ಆರ್ ಎಸ್ ಎಸ್ ಕಚೇರಿಗೆ ನುಗ್ಗಿ ಪೊಲೀಸರಿಂದ ದಾಂಧಲೆ ಆರೋಪ: ಪ್ರತಿಭಟನೆ

| Published : Sep 17 2024, 12:52 AM IST

ಸಾರಾಂಶ

ಠಾಣೆ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಡಿವೈಎಸ್ಪಿ ಮುರಳಿ ಹಾಗೂ ಸರ್ಕಲ್ ಇನ್ಸ್ ಪೆಕ್ಟರ್ ವಿವೇಕನಂದ ಅವರ ವಿರುದ್ದ ಆಕ್ರೋಶ ಹೊರಹಾಕಿದರು. ಇಬ್ಬರು ಪೊಲೀಸರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ, ಪ್ರತಿಭಟನಾ ಸ್ಥಳದಲ್ಲಿಯೇ ಅಡುಗೆ ಮಾಡಿ ಮಧ್ಯಾಹ್ನದ ಊಟ ಮಾಡಿ ಆಕ್ರೋಶ ಹೊರಹಾಕಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಆರ್‌ಎಸ್‌ಎಸ್ ಕಚೇರಿಗೆ ಪೊಲೀಸರು ನುಗ್ಗಿ ಸಂಘದ ಪ್ರಚಾರಕರು ಹಾಗೂ ಸ್ವಯಂ ಸೇವಕರನ್ನು ಎಳೆದಾಡಿ ದಾಂಧಲೆ ಮಾಡಿದ್ದಾರೆ ಎಂದು ಆರೋಪಿಸಿ ಆರ್‌ಎಸ್‌ಎಸ್ ಹಾಗೂ ಬಜರಂಗದಳ, ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಪಟ್ಟಣದ ಪೊಲೀಸ್ ಠಾಣೆ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಠಾಣೆ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಡಿವೈಎಸ್ಪಿ ಮುರಳಿ ಹಾಗೂ ಸರ್ಕಲ್ ಇನ್ಸ್ ಪೆಕ್ಟರ್ ವಿವೇಕನಂದ ಅವರ ವಿರುದ್ದ ಆಕ್ರೋಶ ಹೊರಹಾಕಿದರು. ಇಬ್ಬರು ಪೊಲೀಸರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ, ಪ್ರತಿಭಟನಾ ಸ್ಥಳದಲ್ಲಿಯೇ ಅಡುಗೆ ಮಾಡಿ ಮಧ್ಯಾಹ್ನದ ಊಟ ಮಾಡಿ ಆಕ್ರೋಶ ಹೊರಹಾಕಿದರು.

ವಿಷಯ ತಿಳಿದು ಸ್ಥಳಕ್ಕೆ ಮಾಜಿ ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ, ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಸೇರಿದಂತೆ ಹಲವರು ಭೇಟಿಕೊಟ್ಟು ಪ್ರತಿಭಟನೆಗೆ ಸಾಥ್ ನೀಡಿದರು.

ಪಟ್ಟಣದ ಆರ್‌ಎಸ್‌ಎಸ್ ಕಚೇರಿಯಲ್ಲಿ ಕಾರ್ಯಕರ್ತರು ನಡೆಸುತ್ತಿರುವ ಸಭೆಯಲ್ಲಿ ಆರ್‌ಎಸ್‌ಎಸ್ ಪ್ರಚಾರಕ ಶರಣು ಪಂಪ್ ವೇಲ್ ಹಾಗೂ ಪುನೀತ್ ಭಾಗವಹಿಸಿದ್ದಾರೆ ಎಂಬ ಮಾಹಿತಿ ಮೇಲೆ ಡಿವೈಎಸ್ಪಿ ಮುರುಳಿ ಹಾಗೂ ಸರ್ಕಲ್ ಇನ್ಸ್ ಪೆಕ್ಟರ್ ವಿವೇಕಾನಂದ ಅವರು ಶೂ ಕಾಲಿನಲ್ಲಿಯೇ ಕಚೇರಿಗೆ ನುಗ್ಗಿ ಅಲ್ಲಿದ್ದ ಪ್ರಚಾರಕರು ಹಾಗೂ ಸ್ವಯಂ ಸೇವಕರನ್ನು ಎಳೆದಾಡಿ ದಾಂಧಲೆ ನಡೆಸಿದ್ದಾರೆ ಎಂದು ದೂರಿದರು.

ಆರ್ ಎಸ್ ಎಸ್ ಕಚೇರಿಯನ್ನು ನಾವು ದೇವಸ್ಥಾನವೆಂದು ಪೂಜಿಸುತ್ತೇವೆ. ನೀವು ಹುಡುಕಿಕೊಂಡು ಬಂದಿರುವ ಶರಣು ಪಂಪ್ ವೇಲ್ ಹಾಗೂ ಪುನೀತ್ ಅವರು ಇಲ್ಲಿಲ್ಲ ಎಂದು ಹೇಳಿದರೂ ಪೊಲೀಸರು ಶೂ ಕಾಲಿನಲ್ಲಿಯೇ ಬಂದು ದಾಂಧಲೆ ನಡೆಸಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ದೇಶದಲ್ಲೇ ಇದು ಮೊದಲ ಪ್ರಕರಣವಾಗಿದೆ. ಆರ್ ಎಸ್ ಎಸ್ ಕಚೇರಿಯಲ್ಲಿ ಪ್ರಚಾರಕರು ಇದ್ದಾರೆ ಎಂದು ಗುಪ್ತ ಮಾಹಿತಿ ನೀಡುವ ಪೊಲೀಸರಿಗೆ ನಾಗಮಂಗದಲ್ಲಿ ನಡೆದ ಘಟನೆ ಕುರಿತು ಗುಪ್ತ ಮಾಹಿತಿ ನೀಡಿರಲಿಲ್ಲವೇ? ಅದು ಪೂರ್ವನಿಯೋಜಿತ ಘಟನೆಯೇ ಎಂದು ಕಿಡಿಕಾರಿದರು.

ಪ್ರತಿಭಟನಾ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಚರ್ಚಿಸಿದರು. ಪ್ರಕರಣದ ಸಂಬಂಧ ನೀವು ನೀಡುವ ಲಿಖಿತ ಮನವಿ ಸ್ವೀಕರಿಸಿ ಮೇಲಾಧಿಕಾರಿಗಳ ಗಮನಕ್ಕೆ ತಂದು ತನಿಖೆ ನಡೆಸಿ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

ಇದಕ್ಕೆ ಒಪ್ಪದ ಕಾರ್ಯಕರ್ತರು ಡಿವೈಎಸ್ಪಿ ಮುರುಳಿ ಹಾಗೂ ಸರ್ಕಲ್ ಇನ್ಸ್ ಪೆಕ್ಟರ್ ವಿವೇಕಾನಂದ ಅವರನ್ನು ಸಸ್ಪೆಂಡ್ ಮಾಡಬೇಕು. ಸಸ್ಪೆಂಡ್ ಮಾಡಲು ನಿಮಗೆ ಅಧಿಕಾರ ಇಲ್ಲದಿದ್ದರೆ ಮೇಲಾಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸುವಂತೆ ಪಟ್ಟಹಿಡಿದರು. ನಂತರ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ, ಬಳಿಕ ಘಟನೆ ಸಂಬಂಧ ಡಿವೈಎಸ್‌ಪಿ ಮುರುಳಿ ಹಾಗೂ ಸರ್ಕಲ್ ಇನ್‌ಪೆಕ್ಟರ್ ವಿವೇಕನಾಂದರನ್ನು ಬೇರೆಡೆಗೆ ನಿಯೋಜನೆ ಮಾಡಿ, ಪ್ರಕರಣದ ಬಗ್ಗೆ ತನಿಖೆಯನ್ನು ಹೊರ ಜಿಲ್ಲೆಯ ಪೊಲೀಸ್ ಅಧಿಕಾರಿಗಳಿಂದ ಸೂಕ್ತ ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದು ಕೊಳ್ಳಲಾಗುವುದು ಎಂದು ಭರವಸೆ ಮೇರೆಗೆ ಪ್ರತಿಭಟನೆಯನ್ನು ವಾಪಸ್ಸು ಪಡೆಯಲಾಯಿತು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ಮೈಶುಗರ್ ಮಾಜಿ ಅಧ್ಯಕ್ಷ ಜೆ.ಶಿವಲಿಂಗೇಗೌಡ, ಮುಖಂಡರಾದ ಎಚ್.ಎನ್.ಮಂಜುನಾಥ್, ಬಜರಂಗದಳದ ಮಾರ್ಕಂಡಯ್ಯ, ಬಿಜೆಪಿ ಅಧ್ಯಕ್ಷ ಧನಂಜಯ, ಚಿಕ್ಕಮರಳಿ ನವೀನ್, ರಾಮು, ನಿರಂಜನ್‌ಬಾಬು ಸೇರಿ ಹಲವರು ಹಿಂದೂ ಕಾರ್ಯಕರ್ತರು ಭಾಗವಹಿಸಿದ್ದರು.

ಮಧ್ಯರಾತ್ರಿ ಪ್ರತಿಭಟನೆ:

ಪಟ್ಟಣದ ಆರ್‌ಎಸ್‌ಎಸ್ ಕಚೇರಿಗೆ ಪೊಲೀಸರು ನುಗ್ಗಿದ ಪ್ರಕರಣವನ್ನು ಖಂಡಿಸಿ ಭಾನುವಾರ ಮಧ್ಯೆರಾತ್ರಿಯೇ ಆರ್‌ಎಸ್‌ಎಸ್ ಕಾರ್‍ಯಕರ್ತರು ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಘಟನೆಗೆ ಕಾರಣರಾದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಜರುಗಿಸಬೇಕೆಂದು ಪಟ್ಟಹಿಡಿದಿದ್ದರು. ಬಳಿಕ ಮಧ್ಯರಾತ್ರಿಯೇ ಸ್ಥಳಕ್ಕೆ ಆಗಮಿಸಿದ ಎಸ್‌ಪಿ ಮಲ್ಲಿಕಾರ್ಜುನಬಾಲದಂಡಿ ಅವರು ಕಾರ್‍ಯಕರ್ತರ ಮನವೊಲಿಸಿ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದರು.