ಇಲ್ಲಿನ ನಗರಸಭೆ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ, ಕುಣಿಕೇರಿ ಗ್ರಾಮ ಪಂಚಾಯಿತಿ ಅಕ್ರಮ ಬೆಳಕಿಗೆ ಬಂದ ಬೆನ್ನಲ್ಲೇ ತಾಲೂಕಿನ ಇಂದರಗಿ ಪಂಚಾಯಿತಿಯಲ್ಲಿ ಬೋಗಸ್ ಬಿಲ್ ಸೃಷ್ಟಿಸಿ, ಕಳಪೆ ಕಾಮಗಾರಿ ಮಾಡಿ, ಲಕ್ಷಾಂತರ ಅವ್ಯವಹಾರ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಸೋಮರಡ್ಡಿ ಅಳವಂಡಿ
ಕೊಪ್ಪಳ: ಇಲ್ಲಿನ ನಗರಸಭೆ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ, ಕುಣಿಕೇರಿ ಗ್ರಾಮ ಪಂಚಾಯಿತಿ ಅಕ್ರಮ ಬೆಳಕಿಗೆ ಬಂದ ಬೆನ್ನಲ್ಲೇ ತಾಲೂಕಿನ ಇಂದರಗಿ ಪಂಚಾಯಿತಿಯಲ್ಲಿ ಬೋಗಸ್ ಬಿಲ್ ಸೃಷ್ಟಿಸಿ, ಕಳಪೆ ಕಾಮಗಾರಿ ಮಾಡಿ, ಲಕ್ಷಾಂತರ ಅವ್ಯವಹಾರ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಕಾಮಗಾರಿಗೂ ಬಿಲ್ ಪಾವತಿಗೂ ವ್ಯತ್ಯಾಸ ಕಂಡುಬಂದಿದೆ. ಅಲ್ಲದೇ, ಪದೇ ಪದೆ ಒಂದೇ ಏಜೆನ್ಸಿಗೆ ಬಿಲ್ ಪಾವತಿಸಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.ತನಿಖಾ ವರದಿಯಲ್ಲಿ ಪ್ರಶ್ನಿಸಲಾಗಿರುವ ವಿವಿಧ ವೆಚ್ಚಗಳ ಮೊತ್ತ ₹23,39,991 ಆಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗರಾಜ್ ಎಸ್.ಎಚ್. ಅವರನ್ನು ಅಮಾನತುಗೊಳಿಸಲಾಗಿದೆ.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮಾನತು ಆದೇಶ ಹೊರಡಿಸಿದ್ದು, ಪಿಡಿಒ ವಿರುದ್ಧ ಇಲಾಖಾ ವಿಚಾರಣೆ ಕಾಯ್ದಿರಿಸಲಾಗಿದೆ. ತನಿಖೆಯಲ್ಲಿ ಬೆಳಕಿಗೆ ಬಂದ ಅಕ್ರಮಗಳ ಕುರಿತು ನೀಡಲಾದ ನೋಟಿಸ್‌ಗೆ ಸಮರ್ಪಕ ಉತ್ತರ ನೀಡದಿರುವುದರಿಂದ ಪಿಡಿಒ ನಾಗರಾಜ್ ಅಮಾನತ್ತು ಮಾಡಿ ತನಿಖೆ ಮುಂದುವರಿಸಲಾಗಿದೆ.₹23.40 ಲಕ್ಷ ವೆಚ್ಚ
2020-21ರಿಂದ 2024-25ರ ವರೆಗೆ ನಡೆದಿರುವ ವಿವಿಧ ವೆಚ್ಚಗಳ ಕುರಿತು ತನಿಖಾ ವರದಿಯಲ್ಲಿ ಆಕ್ಷೇಪ ವ್ಯಕ್ತವಾಗಿದೆ. ಕುಡಿಯುವ ನೀರಿನ ಸಾಮಗ್ರಿಗೆ ₹85,083, ಸೋಲಾರ್ ಸ್ಟ್ರೀಟ್‌ಲೈಟ್‌ಗೆ ₹1.50 ಲಕ್ಷ, ಕುಡಿಯುವ ನೀರಿನ ನಿರ್ವಹಣೆಗೆ ₹99,942, ಕಸ ವಿಲೇವಾರಿಗೆ ₹3 ಲಕ್ಷ, ಮತ್ತೊಂದು ಕುಡಿಯುವ ನೀರಿನ ಕಾಮಗಾರಿಗೆ ₹2,96,990 ವೆಚ್ಚ ಮಾಡಲಾಗಿದೆ.ಇದೇ ರೀತಿ ಘನತ್ಯಾಜ್ಯ ವಿಲೇವಾರಿ ವಾಹನಕ್ಕೆ ₹1.50 ಲಕ್ಷ, ಮನೆ-ಮನೆ ಕಸ ಸಂಗ್ರಹಣೆಗೆ ಬುಟ್ಟಿಗಳಿಗೆ ₹1.20 ಲಕ್ಷ, ನೈರ್ಮಲೀಕರಣ ಸೇವೆಗೆ ₹1,09,284, ವಿಕಲಚೇತನರ ಕಲ್ಯಾಣ ಅನುದಾನದಿಂದ ₹84,415, ಗ್ರಂಥಾಲಯಕ್ಕೆ ₹70 ಸಾವಿರ ಹಾಗೂ ಸಿಸಿ ಕ್ಯಾಮೆರಾ ಅಳವಡಿಕೆಗೆ ₹67,443 ವೆಚ್ಚ ಮಾಡಿರುವುದು ತನಿಖೆಯಲ್ಲಿ ಉಲ್ಲೇಖವಾಗಿದೆ.
ಒಂದೇ ಏಜೆನ್ಸಿಗೆ ಮರು ಪಾವತಿ2022-23ರಲ್ಲಿ ಕುಡಿಯುವ ನೀರಿನ ಸಾಮಗ್ರಿ ಹಾಗೂ ಇತರ ವಸ್ತುಗಳ ಖರೀದಿಗೆ ಒಂದೇ ಏಜೆನ್ಸಿಗೆ ವಿವಿಧ ಹಂತಗಳಲ್ಲಿ ₹8,06,834 ಪಾವತಿಸಿರುವುದನ್ನೂ ತನಿಖೆಯಲ್ಲಿ ಪ್ರಶ್ನಿಸಲಾಗಿದೆ. ₹5,37,769, ₹61,304, ₹69,193, ₹99,891 ಹಾಗೂ ₹38,677 ಪಾವತಿ ಮಾಡಲಾಗಿದೆ. ಖರೀದಿ ಪ್ರಕ್ರಿಯೆಯಲ್ಲಿ ನಿಯಮ ಪಾಲನೆಯಾಗಿಲ್ಲ ಎನ್ನುವ ಆರೋಪ ಬಲವಾಗಿ ಕಂಡುಬಂದಿದೆ.
ವಿಕಲಚೇತನರ ಕಲ್ಯಾಣಕ್ಕಾಗಿ ಮೀಸಲಾದ ₹84,415 ಅನುದಾನವನ್ನು ನಿಗದಿತ ಉದ್ದೇಶಕ್ಕೆ ಬಳಸದೇ ಸರ್ಕಾರಿ ಶಾಲೆಯ ಆವರಣದಲ್ಲಿ ಬಾಲಕಿಯರ ಶೌಚಾಲಯ ನಿರ್ಮಾಣಕ್ಕೆ ಬಳಸಲಾಗಿದೆ.ಘನತ್ಯಾಜ್ಯ ವಿಲೇವಾರಿಗೆ ₹1.50 ಲಕ್ಷ ವೆಚ್ಚವಾಗಿದ್ದರೂ ಸುಮಾರು ಎಂಟು ತಿಂಗಳಿನಿಂದ ಮನೆ-ಮನೆ ಕಸ ಸಂಗ್ರಹಣೆ ನಡೆದಿಲ್ಲ. ತನಿಖಾ ತಂಡ ಭೇಟಿ ನೀಡಿದಾಗ ಕಸ ಸಂಗ್ರಹಣೆ ವಾಹನವೂ ಪತ್ತೆಯಾಗಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
ದಾಖಲೆಗಳೇ ಇಲ್ಲದೆ ಪಾವತಿ?ಹಲವು ಕಾಮಗಾರಿಗಳ ಬಿಲ್, ಛಾಯಾಚಿತ್ರ, ಅನುಮೋದನೆ ಸೇರಿದಂತೆ ಅಗತ್ಯ ದಾಖಲೆಗಳನ್ನು ಹಾಜರುಪಡಿಸದಿರುವುದು ಮತ್ತೊಂದು ಪ್ರಮುಖ ಆರೋಪವಾಗಿದೆ. ನೋಟಿಸ್‌ಗೆ ಪಿಡಿಒ ಆ. 3ರಂದು ಲಿಖಿತ ಉತ್ತರ ನೀಡಿದ್ದರೂ ಸಮಜಾಯಿಷಿ ಸಮರ್ಪಕವಾಗಿಲ್ಲ ಎನ್ನುವುದು ಸ್ಪಷ್ಟವಾಗಿದೆ.
ಇಂದರಗಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಅಕ್ರಮ ಕುರಿತು ಈಗಾಗಲೇ ಪರಿಶೀಲನೆ ನಡೆಸಿ ಅಭಿವೃದ್ಧಿ ಅಧಿಕಾರಿ ನಾಗರಾಜನನ್ನು ಅಮಾನತ್ತು ಮಾಡಲಾಗಿದೆ, ತನಿಖೆ ಪ್ರಗತಿಯಲ್ಲಿದೆ ಎಂದು ಜಿಪಂ ಸಿಇಒ ವರ್ಣೀತ ನೇಗಿ ಹೇಳಿದ್ದಾರೆ.