ರಸ್ತೆ ಬದಿ ಪ್ಲಾಸ್ಟಿಕ್ ಸುಡುತ್ತಿದ್ದವನಿಗೆ ₹10 ಸಾವಿರ ದಂಡ

| Published : Nov 16 2025, 02:00 AM IST

ಸಾರಾಂಶ

ಥಣಿಸಂದ್ರ ಮುಖ್ಯ ರಸ್ತೆಯಲ್ಲಿ ಪ್ಲಾಸ್ಟಿಕ್ ಸುಡುತ್ತಿದ್ದ ವ್ಯಕ್ತಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ 10 ಸಾವಿರ ರು. ದಂಡ ವಿಧಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಥಣಿಸಂದ್ರ ಮುಖ್ಯ ರಸ್ತೆಯಲ್ಲಿ ಪ್ಲಾಸ್ಟಿಕ್ ಸುಡುತ್ತಿದ್ದ ವ್ಯಕ್ತಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ 10 ಸಾವಿರ ರು. ದಂಡ ವಿಧಿಸಿದೆ.

ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ನ.11ರ ರಾತ್ರಿ ಪರಿಶೀಲನೆ ವೇಳೆ, ಅಶ್ವತ್ಥ ನಗರದಲ್ಲಿ ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ಸುಡುತ್ತಿರುವುದನ್ನು ಗಮನಿಸಿದ್ದರು. ಬೆಂಕಿ ಹಾಕಿ ಸುಡುತ್ತಿದ್ದ ವ್ಯಕ್ತಿಯನ್ನು ಪ್ರಶ್ನಿಸಿದಾಗ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಬೆಂಕಿ ಹಾಕಿರುವುದನ್ನು ಒಪ್ಪಿಕೊಂಡಿದ್ದಲ್ಲದೇ ನೀರು ಹಾಕಿ ಬೆಂಕಿ ನಂದಿಸಿದ್ದ. ತ್ಯಾಜ್ಯ ಸುಡುವುದು ಕಾನೂನು ಬಾಹಿರ ಆಗಿರುವುದರಿಂದ ಆತನಿಗೆ ದಂಡ ವಿಧಿಸಲು ಅಧಿಕಾರಿಗಳಿಗೆ ಆಯುಕ್ತರು ನಿರ್ದೇಶನ ನೀಡಿದ್ದರು.

ಅದರಂತೆ ಥಣಿಸಂದ್ರ ವಾರ್ಡ್‌ನ ಕಿರಿಯ ಆರೋಗ್ಯ ಪರಿವೀಕ್ಷಕ ಹಾಗೂ ಮಾರ್ಷಲ್‌ಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ, ಎಳನೀರು ಮಾರಾಟ ಮಾಡುವ ಇಝಾಜ್ ಖಾನ್ ಎಂಬಾತ ಪ್ಲಾಸ್ಟಿಕ್ ಸುಡುತ್ತಿರುವುದು ಖಚಿತವಾಗಿದೆ. ಸ್ಥಳದಲ್ಲೇ 10,000 ರು. ದಂಡ ವಿಧಿಸಲಾಯಿತು. ಇನ್ನು ಮುಂದೆ ಈ ರೀತಿ ಕಸ ಸುಡದಂತೆ ಮತ್ತು ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯದಂತೆ ಎಚ್ಚರಿಕೆ ನೀಡಲಾಯಿತು ಎಂದು ಜಿಬಿಎ ಜಂಟಿ ಆಯುಕ್ತ ಮೊಹ್ಮದ್ ನಯೀಮ್ ಮೊಮಿನ್ ತಿಳಿಸಿದ್ದಾರೆ.

ಕಸದ ಬುಟ್ಟಿ ಬಳಸಲು ಜಾಗೃತಿ: ಸುನೀಲ್ ಕುಮಾರ್

ಅಂಗಡಿ ಮುಂಗಟ್ಟುಗಳ ಮಾಲೀಕರು ತ್ಯಾಜ್ಯ ಹಾಕಲು ಕಸದ ಬುಟ್ಟಿಯನ್ನು ಅಂಗಡಿಯ ಮುಂದೆ ಇಟ್ಟುಕೊಳ್ಳಬೇಕು.ರಸ್ತೆಯಲ್ಲಿ ಬೇಕಾಬಿಟ್ಟಿಯಾಗಿ ಕಸ ಎಸೆಯಬಾರದು ಎಂದು ಉತ್ತರ ನಗರ ಪಾಲಿಕೆಯ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಕೋರಿದ್ದಾರೆ.

ಶನಿವಾರ ಆಟೋ ಮಸ್ಟರಿಂಗ್ ಪಾಯಿಂಟ್ ಹಾಗೂ ಪೌರ ಕಾರ್ಮಿಕರ ಮಸ್ಟರಿಂಗ್ ಪಾಯಿಂಟ್‌ಗಳನ್ನು ಪರಿಶೀಲಿಸಿದ ಅವರು, ಅನೇಕ ವಾಣಿಜ್ಯ ಮಳಿಗೆಗಳು ತಮ್ಮ ಮಳಿಗೆಯಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುತ್ತಿಲ್ಲ. ಅಂಗಡಿ ಎದುರು, ಅಕ್ಕ-ಪಕ್ಕದಲ್ಲಿ ಅಥವಾ ರಸ್ತೆಯ ಮೂಲೆಯಲ್ಲಿ ಬೇಜವಾಬ್ದಾರಿಯಿಂದ ಬಿಸಾಡುತ್ತಾರೆ. ಇದರಿಂದ ನಗರದ ಅಂದಗೆಡುತ್ತಿದೆ. ಹೀಗಾಗಿ, ಸೂಕ್ತ ಕಸ ವಿಲೇವಾರಿಗೆ ಮಳಿಗೆ ಮಾಲೀಕರಲ್ಲಿ ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಅವರು ಸೂಚಿಸಿದ್ದಾರೆ.

ಪಾದಚಾರಿ ಒತ್ತುವರಿ ತೆರವು: ಒಎಮ್‌ಬಿಆರ್ ಲೇಔಟ್‌ನ 4ನೇ ಅಡ್ಡರಸ್ತೆಯ ಎರಡೂ ಬದಿಯಲ್ಲಿ ಒತ್ತುವರಿ ಮಾಡಿಕೊಂಡಿದ್ದ 20 ಬೀದಿ ಬದಿ ಅಂಗಡಿಗಳು, 12 ತಳ್ಳುಗಾಡಿಗಳು ಹಾಗೂ 400 ಮೀಟರ್ ಉದ್ದದ ಅನಧಿಕೃತ ಒಎಫ್‌ಸಿ ಕೇಬಲ್ ತೆರವುಗೊಳಿಸಲಾಗಿದೆ. ಅದೇ ರೀತಿ ಹೆಚ್.ಆರ್.ಬಿ.ಆರ್ ಲೇಔಟ್‌ನ 1ನೇ ಬ್ಲಾಕ್‌ನಲ್ಲಿ 9 ತಳ್ಳುಗಾಡಿಗಳನ್ನು ತೆರವುಗೊಳಿಸಲಾಗಿದೆ ಎಂದು ಉತ್ತರ ನಗರ ಪಾಲಿಕೆ ತಿಳಿಸಿದೆ.