ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಕಳೆದ ಅವಧಿಯಲ್ಲಿ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ 356 ಕೋಟಿ ರು. ಅನುದಾನ ಹರಿದು ಬಂದಿದ್ದು, ತಾಲೂಕು ವ್ಯಾಪ್ತಿ ದಾಖಲೆ ಮಟ್ಟದಲ್ಲಿ ಅಭಿವೃದ್ಧಿಯಾಗಿದೆ. ಈ ಬಾರಿ ಕೂಡ ಚುನಾವಣೆಯಲ್ಲಿ ಆಶೀರ್ವಾದ ಮಾಡಿದ ಕ್ಷೇತ್ರದ ಜನರ ನಿರೀಕ್ಷೆಗೆ ಪೂರಕವಾಗಿ ಕೆಲಸ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.ತಾಲೂಕಿನ ಬಿದರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 1.15 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ 5 ರಸ್ತೆ ಕಾಮಗಾರಿಗಳಿಗೆ ಬುಧವಾರ ಗುದ್ದಲಿ ಪೂಜೆ ನೆರವೇರಿಸಿ, 5 ವರ್ಷದ ಅವಧಿಯಲ್ಲಿ 356 ಕೋಟಿ ರು. ಅನುದಾನ ಒಂದು ವಿಧಾನಸಭಾ ಕ್ಷೇತ್ರಕ್ಕೆ ಹರಿದು ಬಂದಿರುವುದು ದಾಖಲೆಯೂ ಆಗಿದೆ. ಜನಪ್ರತಿನಿಧಿಗಳಾದ ನಮಗೆ ಮುಂದಿನ ಚುನಾವಣೆ ಗುರಿಯಲ್ಲ. ಚುನಾವಣೆಯಲ್ಲಿ ಜನತೆಗೆ ನೀಡಿದ ಆಶ್ವಾಸನೆಯಂತೆ ಮಾತನ್ನು ಉಳಿಸಿಕೊಳ್ಳುವ ಬದ್ದತೆಯಷ್ಟೇ ಎಂದು ಹೇಳಿದರು.
ಬಿದರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳು ಹಿಂದುಳಿದಿದ್ದು, ಆಗಬೇಕಾದ ಕಾಮಗಾರಿ ಸಾಕಷ್ಟಿದೆ. ಕಳೆದ ಅವಧಿಯಲ್ಲಿ ಈ ಗ್ರಾಪಂಯ ರಸ್ತೆ ಸೇತುವೆ ಮೋರಿ ಮತ್ತಿತರ ಕಾರ್ಯಗಳಿಗೆ 8.50 ಕೋಟಿ ರು. ಮೊತ್ತದ ಅನುದಾನ ನೀಡಿದ್ದೇನೆ. ಈ ಬಾರಿ ಕೋಣಪುರ ಅಗಸರಕೋಣೆ ಹಾಗೂ ಹುಲ್ಲಾನಿ ಗ್ರಾಮದ ರಸ್ತೆಗೆ ತಲಾ 25 ಲಕ್ಷ ರು. ಉಳುಮಡಿ ಮತ್ತು ಹುಣಿಸೆ ಗ್ರಾಮದ ರಸ್ತೆಗಳಿಗೆ ತಲಾ 20 ಲಕ್ಷ ರು. ಅನುದಾನ ಮಂಜೂರಾಗಿದೆ. ಅತಿ ಹೆಚ್ಚು ಮಳೆ ಬೀಳುವ ಈ ಭಾಗದ ರಸ್ತೆ ಕಾಮಗಾರಿಯ ಗುಣಮಟ್ಟದ ಮೇಲೆ ಗ್ರಾಮಸ್ಥರು ಗಮನವಿಡಬೇಕು ಎಂದು ಹೇಳಿದರು.ಬಿದರಗೋಡು ಗ್ರಾಪಂ ಸದಸ್ಯ ಅಮೃತರಾಜ್, ಆಗುಂಬೆ ಗ್ರಾಪಂ ಮಾಜಿ ಅಧ್ಯಕ್ಷ ಹಸಿರುಮನೆ ನಂದನ್, ತಾಪಂ ಮಾಜಿ ಸದಸ್ಯ ಹೊಸಳ್ಳಿ ಸುಧಾಕರ್ ಹಾಗೂ ಗ್ರಾಮಸ್ಥರು ಇದ್ದರು.