರಂಡಿ ನೀರು ಕೆಮ್ಮಣ್ಣು ನಾಲೆಗೆ ಸೇರದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಮುಖ್ಯರಸ್ತೆ ಕೂಡ ಸಾಕಷ್ಟು ಅದ್ವಾನಗೊಂಡಿದ್ದು, ಗುಂಡಿ ಮುಚ್ಚುವ ಕೆಲಸವನ್ನು ಶೀಘ್ರವೇ ತಾತ್ಕಾಲಿಕವಾಗಿ ಮಾಡಲಾಗುವುದು ಎಂದರು.
ಸರ್ಕಾರಿ ಹೈಸ್ಕೂಲ್ ವೃತ್ತದಿಂದ ಕರ್ನಾಟಕ ಟಾಕೀಸ್ ರಸ್ತೆ ಮೂಲಕ ಗೊರವನಹಳ್ಳಿಗೆ ಹೋಗುವ ರಸ್ತೆಯನ್ನು ಅಭಿವೃದ್ಧಿ ಮಾಡಲು ಕ್ರಮ ಕೈಗೊಂಡಿದ್ದು, ಶೀಘ್ರ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.ಪಟ್ಟಣದ ಪ್ರಮುಖ ವೃತ್ತಗಳಲ್ಲಿ ನಾಡಪ್ರಭು ಕೆಂಪೇಗೌಡ, ಅಮರಶಿಲ್ಪಿ ಜಕಣಾಚಾರಿ, ಬಸವಣ್ಣ, ಕನಕದಾಸ, ಬಾಲಗಂಗಾಧರನಾಥ ಸ್ವಾಮೀಜಿ ಸೇರಿದಂತೆ ಹಲವು ಗಣ್ಯರ ಪುತ್ಥಳಿಯನ್ನು ನಿರ್ಮಿಸುವ ಸಂಬಂಧ ನಡೆದ ಚರ್ಚೆಯಲ್ಲಿ ರಸ್ತೆ ಅಗಲೀಕರಣಗೊಂಡ ಬಳಿಕ ಒಂದೊಂದು ವೃತ್ತಕ್ಕೆ ಮಹನೀಯರ ಪುತ್ತಳಿ ನಿರ್ಮಿಸಲು ಸಭೆಯಲ್ಲಿ ಅನುಮೋದನೆ ಪಡೆಯಲಾಯಿತು.
ನಗರಸಭೆಯಿಂದ ಯಾವುದೇ ಅನುದಾನ ಪಡೆಯದೇ ಪಟ್ಟಣದ ಅಭಿವೃದ್ಧಿಗೆ ಮುಂದಾಗಿದ್ದೇನೆ. ವಿಪಕ್ಷ ಜನಪ್ರತಿನಿಧಿಗಳ ವಾರ್ಡ್ ಗಳ ಹೆಚ್ಚಿನ ಅಭಿವೃದ್ಧಿಗೂ ಮುಂದಾಗಿದ್ದೇನೆ. ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡುತ್ತಿಲ್ಲ ಎಂದರು.ಪಟ್ಟಣದ ವ್ಯಾಪ್ತಿಯಲ್ಲಿ ನಾಯಿಗಳು ಕಚ್ಚಿ ಗಂಭೀರವಾಗಿ ಗಾಯಗೊಂಡವರಿಗೆ ಚಿಕಿತ್ಸೆ ಪಡೆದುಕೊಳ್ಳಲು ಪುರಸಭೆಯಿಂದ 10 ಸಾವಿರ ರು. ಚಿಕಿತ್ಸಾ ವೆಚ್ಚ ನೀಡುವಂತೆ ಸದಸ್ಯರಾದ ಎಂ.ಐ.ಪ್ರವೀಣ್, ಎಂ.ಬಿ.ಸಚಿನ್ ಸಭೆಗೆ ತಿಳಿಸಿದರು. ಇದಕ್ಕೆ ಸಭೆಯು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿತು.
ನಗರ ಸಭೆಯಲ್ಲಿರುವ ಶವ ಸಾಗಿಸುವ ವಾಹನಕ್ಕೆ ಸಾರ್ವಜನಿಕರಿಂದ ಡಿಸೇಲ್ ಹಣವನ್ನು ಕೇಳದೆ ಉಚಿತವಾಗಿ ವಾಹನ ಕಳುಹಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಂತೆ ಸದಸ್ಯ ಎಂ.ಬಿ.ಸಚಿನ್ ಸಭೆಗೆ ತಿಳಿಸಿದರು. ಈ ವಿಚಾರವಾಗಿ ಶಾಸಕ ಕೆ.ಎಂ.ಉದಯ್ ಹಾಗೂ ಅಧ್ಯಕ್ಷೆ ಕೋಕಿಲಾ ಅರುಣ್ ಕೂಡ ಒಪ್ಪಿಗೆ ಸೂಚಿಸಿದರು.ಪಟ್ಟಣ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಎಬಿಸಿ ಮಾಡುವುದು, 23 ವಾರ್ಡ್ ಗಳಿಗೆ ಎಲ್.ಇ.ಡಿ ಬೀದಿ ದೀಪ ಅಳವಡಿಸುವ ಬಗ್ಗೆ ತೀರ್ಮಾನಿಸಿ ಕ್ರಮ ಕೈಗೊಳ್ಳಲಾಯಿತು. ಸಭೆಯಲ್ಲಿ ಇನ್ನು ಹಲವು ಕಾಮಗಾರಿಗಳ ಸಂಬಂಧ ಅನುದಾನ ಮತ್ತು ವಿಷಯಗಳಿಗೆ ಒಪ್ಪಿಗೆ ಸೂಚಿಸಲಾಯಿತು.
ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷ ಪ್ರಸನ್ನಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷೆ ವನಿತಾ, ಪ್ರಭಾರ ಪೌರಾಯುಕ್ತ ಪರಶುರಾಮ್ ಸತ್ತಿಗೇರಿ, ಸದಸ್ಯರಾದ ಎಂ.ಐ.ಪ್ರವೀಣ್, ಸಚಿನ್, ಮಹೇಶ್, ಸಿದ್ದರಾಜು, ಸುರೇಶ್ ಕುಮಾರ್, ಕಮಲ್ ನಾಥ್, ಲತಾ ರಾಮು, ಸರ್ವಮಂಗಳ, ಪ್ರಮೀಳಾ, ಮೋಹನ್, ವ್ಯವಸ್ಥಾಪಕ ಶ್ರೀಧರ್ ಮತ್ತಿತರರು ಇದ್ದರು.