ಸಾರಾಂಶ
ಉಳ್ಳಾಲದ ಕಲ್ಲಾಪುನಿಂದ ಸಜಿಪವರೆಗೆ ನದಿ ಬದಿಯ ಉದ್ದಕ್ಕೂ ರಸ್ತೆ ಮಾಡುವ ಮಹತ್ವಾಕಾಂಕ್ಷೆಯ ಯೋಜನೆಗೆ ಇತ್ತೀಚೆಗೆ ಚಾಮರಾಜನಗರದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 40 ಕೋಟಿ ರು. ಬಿಡುಗಡೆಯಾಗಿದೆ ಎಂದು ಸ್ಥಳೀಯ ಶಾಸಕ, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಫರೀದ್ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಉಳ್ಳಾಲದ ಕಲ್ಲಾಪುನಿಂದ ಸಜಿಪವರೆಗೆ ನದಿ ಬದಿಯ ಉದ್ದಕ್ಕೂ ರಸ್ತೆ ಮಾಡುವ ಮಹತ್ವಾಕಾಂಕ್ಷೆಯ ಯೋಜನೆಗೆ ಇತ್ತೀಚೆಗೆ ಚಾಮರಾಜನಗರದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 40 ಕೋಟಿ ರು. ಬಿಡುಗಡೆಯಾಗಿದೆ ಎಂದು ಸ್ಥಳೀಯ ಶಾಸಕ, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಫರೀದ್ ಹೇಳಿದ್ದಾರೆ.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 15- 20 ಕಿ.ಮೀ. ಉದ್ದದ ಈ ರಸ್ತೆ ಕಾರ್ಯರೂಪಕ್ಕೆ ಬಂದರೆ ಉಳ್ಳಾಲದ ಗ್ರಾಮಗಳಲ್ಲಿ ಮುಂದಿನ ದಿನಗಳಲ್ಲಿ ಕ್ರಾಂತಿಕಾರಿ ಅಭಿವೃದ್ಧಿ ಸಾಧ್ಯವಾಗಲಿದೆ. ಕಲ್ಲಾಪುನಲ್ಲಿ ಆರಂಭವಾಗುವ ಈ ರಸ್ತೆ ರಾಣಿಪುರ- ಅಂಬ್ಲಮೊಗರು- ಹರೇಕಳ- ಪಾವೂರು- ಕೋಟೆಪುರ ಮೂಲಕ ಸಜಿಪವರೆಗೆ ನದಿ ಬದಿಯ ಉದ್ದಕ್ಕೂ ಹಂತ ಹಂತವಾಗಿ ಕಾರ್ಯರೂಪಕ್ಕೆ ಬರಲಿದೆ. ಈಗಾಗಲೇ 18 ಕೋಟಿ ರು. ವೆಚ್ಚದಲ್ಲಿ ಕಲ್ಲಾಪು- ಹರೇಕಳ, ಹರೇಕಳ- ಪಾವೂರು- ಸಜಿಪ ಭಾಗದ ಕಾಮಗಾರಿ ಆರಂಭವಾಗಿದೆ. ಕೆಲವೇ ವರ್ಷಗಳಲ್ಲಿ ಕಾಮಗಾರಿ ಸಂಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಹರೇಕಳದಲ್ಲಿ ನೇತ್ರಾವತಿ ನದಿಗೆ ಕಟ್ಟಿರುವ ಅಣೆಕಟ್ಟಿನ ನೀರು ತುಂಬೆಯವರೆಗೆ ನಿಲ್ಲುತ್ತದೆ. ನೀರು ಜಾಸ್ತಿ ನಿಲ್ಲಿಸಿದರೆ ಬೆಳೆ ಹಾನಿ ಒಂದೆಡೆಯಾದರೆ ದೊಡ್ಡ ಮೊತ್ತದ ಪರಿಹಾರ ಪಾವತಿ ಮಾಡಲು ಸರ್ಕಾರಕ್ಕೂ ಹೊರೆಯಾಗುತ್ತದೆ. ನದಿ ಬದಿಯುದ್ದಕ್ಕೂ ರಸ್ತೆ ನಿರ್ಮಾಣ ಮಾಡಿದರೆ ರೈತರ ಜಮೀನೂ ಮುಳುಗಡೆಯಾಗಲ್ಲ, ಸರ್ಕಾರಕ್ಕೂ ನಷ್ಟ ಉಂಟಾಗದು ಎಂದರು.ತೂಗುಸೇತುವೆ ಅನುಮೋದನೆ:
ಬಹು ದೀರ್ಘ ಕಾಲದಿಂದ ಬಾಕಿ ಉಳಿದಿರುವ ಪಾವೂರು ಉಳಿಯ ದ್ವೀಪಕ್ಕೆ ತೂಗು ಸೇತುವೆ ಮೂಲಕ ಸಂಚಾರ ವ್ಯವಸ್ಥೆ ಕಲ್ಪಿಸಲು 12 ಕೋಟಿ ರು. ಯೋಜನೆಗೆ ಆರ್ಥಿಕ ಇಲಾಖೆಯ ಒಪ್ಪಿಗೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನುಮೋದನೆ ದೊರೆತಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆಯುವ ನಿರೀಕ್ಷೆಯಿದೆ ಎಂದು ಖಾದರ್ ವಿಶ್ವಾಸ ವ್ಯಕ್ತಪಡಿಸಿದರು.ಕಡಲ್ಕೊರೆತ ಕಾಮಗಾರಿಗೆ 70 ಕೋಟಿ:
ರಾಜ್ಯದಲ್ಲಿ ಕಡಲ್ಕೊರೆತ ತಡೆ ಕಾಮಗಾರಿಗೆ ಬಜೆಟ್‌ನಲ್ಲಿ 200 ಕೋಟಿ ರು. ಮೀಸಲಿರಿಸಲಾಗಿದ್ದು, ಅದರಲ್ಲಿ ಸೋಮೇಶ್ವರ, ಬಟ್ಟಂಪಾಡಿ ಸಹಿತ ಅಧಿಕ ಕಡಲ್ಕೊರೆತ ಇರುವ ಪ್ರದೇಶಗಳಲ್ಲಿ ಕಡಲ್ಕೊರೆತ ತಡೆಗೆ 70 ಕೋಟಿ ರು. ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಮಳೆಗಾಲದ ಮೊದಲೇ ಕಡಲ ತೀರದ ಪ್ರದೇಶಗಳ ರಕ್ಷಣೆಗೆ ಅಗತ್ಯ ಕಾಮಗಾರಿ ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.ನಿವೃತ್ತ ಡಿಜಿಪಿ ಓಂ ಪ್ರಕಾಶ್ ಹತ್ಯೆಯಲ್ಲಿ ಪಿಎಫ್‌ಐ ಪಾತ್ರವಿರುವ ಕುರಿತು ಮಾಜಿ ಡಿವೈಎಸ್ಪಿ ಅನುಪಮಮ ಶೆಣೈ ಆರೋಪಕ್ಕೆ ಪ್ರತಿಕ್ರಿಯಿಸಿ, ಅವರು ಮಾಡುತ್ತಿರುವ ಆರೋಪಗಳಿಗೆ ಸರಿಯಾದ ದಾಖಲೆಗಳಿದ್ದರೆ ಪ್ರಕರಣದ ತನಿಖಾ ಸಂಸ್ಥೆಗಳಿಗೆ ಒದಗಿಸಲಿ ಎಂದರು.