ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುಡಿ.ಎಂ. ನಂಜುಂಡಪ್ಪ ವರದಿಯ ಶಿಫಾರಸ್ಸಿನಂತೆ ಪ್ರಾದೇಶಿಕ ಅಸಮತೋಲನೆಯನ್ನು ನಿವಾರಿಸಲು ರಾಜ್ಯದಲ್ಲಿ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗಾಗಿ 2007-08 ರಿಂದ 2023-24ರವರೆಗೂ ಸರ್ಕಾರದಿಂದ ಬಿಡುಗಡೆಯಾಗಿರುವ 37,661.65 ಕೋಟಿ ಅನುದಾನದಲ್ಲಿ 34,381.02 ಕೋಟಿ ವೆಚ್ಚ ಮಾಡಿದೆ ಎಂದು ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಅಧ್ಯಕ್ಷ ಪ್ರೊ. ಎಂ. ಗೋವಿಂದರಾವ್ ತಿಳಿಸಿದರು. ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ದೇಶನದಂತೆ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣೆ ಸಂಬಂಧ ಸೆಪ್ಟೆಂಬರ್ 2024ರಲ್ಲಿ ಹೊಸ ಸಮಿತಿಯನ್ನು ರಚಿಸಲಾಗಿದೆ. ರಾಜ್ಯದಲ್ಲಿರುವ ಪ್ರಾದೇಶಿಕ ಅಸಮತೋಲನಾ ನಿವಾರಣೆಗಾಗಿ ಈ ಸಮಿತಿಯು ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡುತ್ತಿದೆ. ಸಮಿತಿಯು ರಾಜ್ಯದಾದ್ಯಂತ ಪ್ರವಾಸ ಕೈಗೊಂಡು ಡಾ. ನಂಜುಂಡಪ್ಪ ಸಮಿತಿ ಶಿಫಾರಸ್ಸುಗಳ ಆಧಾರದ ಮೇಲೆ ಅಸಮತೋಲನೆ ನಿವಾರಣೆಗೆ ಪರಿಣಾಮಕಾರಿಯಾಗಿ ಕೈಗೊಳ್ಳಲಾದ ಕ್ರಮಗಳ ಮೌಲ್ಯಮಾಪನ ಮಾಡಲಿದೆ ಎಂದು ತಿಳಿಸಿದರು.
ರಾಜ್ಯದ ಯಾವುದೇ ಸಮುದಾಯ, ಪ್ರದೇಶಗಳು ಅಭಿವೃದ್ಧಿಯಲ್ಲಿ ಹಿಂದುಳಿಯಬಾರದೆಂಬುದೇ ಸಮಿತಿ ರಚನೆ ಮುಖ್ಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಸಮಿತಿಯು ಪ್ರತೀ ಜಿಲ್ಲೆಗೂ ಭೇಟಿ ನೀಡಿ ಸ್ಥಳೀಯ ಸಮಸ್ಯೆಗಳನ್ನು ಕೂಲಂಕುಷವಾಗಿ ಅಧ್ಯಯನ ಮಾಡಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ. ಡಾ: ನಂಜುಂಡಪ್ಪ ಅವರು 2002ರಲ್ಲಿ ಸರ್ಕಾರಕ್ಕೆ ಸಲ್ಲಿಸಿರುವ ಕರ್ನಾಟಕ ಪ್ರಾದೇಶಿಕ ಅಸಮತೋಲನ ವರದಿಯ ಅಭಿವೃದ್ಧಿ ಸೂಚ್ಯಂಕಗಳು ಹಳೆಯದಾಗಿರುವುದರಿಂದ ಹೊಸ ಸೂಚ್ಯಂಕಗಳನ್ನು ಸಿದ್ಧಪಡಿಸಿ ರಾಜ್ಯದ ಜನಪ್ರತಿನಿಧಿಗಳು, ಉನ್ನತ ಅಧಿಕಾರಿಗಳು, ಇತರೆ ಅಧಿಕಾರಿಗಳು, ಸಂಘ-ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು, ಪ್ರಮುಖ ಖಾಸಗಿ ಉದ್ದಿಮೆದಾರರನ್ನು ಭೇಟಿ ಮಾಡಿ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದರು.ತುಮಕೂರು ಜಿಲ್ಲೆಯು ಆದಾಯ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ 2ನೇ ಸ್ಥಾನದಲ್ಲಿದೆ. ಉಳಿದಂತೆ ಕೃಷಿ, ನೀರಾವರಿ, ಕೈಗಾರಿಕೆ, ಸಾಗಾಣಿಕೆ, ಮತ್ತಿತರ ವಿಷಯಗಳಲ್ಲಿ ಹಿಂದುಳಿದಿದೆ. ಅಭಿವೃದ್ಧಿ ಸೂಚ್ಯಂಕದನ್ವಯ ಜಿಲ್ಲೆಯ ಚಿಕ್ಕನಾಯಕನಹಳ್ಳಿ ಹಾಗೂ ತುರುವೇಕೆರೆ ತಾಲೂಕುಗಳು ಅತೀ ಹಿಂದುಳಿದಿವೆ. ಹಿಂದುಳಿದ ತಾಲೂಕುಗಳ ಅಭಿವೃದ್ಧಿಗಾಗಿ ಸ್ಥಳೀಯವಾಗಿ ಕಂಡುಬರುವ ಕೊರತೆಗಳನ್ನು ನಿವಾರಿಸಲು ಹಾಗೂ ಹೊಸ ನಿಯಮಗಳನ್ನು ರೂಪಿಸಲು ಸರ್ಕಾರಕ್ಕೆ ಸಮಿತಿ ಶಿಫಾರಸ್ಸು ಮಾಡಿ ವರದಿ ಸಲ್ಲಿಸಲಿದೆ ಎಂದು ತಿಳಿಸಿದರು.ಇದಕ್ಕೂ ಮುನ್ನ ನಡೆದ ಅಧಿಕಾರಿಗಳು ಹಾಗೂ ಸರ್ಕಾರೇತರ ಸಂಸ್ಥೆಗಳ ಸಭೆಯಲ್ಲಿ ಮಾತನಾಡಿದ ಅವರು ತುಮಕೂರು ಜಿಲ್ಲೆಯು ರಾಜಧಾನಿ ಬೆಂಗಳೂರಿಗೆ ಸಮೀಪ ಇರುವುದರಿಂದ ಅಭಿವೃದ್ಧಿಗೆ ಹಲವಾರು ದಾರಿಗಳಿವೆ. ಸರ್ಕಾರಿ ಅಧಿಕಾರಿಗಳು ಹಾಗೂ ಸಂಘ-ಸಂಸ್ಥೆಗಳ ಸಮನ್ವಯತೆಯಲ್ಲಿ ಪ್ರಾದೇಶಿಕ ಅಭಿವೃದ್ಧಿಗಾಗಿ ಸ್ಥಳೀಯವಾಗಿ ಕೃಷಿ ಕ್ಷೇತ್ರ ವಿಸ್ತರಣೆ, ತಂತ್ರಜ್ಞಾನ ಬಳಕೆ, ನವೋದ್ಯಮಿಗಳಿಗೆ ಮಾರುಕಟ್ಟೆ ಬೆಂಬಲ, ಕೈಗಾರಿಕೆಗಳ ಅಭಿವೃದ್ಧಿ, ಉದ್ದಿಮೆ/ಸ್ಟಾರ್ಟ್-ಅಪ್‌ಗಳಿಗೆ ಸಾಲ ಸೌಲಭ್ಯ, ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮುಂದಾಗಬೇಕು. ಇದರಿಂದ ಯಾವುದೇ ಪ್ರದೇಶ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದು ತಿಳಿಸಿದರು. ಪ್ರಸ್ತುತ ರಾಜ್ಯದ 240 ತಾಲೂಕುಗಳಲ್ಲಿ ಆದಾಯ, ಶಿಕ್ಷಣ ಮತ್ತು ಆರೋಗ್ಯ ಸಂಬಂಧ ಪ್ರಮುಖ ಸೂಚ್ಯಂಕಗಳನ್ನು ಆಧಾರವನ್ನಾಗಿಸಿಕೊಂಡು ಜಿಲ್ಲಾ ಮಟ್ಟದಲ್ಲಿ ಸಮಗ್ರ ಅಧ್ಯಯನ ಮಾಡಲಾಗುವುದು. ಬರುವ ಅಕ್ಟೋಬರ್ ಮಾಹೆಯೊಳಗೆ ಪ್ರತಿ ಜಿಲ್ಲೆಯ ಪರಿಸ್ಥಿತಿಗಳ ಅಧ್ಯಯನ ಮಾಡಿ ಸ್ಥಳೀಯ ಸಮಸ್ಯೆಗಳ್ನು ಬಗೆಹರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಿತಿಯು ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ ಎಂದು ತಿಳಿಸಿದರು. ಶಾಸಕ ಸುರೇಶಗೌಡ ಮಾತನಾಡಿ ಎಷ್ಟೋ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಸಂಖ್ಯೆ ಶೂನ್ಯದಲ್ಲಿದೆ. ಖಾಲಿಯಿರುವ ಶಿಕ್ಷಕರ ನೇಮಕಾತಿಗೆ ಕ್ರಮ ಕೈಗೊಳ್ಳುವ ಬಗ್ಗೆ ವರದಿಯಲ್ಲಿ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಮನವಿ ಮಾಡಿದರು.ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ ಜಿಲ್ಲೆಯ ಜನಸಂಖ್ಯೆ, ಭೌಗೋಳಿಕ ವಿಸ್ತೀರ್ಣ, ಸಾಕ್ಷರತೆ ಪ್ರಮಾಣ ಸೇರಿ ಸಾಮಾನ್ಯ ಮಾಹಿತಿಯನ್ನು ಸಭೆಗೆ ತಿಳಿಸುತ್ತಾ ಒಟ್ಟು ದೇಶೀಯ ಉತ್ಪನ್ನದಲ್ಲಿ ಜಿಲ್ಲೆಯು ರಾಜ್ಯದ 4ನೇ ಸ್ಥಾನದಲ್ಲಿದೆ. ಡಾ. ಡಿ.ಎಂ. ನಂಜುಂಡಪ್ಪ ವರದಿಯ ಶಿಫಾರಸ್ಸಿನಂತೆ ಜಿಲ್ಲೆಗೆ ಕುಣಿಗಲ್, ಮಧುಗಿರಿ, ಗುಬ್ಬಿ, ಶಿರಾ, ಪಾವಗಡ ತಾಲೂಕುಗಳನ್ನು ಅತ್ಯಂತ ಹಿಂದುಳಿದ ಹಾಗೂ ಪಾವಗಡ, ತುರುವೇಕೆರೆ, ಕೊರಟಗೆರೆ, ಚಿಕ್ಕನಾಯಕನಹಳ್ಳಿ ತಾಲೂಕುಗಳನ್ನು ಅತೀ ಹಿಂದುಳಿದ ತಾಲೂಕುಗಳೆಂದು ಗುರುತಿಸಲಾಗಿದೆ ಎಂದರು.ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ. ಪ್ರಭು ಮಾತನಾಡಿ ಜಿಲ್ಲೆಯಲ್ಲಿ ಯಾವುದೇ ನದಿ ಮೂಲ ಇಲ್ಲದಿರುವುದರಿಂದ ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳಿಗಾಗಿ ಹೇಮಾವತಿ, ಎತ್ತಿನಹೊಳೆ, ಭದ್ರಾ ಮೇಲ್ದಂಡೆ ಬೃಹತ್ ಕುಡಿಯುವ ನೀರಾವರಿ ಯೋಜನೆಗಳನ್ನು ಕೈಗೊಂಡಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರುಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಲಿಂಗರಾಜು, ಮಧುಗಿರಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಿರಿಜಾ, ಡಿಹೆಚ್‌ಓ ಡಾ.ಚಂದ್ರಶೇಖರ್, ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಪಾಂಡುರಂಗ ಕುರಂದವಾಡ್ ಮಾತನಾಡಿದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಸೇರಿದಂತೆ ಮತ್ತಿತರರು ಹಾಜರಿದ್ದರು.