ದೌರ್ಜನ್ಯ ಪ್ರಕರಣದಡಿ ₹44.25 ಲಕ್ಷ ಪರಿಹಾರ ವಿತರಣೆ

| Published : Sep 27 2025, 02:00 AM IST

ಸಾರಾಂಶ

ಪ್ರಸಕ್ತ ಸಾಲಿನ ಆಗಸ್ಟ್‌ ಅಂತ್ಯಕ್ಕೆ 30 ದೌರ್ಜನ್ಯ ಪ್ರಕರಣಗಳ ಪೈಕಿ 26 ಪ್ರಕರಣಗಳಿಗೆ ಒಟ್ಟು ₹44.25 ಲಕ್ಷ ಪರಿಹಾರ ಧನ ವಿತರಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಪ್ರಸಕ್ತ ಸಾಲಿನ ಆಗಸ್ಟ್‌ ಅಂತ್ಯಕ್ಕೆ 30 ದೌರ್ಜನ್ಯ ಪ್ರಕರಣಗಳ ಪೈಕಿ 26 ಪ್ರಕರಣಗಳಿಗೆ ಒಟ್ಟು ₹44.25 ಲಕ್ಷ ಪರಿಹಾರ ಧನ ವಿತರಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಮಟ್ಟದ ಜಾಗೃತಿ ನಿಯಂತ್ರಣ ಹಾಗೂ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಸಕ್ತ ಸಾಲಿಗೆ ಒಟ್ಟು ₹104 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಈ ಪೈಕಿ ಹಿಂದಿನ ಪ್ರಕರಣಗಳಿಗೆ ₹63.75 ಲಕ್ಷ ಪರಿಹಾರ ನೀಡಲಾಗಿದೆ. ಪ್ರಸಕ್ತ ಸಾಲಿಗೆ 30 ಪ್ರಕರಣಗಳ ಪೈಕಿ 26 ಪ್ರಕರಣಗಳಿಗೆ ಒಟ್ಟು ₹44.25 ಲಕ್ಷ ಪರಿಹಾರ ಧನ ವಿತರಿಸಲಾಗಿದೆ. ಬಾಕಿ ಉಳಿದ ಪ್ರಕರಣಗಳಿಗೆ ಪರಿಹಾರ ಧನ ನೀಡಲು ಅನುದಾನಕ್ಕೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.ದೌರ್ಜನ್ಯ ಪ್ರಕರಣಗಳಲ್ಲಿ ತನಿಖೆ ಚುರುಕುಗೊಳಿಸಿ ಶಿಕ್ಷೆಯ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಇದರ ಜೊತೆಗೆ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣ ಪರಿಶೀಲನೆ ಮಾಡಿದರು. ದಾಖಲಾದ ಒಟ್ಟು 30 ಪ್ರಕರಣ ಪೈಕಿ 15 ಪ್ರಕರಣಗಳು ನ್ಯಾಯಾಲಯಕ್ಕೆ ದೋಷರೋಪ ಸಲ್ಲಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 10 ಪ್ರಕರಣಗಳಿಗೆ ಶಿಕ್ಷೆ ಆಗಿದೆ. ಉಪವಿಭಾಗ ಮತ್ತು ತಹಸೀಲ್ದಾರ್‌ ಹಂತದಲ್ಲಿ ಜಾಗೃತಿ ನಿಯಂತ್ರಣ ಸಮಿತಿ ಸಭೆ ನಡೆಸಿ, ಸಭೆಯ ನಡಾವಳಿ ಪಡೆದುಕೊಂಡು ಜಿಲ್ಲಾ ಸಮಿತಿಗೆ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ, ಅಂಬೇಡ್ಕರ್‌ ಅಭಿವೃದ್ಧಿ ನಿಗಮದಲ್ಲಿ ಬಾಕಿ ಇರುವ 33 ಬೋರ್‌ವೆಲ್‌ ಗಳಿಗೆ ವಿದ್ಯುದ್ಧೀಕರಣ ಕಲ್ಪಿಸಲಾಗಿದ್ದು, ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಕೊರೆಯಿಸಿದ 30 ಬೋರ್‌ವೆಲ್‌ ಗಳು ವಿದ್ಯುದ್ಧೀಕರಣಕ್ಕೆ ಹೆಸ್ಕಾಂ ಹಂತದಲ್ಲಿ ಬಾಕಿ ಉಳಿದಿವೆ. ಅದೇ ರೀತಿ ಭೋವಿ ಅಭಿವೃದ್ಧಿ ನಿಗಮದಲ್ಲಿ ವಿದ್ಯುದ್ಧೀಕರಣಕ್ಕೆ ಯಾವುದೇ ಬಾಕಿ ಇರುವುದಿಲ್ಲ. ಆದಿ ಜಾಂಬವ ಅಭಿವೃದ್ಧಿ ನಿಗಮಗಳಲ್ಲಿ 26 ಮಾತ್ರ ಬಾಕಿ ಇರುತ್ತದೆ. ಬೋರವೆಲ್ ಕೊರೆದ ತಕ್ಷಣ ವಿದ್ಯುದ್ಧೀಕರಣಕ್ಕೆ ನಿಗಮದ ಅಧಿಕಾರಿಗಳು ಕ್ರಮವಹಿಸಲು ತಿಳಿಸಿದರು.ಸಭೆಯಲ್ಲಿ ನಾಮನಿರ್ದೇಶಿತ ಸದಸ್ಯರು ಸಭೆಗೆ ತಂದ ಸಮಸ್ಯೆಗಳಿಗೆ ಜಿಲ್ಲಾಧಿಕಾರಿಗಳು ಸ್ಪಂದಿಸಿ, ಸೂಕ್ತ ಕ್ರಮ ವಹಿಸುವುದಾಗಿ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಜಿಪಂ ಉಪ ಕಾರ್ಯದರ್ಶಿ ಎನ್.ವೈ. ಬಸರಿಗಿಡದ, ಸಹಾಯಕ ಯೋಜನಾಧಿಕಾರಿ ಭೀಮಪ್ಪ ತಳವಾರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಣುಕಾ ಎಂ. ಸೇರಿದಂತೆ ನಾಮನಿರ್ದೇಶಿತ ಸದಸ್ಯರಾದ ಯಮನಪ್ಪ ಪೂಜಾರ, ಶಿವಾನಂದ ಮಾದರ, ಫಕೀರಪ್ಪ ಮಾದರ, ಬಸವರಾಜ ಪಾತ್ರೋಟ, ಗೋವಿಂದಪ್ಪ ಕೌಲಗಿ, ದ್ಯಾಮಣ್ಣ ಗಾಳಿ ಸೇರಿ ಇತರರು ಉಪಸ್ಥಿತರಿದ್ದರು.ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಲ್ಯಾಣಕ್ಕಾಗಿ ಕಾಯ್ದಿರಿಸಿದ ಅನುದಾನದಲ್ಲಿ ಶೇ.25ರಷ್ಟು ಖರ್ಚು ಮಾಡಬೇಕಾಗಿದ್ದು, ಅಮೀನಗಡ, ಲೋಕಾಪುರ ಪಪಂ ಹಾಗೂ ಮಹಾಲಿಂಗಪುರ ಪುಸರಭೆಗಳು ಕಡಿಮೆ ಪ್ರಗತಿ ಸಾಧಿಸಿವೆ. ಎಸ್.ಎಫ್.ಸಿ ಅನುದಾನದಲ್ಲಿ ಮುಖ್ಯವಾಗಿ ಕುಡಿಯುವ ನೀರು, ಶೌಚಾಲಯ ಹಾಗೂ ಚರಂಡಿಗಳಿಗೆ ಖರ್ಚು ಮಾಡಬೇಕು. ನಂತರ ಇತರೆ ಅಭಿವೃದ್ಧಿ ಕಾಮಗಾರಿಗಳಿಗೆ ಬಳಕೆ ಮಾಡಬೇಕು.

- ಸಂಗಪ್ಪ ಜಿಲ್ಲಾಧಿಕಾರಿ.