ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸೂರು
ಹುಣಸೂರು ವಿಧಾನಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡಿದ್ದು, ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕಾಮಗಾರಿಗಳು ಹಾಗೂ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಮುಂದಾಗಿರುವುದಾಗಿ ಶಾಸಕ ಜಿ.ಡಿ. ಹರೀಶ್ ಗೌಡ ಹೇಳಿದರು.ತಾಲೂಕಿನ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿರುವ ಶಾಸಕರು, ವಿವಿಧ ಇಲಾಖೆಗಳ ಮುಖೇನ ತಾಲೂಕಿಗೆ 311.67 ಕೋಟಿ ರು. ಅನುದಾನ ತರುವಲ್ಲಿ ಯಶಸ್ವಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಹಲವು ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದ್ದು, ಇದಲ್ಲದೇ ತಾಲೂಕಿನ ಹಲವು ಕೆರೆಗಳಿಗೆ ನೀರು ತುಂಬಿಸುವ ಸಲುವಾಗಿ 38 ಕೋಟಿ ರು. ಗಳ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರವೇ ಮಂಜೂರಾತಿ ದೊರೆಯಲಿದೆ ಎಂದು ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ಪ್ರಮುಖವಾಗಿ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿನ ವಿವಿಧ ಕಾಮಗಾರಿಗಳಿಗಾಗಿ 40 ಕೋಟಿ ರು. ಗಳ ಅನುದಾನ ಮಂಜೂರಾಗಿದ್ದು, ಸದರಿ ಅನುದಾನದಲ್ಲಿ ನಲ್ಲೂರು ಪಾಲದಿಂದ ಮೂರ್ಕಲ್ ರಸ್ತೆ, ಹುಣಸೂರು ಪಿರಿಯಾಟ್ಟಣರಸ್ತೆ, ಬಿಳಿಕೆರೆಯಿಂದ ಕರಿಮುದ್ದನಹಳ್ಳಿ ರಸ್ತೆ, ರಂಗನಾಥ ಬಡಾವಣೆಯಿಂದ ಮೋದೂರು ಮಾರ್ಗದ ರಸ್ತೆ, ಹನಗೋಡಿನಿಂದ ಕೋಣನ ಹೋಸಹಳ್ಳಿ ರಸ್ತೆ, ಹುಣಸೂರು ಕೆ.ಆರ್.ನಗರ ರಸ್ತೆ, ಬೋಳನಹಳ್ಳಿ ತೆಂಕಲಕೊಪ್ಪಲು ರಸ್ತೆ, ಹಳ್ಳದಕೊಪ್ಪಲಿನಿಂದ ಜಿ.ವಿ. ಗುಡಿ ರಸ್ತೆ, ಹುಣಸೂರು ಹನಗೋಡು ಪಿರಿಯಾಪಟ್ಟಣ ರಸ್ತೆ ಹಾಗೂ ಕೆ.ಎಂ. ವಾಡಿಯಿಂದ ಮರೂರು ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
ನೀರಾವರಿ ಯೋಜನೆಗಳ ಅಭಿವೃದ್ಧಿಗಾಗಿ 146 ಕೋಟಿ ರೂ.ಗಳ ಅನುದಾನ ಮಂಜೂರಾಗಿದ್ದು, ಹಾರಂಗಿ ಜಲಾನಯನ ವ್ಯಾಪ್ತಿಯ ಹೈರಿಗೆ ನಾಲಾ ರಸ್ತೆ ಅಭಿವೃದ್ಧಿ, ಹಿಂಡುಗೂಡ್ಲು ರಸ್ತೆ ಅಭಿವೃದ್ಧಿ, ಉಯಿಗೊಂಡನಹಳ್ಳಿ ಸೇರಿದಂತೆ ಮೂರು ಕೆರೆಗಳಿಗೆ ನೀರು ತುಂಬಿಸುವುದು, ಹೊಸಪುರ ಟ್ಯಾಂಕ್ ಅಭಿವೃದ್ಧಿ, ಮರೂರು ಬ್ರಾಂಚ್ ಕಾಲುವೆ ಲೈನಿಂಗ್ ಮತ್ತು ಸಿಡಿ ಕಾಮಗಾರಿ ಹಾಗೂ ಕೆ.ಎಂ.ವಾಡಿ ಚಾನೆಲ್, ವಡಿಕೆಕಟ್ಟೆ ಚಾನೆಲ್ ಸಿಡಿ ಕಾಮಗಾರಿಗಳನ್ನು ಮಾಡಲಾಗುವುದು ಎಂದು ತಿಳಿಸಿದರು.38 ಕೋಟಿ ಅನುದಾನಕ್ಕೆ ಪ್ರಸ್ತಾವನೆ
ಈಗಾಗಲೇ ಬಿಡುಗಡೆಗೊಂಡಿರುವ ಅನುದಾನದ ಜೊತೆಗೆ ಮನುಗನಹಳ್ಳಿ ಸೇರಿದಂತೆ ಇನ್ನಿತರ ಕೆರೆಗಳಿಗೆ ನೀರು ತುಂಬಿಸಲು 38 ಕೋಟಿ ರು. ಗಳ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರವೇ ಮಂಜೂರಾತಿ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಲೋಕೋಪಯೋಗಿ ಇಲಾಖೆಗೆ ಒಳಪಡುವ ಹಲವು ರಸ್ತೆಗಳ ಅಭಿವೃದ್ದಿಗಾಗಿ 20 ಕೋಟಿ ರು. ಗಳನ್ನು ನೀಡುವಂತೆಯೂ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.ಜಿಪಂ ಮಾಜಿ ಸದಸ್ಯ ಎಂ.ಬಿ. ಸುರೇಂದ್ರ, ನಗರಸಭೆ ಅಧ್ಯಕ್ಷ ಶರವಣ, ಜೆಡಿಎಸ್ ಮುಖಂಡರಾದ ಶ್ರೀಧರ್, ಬಸವಲಿಂಗಯ್ಯ, ಶ್ರೀನಿವಾಸ್ಇದ್ದರು.
-----------------