ಸಾರಾಂಶ
ಪ್ರಕರಣವೊಂದರ ಆರೋಪ ಪಟ್ಟಿಯಿಂದ ಮೂವರ ಹೆಸರು ಕೈಬಿಡಲು ₹1 ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟು, ₹50 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಕೆಟಿಜೆ ನಗರ ಪೊಲೀಸ್ ಠಾಣೆಯ ಎಎಸ್‌ಐ ಲೋಕಾಯುಕ್ತರ ಗಾಳಕ್ಕೆ ಸಿಕ್ಕಿ ಬಿದ್ದ ಘಟನೆ ನಗರದಲ್ಲಿ ಮಂಗಳವಾರ ನಡೆದಿದೆ.
- ಕೆಟಿಜೆ ನಗರ ಪೊಲೀಸ್ ಠಾಣೆ ಎಎಸ್ಐ ಈರಣ್ಣ ಆರೋಪಿ । ₹1 ಲಕ್ಷ ಲಂಚಕ್ಕೆ ಬೇಡಿಕೆ
- ಆರೋಪ ಪಟ್ಟಿಯಿಂದ ಮೂವರ ಹೆಸರು ಕೈಬಿಡುವಂತೆ ಕೋರಿದ್ದ ಮಣಿಕಂಠ ಆಚಾರ್ಯ- ಲಂಚ ವಿರುದ್ಧ ಕ್ರಮಕ್ಕೆ ಕೋರಿ ಲೋಕಾಯುಕ್ತ ಠಾಣೆಗೆ ದೂರು ನೀಡಿದ್ದ ಮಣಿಕಂಠ ಆಚಾರ್ಯ
- - - ಕನ್ನಡಪ್ರಭ ವಾರ್ತೆ ದಾವಣಗೆರೆ
ಪ್ರಕರಣವೊಂದರ ಆರೋಪ ಪಟ್ಟಿಯಿಂದ ಮೂವರ ಹೆಸರು ಕೈಬಿಡಲು ₹1 ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟು, ₹50 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಕೆಟಿಜೆ ನಗರ ಪೊಲೀಸ್ ಠಾಣೆಯ ಎಎಸ್‌ಐ ಲೋಕಾಯುಕ್ತರ ಗಾಳಕ್ಕೆ ಸಿಕ್ಕಿ ಬಿದ್ದ ಘಟನೆ ನಗರದಲ್ಲಿ ಮಂಗಳವಾರ ನಡೆದಿದೆ.ಎಎಸ್ಐ ಈರಣ್ಣ ಲೋಕಾಯುಕ್ತ ಗಾಳಕ್ಕೆ ಸಿಕ್ಕಿ ಬಿದ್ದ ಆರೋಪಿ. ಪ್ರಕರಣವೊಂದರಲ್ಲಿ ಮಣಿಕಂಠ ಆಚಾರ್ಯ, ತಾಯಿ ಭಾಗಮ್ಮ ಮಂಜುನಾಥ ಆಚಾರ್ಯ ಹಾಗೂ ಪತ್ನಿ ಅರ್ಚನಾ ಮಣಿಕಂಠ ಆಚಾರ್ಯರ ಹೆಸರನ್ನು ಚಾರ್ಜ್ ಶೀಟ್‌ನಿಂದ ಕೈಬಿಡಲು ಕೆಟಿಜೆ ನಗರ ಠಾಣೆಯ ಎಎಸ್‌ಐ ಈರಣ್ಣ ₹1 ಲಕ್ಷ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ₹50 ಸಾವಿರ ಮುಂಗಡ ಹಣ ನೀಡುವಂತೆ ಎಎಸ್ಐ ಡಿಮ್ಯಾಂಡ್ ಮಾಡಿದ್ದನು.
ಲಂಚದ ಹಣ ಕೊಟ್ಟು, ಚಾರ್ಜ್ ಶೀಟ್‌ನಿಂದ ಹೆಸರು ತೆಗೆಸಿಕೊಳ್ಳಲು ಇಷ್ಟವಿಲ್ಲದ ಮಣಿಕಂಠ ಆಚಾರ್ಯ ಲೋಕಾಯುಕ್ತ ಪೊಲೀಸ್ ಠಾಣೆಗೆ ಮಂಗಳವಾರ ತೆರಳಿ, ಕೆಟಿಜೆ ನಗರ ಠಾಣೆಯ ಎಎಸ್‌ಐ ಈರಣ್ಣ ವಿರುದ್ಧ ದೂರು ನೀಡಿ, ಸೂಕ್ತ ಕಾನೂನು ಕ್ರಮಕ್ಕೆ ಮನವಿ ಮಾಡಿದ್ದರು. ಅನಂತರ ಪಿರ್ಯಾದಿ ಮಣಿಕಂಠ ಆಚಾರ್ಯರಿಂದ ಕೆಟಿಜೆ ನಗರ ಠಾಣೆ ಎಎಸ್ಐ ಈರಣ್ಣ ಲಂಚದ ಹಣ ಪಡೆಯುತ್ತಿದ್ದ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ₹50 ಸಾವಿರ ಲಂಚದ ಹಣ ಸಮೇತ ಆರೋಪಿ ಎಎಸ್ಐ ಈರಣ್ಣನನ್ನು ಬಂಧಿಸಿದರು.ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್.ಕೌಲಾಪುರೆ ಮಾರ್ಗದರ್ಶನದಲ್ಲಿ ಉಪಾಧೀಕ್ಷಕಿ ಕಲಾವತಿ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ಸಿ.ಮಧುಸೂದನ, ಪ್ರಭು ಬ.ಸೂರಿನ, ಪಿ.ಸರಳಾ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ನಡೆಸಲಾಯಿತು.
ಆರೋಪಿ ಎಎಸ್ಐ ಈರಣ್ಣನನ್ನು ವಶಕ್ಕೆ ಪಡೆಯಲಾಗಿದೆ. ಈರಣ್ಣ ವಿರುದ್ಧ ಲೋಕಾಯುಕ್ತ ಠಾಣೆಯಲ್ಲಿ ಮೊಕದ್ದಮೆ ಸಂ:13/2024 ಕಲಂ:7(ಎ) ಪಿಸಿ ಆಕ್ಟ್-1988 (ತಿದ್ದುಪಡಿ ಕಾಯ್ದೆ-2018)ರಡಿ ಪ್ರಕರಣ ದಾಖಲಾಗಿದ್ದು, ಲೋಕಾಯುಕ್ತ ಪೊಲೀಸರು ತನಿಖೆ ಕೈಗೊಂಡಿದ್ದಾರೆ.- - - -3ಕೆಡಿವಿಜಿ7.ಜೆಪಿಜಿ:
ಈರಣ್ಣ, ಎಎಸ್‌ಐ, ಕೆಟಿಜೆ ನಗರ ಠಾಣೆ