ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಸಿ
ಶಿರಸಿ-ಸಿದ್ದಾಪುರ ತಾಲೂಕಿನ ಸಾರ್ವಜನಿಕರ ಸಹಕಾರದಿಂದ ಶಾಸಕನಾಗಿ ೧೦ ತಿಂಗಳು ಕಳೆದಿದ್ದು, ಕ್ಷೇತ್ರದ ಅಭಿವೃದ್ಧಿಗೆ ₹೧೯೪ ಕೋಟಿ ಅನುದಾನ ರಾಜ್ಯದ ಕಾಂಗ್ರೆಸ್ ಸರ್ಕಾರ ಬಿಡುಗಡೆ ಮಾಡಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಕ್ಷೇತ್ರದ ಪ್ರತಿ ಗ್ರಾಪಂಗೂ ಭೇಟಿ ನೀಡಿ, ಅಲ್ಲಿನ ಜನರ ಸಮಸ್ಯೆ ಆಲಿಸಿ, ಪರಿಹಾರ ದೊರಕಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಶಿರಸಿ ನಗರ ಹಾಗೂ ಸಿದ್ದಾಪುರ ಪಟ್ಟಣ ಪಂಚಾಯಿತಿಯ ಪ್ರತಿ ವಾರ್ಡ್‌ಗಳಿಗೂ ಭೇಟಿ ನೀಡಿ, ಅಭಿವೃದ್ಧಿ ಕುರಿತು ಚರ್ಚೆ ನಡೆಸಿದ್ದೇನೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶಕ್ತಿಮೀರಿ ಕೆಲಸ ಮಾಡುವ ಜತೆ ಸಾಕಷ್ಟು ಅನುದಾನ ತರುವಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದರು.
ಶಿರಸಿ ನಗರಕ್ಕೆ ಕುಡಿಯುವ ನೀರಿನ ಯೋಜನೆಗೆ ₹೬೫ ಕೋಟಿ, ಮುಖ್ಯಮಂತ್ರಿ ವಿಶೇಷ ಅನುದಾನ ₹೨೫ ಕೋಟಿ, ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ₹೫ ಕೋಟಿ, ಸಣ್ಣ ನೀರಾವರಿ ಇಲಾಖೆಗೆ ₹೫ ಕೋಟಿ, ಎಪಿಎಂಸಿಗೆ ₹೨.೫ ಕೋಟಿ ಲೋಕೋಪಯೋಗಿ ಇಲಾಖೆಗೆ ₹೬೯ ಕೋಟಿ, ಗ್ರಾಮೀಣ ಭಾಗದಲ್ಲಿ ಕಾಲು ಸಂಕ ನಿರ್ಮಾಣಕ್ಕೆ ₹೨೯ ಕೋಟಿ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾಮಗಾರಿಗಳಿಗೆ ಒಟ್ಟು ₹೧೯೪ ಕೋಟಿ ಹಣ ನನ್ನ ಕ್ಷೇತ್ರಕ್ಕೆ ಬಂದಿದೆ. ಇನ್ನೂ ಕೆಲವು ಅನುದಾನ ಸರ್ಕಾರದ ಕಾರ್ಯದರ್ಶಿ ಹಂತದಲ್ಲಿ ಅನುಮೋದನೆಯಲ್ಲಿದೆ ಎಂದು ಹೇಳಿದರು.ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದ ಕಾಂಗ್ರೆಸ್ ಸರ್ಕಾರ ಒಳ್ಳೆಯ ಆಡಳಿತ ನೀಡುತ್ತಿದ್ದು, ಅಧಿಕಾರಕ್ಕೆ ಬಂದ ೧೦೦ ದಿನಗಳಲ್ಲಿ ೫ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಹಾಗೂ ಬಡವರ ಪರವಾಗಿ ಸದಾ ಇರುತ್ತದೆ ಎಂದರು.
ಬಿಜೆಪಿ ಗ್ಯಾರಂಟಿ ಕುರಿತು ಇಲ್ಲಸಲ್ಲದ ಆರೋಪ ಮಾಡಿ, ಸರ್ಕಾರ ಬಳಿ ಹಣವಿಲ್ಲ. ಲೋಕಸಭಾ ಚುನಾವಣೆಯ ನಂತರ ಎಲ್ಲ ಗ್ಯಾರಂಟಿಗಳು ಬಂದ್ ಆಗಲಿವೆ ಎಂದು ವಿರೋಧ ಪಕ್ಷ ಆರೋಪ ಮಾಡುತ್ತಿದೆ. ಯಾವ ಗ್ಯಾರಂಟಿಯೂ ಬಂದ್ ಆಗುವುದಿಲ್ಲ. ಅಧಿಕಾರಕ್ಕೆ ಬಂದ ೧೦೦ ದಿನದಲ್ಲಿ ೫ ಗ್ಯಾರಂಟಿ ಜಾರಿಗೊಳಿಸಿದೆ. ಸರ್ಕಾರದಲ್ಲಿ ಹಣವಿಲ್ಲ. ಲೋಕಸಭಾ ಚುನಾವಣೆ ನಂತರ ಎಲ್ಲವೂ ಬಂದ್ ಆಗಿದೆ ಎಂದು ಹೇಳುತ್ತಿದೆ. ಕಾಂಗ್ರೆಸ್ ನೀಡಿದ ಆಶ್ವಾಸನೆ ಯಾವಾಗಲೂ ಹುಸಿ ಮಾಡಿಲ್ಲ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಾಕಿ ಉಳಿದಿದ್ದ ಗುತ್ತಿಗೆದಾರರ ಹಣ ಹಂತ ಹಂತವಾಗಿ ಪಾವತಿಸುತ್ತಿದೆ. ಕಾಂಗ್ರೆಸ್‌ನಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದ ಸಂದರ್ಭದಲ್ಲಿ ಯಾವ ಘನಂದಾರಿ ಕೆಲಸ ಮಾಡಿದೆ ಎಂಬುದನ್ನು ಸಾರ್ವಜನಿಕರಿಗೆ ತಿಳಿಸಲಿ ಎಂದು ಸವಾಲು ಹಾಕಿದರು.ಕಾಂಗ್ರೆಸ್‌ನ ಗ್ಯಾರಂಟಿಯನ್ನು ಬಿಜೆಪಿ ನಕಲು ಮಾಡುತ್ತಿದೆ. ಮೋದಿ ಗ್ಯಾರಂಟಿ ಎಂದು ಹೇಳುತ್ತಿದೆ. ಚುನಾವಣೆ ಸಮೀಪಿಸುತ್ತಿರುವಾಗ ಬಿಜೆಪಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತದೆ. ಕೇಂದ್ರ ಸರ್ಕಾರ ಹೊಸ ಯೋಜನೆ ತರದೇ, ಕಾಂಗ್ರೆಸ್ ಸರ್ಕಾರದ ಹಳೆಯ ಯೋಜನೆಯನ್ನು ಮುಂದುವರಿಸುತ್ತಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಅಡಕೆ ಧಾರಣೆ ಕುಸಿಯುತ್ತಿದ್ದು, ನಮ್ಮ ರಾಜ್ಯದ ಬಿಜೆಪಿ ಸಂಸದರ ಯಾಕೆ ಮಾತನಾಡುತ್ತಿಲ್ಲ? ಕಾಂಗ್ರೆಸ್ ಕೇಂದ್ರದಲ್ಲಿದ್ದಾಗ ಒಳ್ಳೆಯ ಕೆಲಸ ನೀಡಿದೆ. ರಾಜ್ಯದಲ್ಲಿ ಹಿಂದೆಯೂ ನೀಡಿತ್ತು. ಈಗಲೂ ನೀಡುತ್ತಿದೆ ಎಂದು ಹೇಳಿದರು.ಶಿರಸಿ- ಸಿದ್ದಾಪುರ ತಾಲೂಕಿನಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಬಾರದು ಎಂದು ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ. ಜಾತ್ರೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಅವಶ್ಯವಾಗಲಿದ್ದು, ಶಿರಸಿಯಲ್ಲಿ ಬೋರ್‌ವೆಲ್ ಮೂಲಕ ನೀರು ಪೂರೈಕೆ ಮಾಡಲಾಗುತ್ತದೆ ಎಂದರು.
ಶಿರಸಿ ನಗರದಲ್ಲಿ ಒಳಚರಂಡಿ ಯೋಜನೆ ಅನುಷ್ಠಾನಕ್ಕೆ ತರಬೇಕು ಎಂಬ ಯೋಚನೆಯಿದ್ದು, ಇದರಿಂದ ಚರಂಡಿ ನೀರು ಕುಡಿಯುವ ನೀರಿನ ಬಾವಿ ಸೇರುವುದು ತಪ್ಪುತ್ತದೆ. ಮುಂದುವರಿದ ತಂತ್ರಜ್ಞಾನ ಉಪಯೋಗಿಸಿಕೊಂಡು ಒಳಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದರು.ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸಾಕಷ್ಟು ಆಕಾಂಕ್ಷಿಗಳು ಇದ್ದಾರೆ. ಮುಖಂಡರ ಅಭಿಪ್ರಾಯ ಪಡೆದು ಹೈಕಮಾಂಡ್ ಅಂತಿಮ ತೀರ್ಮಾನ ಮಾಡುತ್ತದೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಹಿಂದೇಟು ಹಾಕುತ್ತಿಲ್ಲ. ಒಳ್ಳೆಯ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುತ್ತದೆ ಎಂದರು.
ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಕಾಂಗ್ರೆಸ್‌ಗೆ ವಾಪಸಾಗುವುದಕ್ಕೆ ನನ್ನ ವೈಯಕ್ತಿಕ ವಿರೋಧವಿಲ್ಲ. ಕಾಂಗ್ರೆಸ್ ಕಾರ್ಯಕರ್ತರಿಗೆ ಮೋಸ ಮಾಡಿ, ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇದರಿಂದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ನೋವಿದೆ. ಅವರ ನೋವು, ಅಸಮಾಧಾನವನ್ನು ಪಕ್ಷದ ವರಿಷ್ಠರಿಗೆ ತಿಳಿಸಿದ್ದೇನೆ. ಅವರನ್ನು ತೆಗೆದುಕೊಳ್ಳುವುದು, ಬಿಡುವುದು ಅವರಿಗೆ ಬಿಟ್ಟ ವಿಚಾರ ಎಂದರು.ಸುದ್ದಿಗೋಷ್ಠಿಯಲ್ಲಿ ಶಿರಸಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಪ್ರಮುಖರಾದ ದೀಪಕ ಹೆಗಡೆ ದೊಡ್ಡೂರು, ಖಾದರ್ ಆನವಟ್ಟಿ, ಪ್ರಸನ್ನ ನಾಯ್ಕ, ಪ್ರಸನ್ನ ಶೆಟ್ಟಿ ಇತರರು ಇದ್ದರು.