- ಅಭಿವೃದ್ಧಿ ಮರೆತು ಅಧಿಕಾರಕ್ಕೆ ಹಪಾಹಪಿಸುತ್ತಿರುವ ಕಾಂಗ್ರೆಸ್ಸಿಗರು: ಬಿಜೆಪಿ ಮುಖಂಡ ಶಿವಕುಮಾರ ಆರೋಪ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಗ್ಯಾರಂಟಿ ಜಪ ಬಿಟ್ಟರೆ ಬೇರಾವುದೇ ಅಭಿವೃದ್ಧಿಕ ಕಾರ್ಯಗಳನ್ನೇ ಕೈಗೊಳ್ಳುತ್ತಿಲ್ಲ. ಭ್ರಷ್ಟಾಚಾರ, ಜನ ವಿರೋಧಿ ನೀತಿಯನ್ನು ಮರೆ ಮಾಡಲು, ತಮ್ಮ ಆಡ‍ಳಿತ ವೈಫಲ್ಯ ಮುಚ್ಚಿಕೊಳ್ಳಲು ಸಚಿವ ಪ್ರಿಯಾಂಕ್ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಆರೆಸ್ಸೆಸ್ ಜಪ ಮಾಡುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ ಕಿಡಿಕಾರಿದ್ದಾರೆ.

ಆಯಾ ಕ್ಷೇತ್ರಗಳ ಜನರ ಹಿತ ಕಾಯಬೇಕಾದ, ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕಾದ ಕಾಂಗ್ರೆಸ್ ಶಾಸಕರು ಅಧಿಕಾರದ ಅಮಲಿಗೆ ಬಿದ್ದು, ಸಚಿವ ಸ್ಥಾನಕ್ಕಾಗಿ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಇತ್ತ ತಮ್ಮ ಸರ್ಕಾರದ ವೈಫಲ್ಯ ಮರೆಮಾಚಲೆಂದೇ ಸಚಿವ ಪ್ರಿಯಾಂಕ್ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ ಆರೆಸ್ಸೆಸ್‌ ಜಪ ಮಾಡುವುದರಲ್ಲಿ ಮಗ್ನರಾಗಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ನಂತರ ಸಚಿವರ ಖಾತೆ ಖ್ಯಾತೆ ಶುರುವಾಗಿದೆ. ರಾಮಲಿಂಗಾ ರೆಡ್ಡಿ, ಸತೀಶ ಜಾರಕಿಹೊಳಿ, ಕೃಷ್ಣ ಭೈರೇಗೌಡ, ಕೆ.ಎಚ್.ಮುನಿಯಪ್ಪ ಸೇರಿದಂತೆ ಹಿರಿಯ ನಾಯಕರೇ ಬಹಿರಂಗವಾಗಿ ಬಂಡಾಯ ಎದ್ದಿದ್ದರು. ನಾಲ್ಕು ಬಾರಿಗೂ ಹೆಚ್ಚು ಶಾಸಕರಾದವರು ಜನರ ಕಾಳಜಿಗಿಂತ ಅಧಿಕಾರಕ್ಕಾಗಿ, ತಮಗೆ ಬೇಕಾದ ಇಲಾಖೆ ಸಚಿವ ಸ್ಥಾನಕ್ಕೆ ಲಾಬಿ ಮಾಡಲು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿಗಿಂತ ಅಧಿಕಾರವೇ ಹೆಚ್ಚಾಗಿರುವ ಕಾಂಗ್ರೆಸ್ಸಿಗರ ವಿರುದ್ಧ ಜನರು ರೊಚ್ಚಿಗೆದ್ದಿದ್ದಾರೆ ಎಂದು ಹೇಳಿದ್ದಾರೆ.


ಆರೆಸ್ಸೆಸ್ ಬಗ್ಗೆ ಮಾತನಾಡಿ ಜನರ ಗಮನ ಬೇರೆಡೆ ಸೆಳೆಯುವ ಉದ್ದೇಶದಿಂದ ಜವಾಬ್ಧಾರಿಯನ್ನು ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಿ.ಕೆ. ಹರಿಪ್ರಸಾದಗೆ ನೀಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಹಿಂದೂ ವಿರೋಧಿ ಸರ್ಕಾರವೆಂದೇ ಕರೆಯಲ್ಪಡುವ ಕಾಂಗ್ರೆಸ್ ಸರ್ಕಾರ ಕುಡಿಯುವ ನೀರಿನ ಸಮಸ್ಯೆ, ಹಾಳಾದ ಸರ್ಕಾರಿ ಶಾಲೆಗಳ ದುರಸ್ಥಿ, ಹದಗೆಟ್ಟ ರಸ್ತೆಗಳ ಅಭಿವೃದ್ಧಿ, ರೈತರ ಸಂಕಷ್ಟ ಪರಿಹರಿಸುವುದನ್ನು ಬಿಟ್ಟು ಆರೆಸ್ಸೆಸ್‌ ವಿರುದ್ಧ ಮಾತನಾಡುತ್ತಿದೆ. ಪ್ರಿಯಾಂಕ್ ಖರ್ಗೆ, ಬಿ.ಕೆ. ಹರಿಪ್ರಸಾದಗೆ ಸಂಘ ಪರಿವಾರದ ಬಗ್ಗೆ ಮಾತನಾಡಲು ನೈತಿಕತೆ ಇದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

ಪ್ರಿಯಾಂಕ್ ಖರ್ಗೆ ತಂದೆ ಮಲ್ಲಿಕಾರ್ಜುನ ಖರ್ಗೆ ಗೃಹ ಸಚಿವರಿದ್ದರೂ ಆರೆಸ್ಸೆಸ್‌ಗೆ ಏನೂ ಮಾಡಲಾಗಲಿಲ್ಲ. ಜವಾಹರ ಲಾಲ್ ನೆಹರು, ಇಂದಿರಾ ಗಾಂಧಿಯಂತಹ ನಾಯಕರೇ ಸಂಘದ ಶಿಸ್ತು, ಸಂಘಟನೆ, ಹಿಂದುತ್ವಕ್ಕಾಗಿನ ಹೋರಾಟ, ಪ್ರಕೃತಿ ವಿಕೋಪದ ವೇಳೆ ಸಹಾಯಕ್ಕೆ ಧಾವಿಸುವುದೂ ಸೇರಿದಂತೆ ಎಲ್ಲ ಕಾರ್ಯ ಚಟುವಟಿಕೆ ಮೆಚ್ಚಿದ್ದಾರೆ. ಕಾಂಗ್ರೆಸ್ ಪಕ್ಷದ ಎಷ್ಟೋ ಶಾಸಕರು ಈಗಲೂ ಆರೆಸ್ಸೆಸ್ ತತ್ವ, ಸಿದ್ಧಾಂತ ಒಪ್ಪುತ್ತಾರೆ ಎಂದು ತಿಳಿಸಿದ್ದಾರೆ.

ಅಷ್ಟೇ ಯಾಕೆ, ಸ್ವತಃ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನಮಸ್ತೇ ಸದಾ ವತ್ಸಲೆಯೆಂಬ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಧಿಕೃತ ಪ್ರಾರ್ಥನೆಯನ್ನು ವಿಧಾನಸಭೆ ಮತ್ತು ಹೊರಗಡೆ ಹೇಳಿದ್ದಾರೆ. ಇಷ್ಟೊಂದು ಪಾವಿತ್ರ್ಯತೆ, ಮಹತ್ವ, ಇತಿಹಾಸವನ್ನು ಹೊಂದಿರುವ ಆರೆಸ್ಸೆಸ್‌ ಬಗ್ಗೆ ಲಘುವಾಗಿ, ವಿನಾಕಾರಣ ಆರೋಪ ಮಾಡುವುದನ್ನು ಪ್ರಿಯಾಂಕ್ ಖರ್ಗೆ, ಬಿ.ಕೆ. ಹರಿಪ್ರಸಾದ ಬಿಡದಿದ್ದರೆ ರಾಜ್ಯದ ಜನತೆ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸುವ ದಿನ ದೂರವಿಲ್ಲ ಎಂದು ರಾಜನಹಳ್ಳಿ ಶಿವಕುಮಾರ ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.

- - -

-13ಕೆಡಿವಿಜಿ10: ರಾಜನಹಳ್ಳಿ ಶಿವಕುಮಾರ.