ಕನ್ನಡಪ್ರಭ ವಾರ್ತೆ ವಿಜಯಪುರ
ಯಾವ ಸಂಘ-ಸಂಸ್ಥೆ ಸರ್ಕಾರದಿಂದ ಅನುದಾನ ಪಡೆಯಬೇಕೆಂದು ಬಯಸುತ್ತದೆಯೋ ಅಂತವು ನೋಂದಣಿ ಮಾಡಿಕೊಳ್ಳುತ್ತವೆ. ಸರ್ಕಾರದಿಂದ ಸಹಾಯ ಪಡೆಯಲಿಚ್ಛಸದ ಯಾವುದೇ ಸಂಸ್ಥೆ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕೆಂಬ ನಿಯಮ ಭಾರತದ ಸಂವಿಧಾನದಲ್ಲಿಲ್ಲ. ಹಾಗಾಗಿ ಆರ್‌ಎಸ್‌ಎಸ್ ಕೂಡ ನೋಂದಾಯಿಸಿಕೊಳ್ಳುವ ಅವಶ್ಯಕತೆಯಿಲ್ಲ ಎಂಬುವುದನ್ನು ಗೃಹ ಸಚಿವ ಪ್ರಿಯಾಂಕ ಖರ್ಗೆ ಅರಿತುಕೊಳ್ಳಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಚಾಟಿ ಬೀಸಿದರು.ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1925ರಲ್ಲಿ ಆರಂಭವಾಗಿರುವ ಆರ್‌ಎಸ್‌ಎಸ್ ಕಾನೂನು ಬಿಟ್ಟು ಯಾವುದೇ ಕೆಲಸ ಮಾಡಿಲ್ಲ. ಸಾಕಷ್ಟು ಬಾರಿ ಆರ್‌ಎಸ್‌ಎಸ್ ಮೇಲೆ ಹಲವು ಕೇಸುಗಳಾದಾಗಲೂ ಅದು ಕಾನೂನು ಮೂಲಕ ಹೋರಾಟ ಮಾಡಿ ಗೆದ್ದಿದೆ. ಇದೀಗ ಮತ್ತೆ ಆರ್‌ಎಸ್‌ಎಸ್ ಬಗ್ಗೆ ಕೇಳುವ ಕಾಂಗ್ರೆಸ್ ನಾಯಕರಿಗೆ ಸೋಲುವ ಪ್ರಶ್ನೆಯೇ ಇಲ್ಲ. ಗೃಹ ಸಚಿವ ಪ್ರಿಯಾಂಕ ಖರ್ಗೆ ಆರ್‌ಎಸ್‌ಎಸ್ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಗೃಹ ಸಚಿವರಾಗಿರುವ ಖರ್ಗೆ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಕಳೆದ 100 ವರ್ಷಗಳಿಂದಲೂ ಕಿರಿಕಿರಿ ಮಾಡಿತ್ತಿರುವ ಕಾಂಗ್ರೆಸ್‌ನವರೇ ಸೋತು ಆರ್‌ಎಸ್ಎಸ್ ಬಗ್ಗೆ ಅಭಿಮಾನ ತೋರಿಸಿದ್ದಾರೆ. ಪ್ರಿಯಾಂಕ ಖರ್ಗೆ ಅವರಿಗೆ ಆರ್‌ಎಸ್‌ಎಸ್‌ಗೆ ಏನು ಮಾಡಲು ಆಗುವುದಿಲ್ಲ. ಹಾಗಾಗಿ ಇವರು ಆ ವಿಚಾರ ಬಿಟ್ಟು ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡಬೇಕೆಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ. ಆದರೆ, ಅದನ್ನೇ ಅಪಾರ್ಥವಾಗಿ ಕಲ್ಪಿಸಲಾಗುತ್ತಿದೆ. ರಾಜ್ಯ ಹಾಗೂ ಕೇಂದ್ರದಲ್ಲೂ ಮಂತ್ರಿಗಳಾದ ಜಿಗಜಿಣಗಿಯವರು ಖರ್ಗೆ ಬಗ್ಗೆ ಕೇಡು ಮಾತನಾಡಿಲ್ಲ. ಹಾಗಾಗಿ ಯಾರೂ ಸಹ ಸಂಸದರ ಬಗ್ಗೆ ಕೇವಲವಾಗಿ ಮಾತನಾಡಬಾರದು ಎಂದು ವಿನಂತಿಸಿದರು.ಮುಖಂಡ ಚಿದಾನಂದ ಚಲವಾದಿ ಮಾತನಾಡಿ, ಜಿಗಜಿಣಗಿಯವರು ಖರ್ಗೆ ಕುಟುಂಬದ ಬಗ್ಗೆ ವಿರೋಧ ವ್ಯಕ್ತಪಡಿಸಿಲ್ಲ. ದಲಿತ ಸಮಾಜದಲ್ಲಿ ಖರ್ಗೆ ಹಾಗೂ ಜಿಗಜಿಣಗಿಯವರು ಎರಡು ಕಣ್ಣುಗಳಿದ್ದಂತೆ. ರಾಜ್ಯದ ಸಿಎಂ ಅವರು ಸದನದಲ್ಲಿ ಸಂಘದ ಗೀತೆ ಹೇಳುತ್ತಾರೆ. ನೀನು ಯಾಕೆ ಅದರ ಬಗ್ಗೆ ಮಾತನಾಡುತ್ತಿಯಾ ಎಂದು ಖರ್ಗೆಗೆ ಬುದ್ದಿಮಾತು ಹೇಳಿದ್ದಾರೆ. ಇದರ ಉದ್ದೇಶ ಕೊಟ್ಟ ಖಾತೆಯಲ್ಲಿ ಚೆನ್ನಾಗಿ ಆಡಳಿತ ನಡೆಸಿ ಹೆಸರು ಮಾಡು ಎಂದು. ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾದರೆ ಮೊದಲು ನಾನು ಸಂತಸಪಡುತ್ತೇನೆ ಎಂದಿರುವ ಜಿಗಜಿಣಗಿಯವರ ಬಗ್ಗೆ ಅನರ್ಥ ಅಥವಾ ಅಪಾರ್ಥ ಕಲ್ಪಿಸಬಾರದು. ಕೆಲವು ದಲಿತ ಸಂಘಟನೆಗಳು ಜಿಗಜಿಣಗಿ ಅವರ ಬಗ್ಗೆ ಕೇವಲವಾಗಿ ಮಾತನಾಡುತ್ತಿದ್ದು, ಹಾಗೆ ಮಾತನಾಡಬಾರದು. ಈ ವಿಷಯ ಬೆಳೆಸದೆ ಇಲ್ಲಿಗೆ ಮುಕ್ತಾಯಗೊಳಿಸಬೇಕು ಎಂದು ದಲಿತಪರ ಸಂಘಟನೆಗಳಲ್ಲಿ ಕೋರಿದರು.
ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮಂಜುನಾಥ ಮೀಸೆ ಮಾತನಾಡಿ, ಆರ್‌ಎಸ್‌ಎಸ್ ಬಗ್ಗೆ ಟೀಕೆ ಮಾಡಿದರೇ ನಾನು ದೇಶಾದ್ಯಂತ ಚರ್ಗೆಗೆ ಬಂದು ಕಾಂಗ್ರೆಸ್ ಹೈಕಮಾಂಡ್ ಗಮನ ಸೆಳೆದು, ಹೈಕಮಾಂಡ್ ನವರು ನನಗೆ ಸಿಎಂ ಮಾಡಬಹುದು ಎಂಬ ಆಸೆಯಿಂದ ಪ್ರಿಯಾಂಕ ಖರ್ಗೆ ಅವರು ಆರ್‌ಎಸ್‌ಎಸ್ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ. ಅಧಿಕಾರ ಪಡೆಯಲು ಖರ್ಗೆ ಅವರು ಆರ್‌ಎಸ್‌ಎಸ್ ವಿರೋಧಿಸುತ್ತಿದ್ದಾರೆ. ಇಡಿ ದೇಶದಲ್ಲಿ ಜನರು ಜಾತಿ ಬಿಟ್ಟು ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗವಹಿಸುತ್ತಾರೆ. ದೇಶದ ಬಗ್ಗೆ ಚಿಂತಿಸುವ ರಾಷ್ಟ್ರೀಯ ಸಂಘವನ್ನು ರಾಜಕೀಯ ಲಾಭಕ್ಕಾಗಿ ಖರ್ಗೆ ವಿರೋಧಿಸುತ್ತಿದ್ದಾರೆ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ಮುಖಂಡರಾದ ಈರಣ್ಣ ರಾವೂರ, ವಿಜಯ ಜೋಶಿ, ಲಿಂಗಪ್ಪ ಅಂಗಡಿ ಇದ್ದರು.
ಆರ್‌ಎಸ್‌ಎಸ್ ಕಾರ್ಯಕರ್ತರು ಬಿಜೆಪಿ ಮಾತ್ರವಲ್ಲದೆ ಕಾಂಗ್ರೆಸ್‌ನಲ್ಲೂ ಇದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳಿಗೆ ಹಿಂದೂಗಳು ಹಾಗೂ ಆರ್‌ಎಸ್ಎಸ್‌ನವರು ವೋಟು ಹಾಕೋದಿಲ್ಲವೇ?. ಆದರೂ ಏಕೆ ಆರ್‌ಎಸ್‌ಎಸ್ ಅನ್ನು ಖಂಡಿಸುತ್ತಿದ್ದೀರಿ?. ನಿಮ್ಮಲ್ಲಿ ಹಿಂದುತ್ವದ ಬಗ್ಗೆ ಗೌರವ ಇದ್ದರೇ ಕಾಂಗ್ರೆಸ್‌ನಲ್ಲಿರುವ ಹಿಂದೂಗಳು ಇದಕ್ಕೆ ತಕ್ಷಣ ಉತ್ತರ ಕೊಡಬೇಕು.- ಗುರುಲಿಂಗಪ್ಪ ಅಂಗಡಿ ಬಿಜೆಪಿ ಜಿಲ್ಲಾಧ್ಯಕ್ಷ