ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಾರ್ಷಿಕೋತ್ಸವ ಹಾಗೂ ವಿಜಯದಶಮಿ ಹಬ್ಬದ ನಿಮಿತ್ಯ ಪಟ್ಟಣದಲ್ಲಿ ಮಂಗಳವಾರ ನಡೆದ ಪಥಸಂಚಲನ ನೋಡುಗರ ಗಮನ ಸೆಳೆಯಿತು. ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ಘೋಷ್ ಪಥಸಂಚಲನ ಹೊರಟಿತು. ಈ ಸಂದರ್ಭ ಕಣ್ತುಂಬಿಕೊಳ್ಳಲು ಸುತ್ತಮುತ್ತಲಿನ ಊರುಗಳಿಂದ ಭಾರೀ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು.ಪಟ್ಟಣ ಕೇಸರಿ ಬಂಟಿಂಗ್ಸ್ ಹಾಗೂ ಫ್ಲೆಕ್ಸ್‌ಗಳು ಗಮನ ಸೆಳೆದವು. ಪಥಸಂಚಲನ ಆಗಮಿಸುವಾಗ ಮಹಿಳೆಯರು ರಂಗೋಲಿ ಬಿಡಿಸಿ ಪಥಸಂಚಲನ ಸ್ವಾಗತಿಸಿದರು. ಕ್ರಾಂತಿಕಾರಿಗಳ ವೇಷಭೂಷಣದಲ್ಲಿ ಮಕ್ಕಳು ಮಿಂಚಿದರು. ಪಥ ಸಂಚಲನ ಕಣ್ತುಂಬಿಕೊಳ್ಳಲು ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರು. ಪಥ ಸಂಚಲನ ಗುರುವಾರ ಪೇಟೆ ಮತ್ತು ಸೋಮವಾರ ಪೇಟೆಯ ವಿವಿಧ ಬೀದಿಗಳಲ್ಲಿ ಸಂಚರಿಸಿ ಕೊನೆಗೆ ಗುರುಸಿದ್ದೇಶ್ವರ ಮೈದಾನದಲ್ಲಿ ಕೊನೆಗೊಂಡು ಸಭೆ ಜರುಗಿತು. ಆರ್‌ಎಸ್ಎಸ್ ಉತ್ತರ ಪ್ರಾಂತ ಬೌದ್ಧಿಕ ಪ್ರಮುಖ ರಾಮಚಂದ್ರ ಏಡಕೆ ಮಾತನಾಡಿ, ಹಿಂದೂ ಸಮಾಜದ ಮುಂದೆ ಪಂಚ ಪರಿವರ್ತನೆ ಆಗುವ ಉದ್ದೇಶ ತೆಗೆದುಕೊಂಡು ಕೆಲಸ ಮಾಡುತ್ತಿದೆ. ಕುಟುಂಬ ಪ್ರಬೋಧನ, ಸಾಮಾಜಿಕ ಸಾಮರಸ್ಯ, ಪರಿಸರ ಸಂರಕ್ಷಣೆ, ಸ್ವದೇಶಿ ಹಾಗೂ ನಾಗರಿಕ ಶಿಷ್ಟಾಚಾರ ಈ ಐದು ಪರಿವರ್ತನೆ ಹಿಂದೂ ಸಮಾಜದಲ್ಲಿ ಆಗಬೇಕು ಎಂಬುದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಪೇಕ್ಷೆಯಾಗಿದೆ ಎಂದು ಹೇಳಿದರು. ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಆರ್ಶಿವಚನ ನೀಡಿದರು. ಮುಖ್ಯ ಅಥಿತಿಯಾಗಿ ವೈದ್ಯ ಗುರುಸಿದ್ದಯ್ಯ ಕಲ್ಮಠ ಮಾತನಾಡಿದರು. ಈ ಸಂದರ್ಭದಲ್ಲಿ ಮಹಿಳೆಯರು ಉಪಸ್ಥಿತರಿದ್ದರು. ನೂರಾರು ಸ್ವಯಂ ಸೇವಕರು ಪಥ ಸಂಚಲನದಲ್ಲಿ ಭಾಗವಹಿಸಿದರು.
ಸಂಘದ ಉದ್ದೇಶ ಹಿಂದೂಗಳ ಸಂಘಟನೆ ಮಾಡುವುದಾಗಿದೆ. ಹಿಂದೂ ಸಮಾಜದ ಯುವಕರನ್ನು ಮಾದಕ ವ್ಯಸನಕ್ಕೆ ದೂಡುವ ದೊಡ್ಡ ಷಡ್ಯಂತ್ರ ನಡೆದಿದೆ. ಅದರ ವಿರುದ್ಧ ಈ ಸಂಘ ಹಿಂದೂ ಸಮಾಜದ ಯುವಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಹಿಂದೂ ಸಮಾಜದಲ್ಲಿ ಅಸ್ಪೃಶ್ಯತೆ ಹೋಗಬೇಕಾಗಿದೆ. ಬ್ರಿಟಿಷರು ನಮ್ಮನ್ನು ಜಾತಿ ಭಾಷೆ ಮುಖಾಂತರ ಒಡೆದರು.-ರಾಮಚಂದ್ರ ಏಡಕೆ, ಆರ್‌ಎಸ್ಎಸ್ ಉತ್ತರ ಪ್ರಾಂತ ಬೌದ್ಧಿಕ ಪ್ರಮುಖರು.