ಆರ್‌ಎಸ್‌ಎಸ್‌ ಶತಾಬ್ದಿ; ರಾಜ್ಯಾದ್ಯಂತ ಪಥ ಸಂಚಲನ

| Published : Oct 13 2025, 02:01 AM IST

ಸಾರಾಂಶ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ಹಿನ್ನೆಲೆಯಲ್ಲಿ ಬೆಂಗಳೂರು, ಮೈಸೂರು, ಕಲಬುರಗಿ, ಧಾರವಾಡ ಸೇರಿ ರಾಜ್ಯಾದ್ಯಂತ ಭಾನುವಾರ ಗಣವೇಷಧಾರಿ ಸ್ವಯಂಸೇವಕರಿಂದ ಆಕರ್ಷಕ ಪಥ ಸಂಚಲನ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ಹಿನ್ನೆಲೆಯಲ್ಲಿ ಬೆಂಗಳೂರು, ಮೈಸೂರು, ಕಲಬುರಗಿ, ಧಾರವಾಡ ಸೇರಿ ರಾಜ್ಯಾದ್ಯಂತ ಭಾನುವಾರ ಗಣವೇಷಧಾರಿ ಸ್ವಯಂಸೇವಕರಿಂದ ಆಕರ್ಷಕ ಪಥ ಸಂಚಲನ ನಡೆಯಿತು.

ಬೆಂಗಳೂರಿನಲ್ಲಿ ಒಂದೇ ದಿನ ನೂರು ಸ್ಥಳದಲ್ಲಿ ​ಪಥ ಸಂಚಲನ ಆಯೋಜನೆ ಮಾಡಲಾಗಿತ್ತು. ಅದರಂತೆ ಪದ್ಮನಾಭನಗರ, ಜಯನಗರ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ಸೇರಿ ಬೆಂಗಳೂರಿನ 100 ಸ್ಥಳಗಳಲ್ಲಿ ಆರ್​​ಎಸ್​ಎಸ್​​ ಕಾರ್ಯಕರ್ತರು ಪಥಸಂಚಲನ ಮಾಡಿದರು. ಬಿಜೆಪಿ ನಾಯಕರಾದ ಆರ್‌.ಅಶೋಕ್‌, ಸಂಸದ ಪಿ.ಸಿ.ಮೋಹನ್‌, ತೇಜಸ್ವಿ ಸೂರ್ಯ, ಅಶ್ವತ್ಥ್‌ ನಾರಾಯಣ, ಮುನಿರತ್ನ ಮತ್ತಿತರರು ಪಥ ಸಂಚಲನದಲ್ಲಿ ಭಾಗಿಯಾಗಿದ್ದರು.

ಬೆಂಗಳೂರು ನಗರ ಜಿಲ್ಲೆ ಆನೇಕಲ್‌ ತಾಲೂಕಿನ ಅತ್ತಿಬೆಲೆಯಲ್ಲಿ ಮಾಜಿ ಕೇಂದ್ರ ಸಚಿವ ನಾರಾಯಣಸ್ವಾಮಿ ಅವರು ಪೂಜೆ ಸಲ್ಲಿಸಿ, ಪ್ರಭಾತ ಭೇರಿಗೆ ಚಾಲನೆ ನೀಡಿದರು. ಬಳಿಕ, ಶಿಸ್ತಿನ ಸಿಪಾಯಿಗಳಂತೆ ಗಣವೇಷಧಾರಿಗಳು ಪಥ ಸಂಚಲನ ನಡೆಸಿದಾಗ ರಸ್ತೆಯ ಇಕ್ಕೆಲಗಳಲ್ಲಿ ಜನರು ಹೂಗಳನ್ನು ಚಿಮ್ಮಿಸಿ ಗೌರವ ಸಲ್ಲಿಸಿದರು. ಪಟ್ಟಣದ ಪ್ರಮುಖ ವೃತ್ತ, ರಸ್ತೆಯ ತಿರುವುಗಳಲ್ಲಿ ಭಾರತ ಮಾತೆ, ಆರ್‌ಎಸ್‌ಎಸ್‌ ಸಂಸ್ಥಾಪಕರಾದ ಕೇಶವ ಬಲರಾಮ್ ಹೆಡ್ಗೆವಾರ್, ಗುರೂಜಿ ಮಾಧವ ಸದಾಶಿವ ಗೋಲ್ವಾಲ್ಕರ್‌ ಅವರ ಫೋಟೊಗಳನ್ನು ಇಟ್ಟು ಪೂಜಿಸಿ, ನಮಿಸಲಾಯಿತು. ಮಾತೆಯರು, ಗಣವೇಷಧಾರಿಗಳು ಬರುವ ಮಾರ್ಗದಲ್ಲಿ ನೀರು ಚೆಲ್ಲಿ, ರಂಗೋಲಿ ಬಿಟ್ಟು, ಹೂವು ಚೆಲ್ಲಿ ಸಂಭ್ರಮಿಸಿದರು. ಬೋಲೋ ಭಾರತ್ ಮಾತಾಕಿ ಜೈ, ಜೈ ಶ್ರೀರಾಮ್‌ ಘೋಷಣೆಗಳು ಮುಗಿಲು ಮುಟ್ಟಿದ್ದವು.

ಚಿತ್ರದುರ್ಗದಲ್ಲಿ ರಂಗಯ್ಯನ ಬಾಗಿಲು ಬಳಿಯಿಂದ ನಗರದ ಮುಖ್ಯರಸ್ತೆಗಳಲ್ಲಿ ಪಥ ಸಂಚಲನ ಸಾಗಿತು. ಶಿವಮೊಗ್ಗದಲ್ಲಿ ನಗರದ ವಿವಿಧ 38 ಶಾಖೆಗಳಿಂದ ಸ್ವಯಂ ಸೇವಕರು ಭಾಗವಹಿಸಿದ್ದರು. ಗದಗಿನಲ್ಲಿ ನಡೆದ ಪಥಸಂಚಲನದಲ್ಲಿ 1,500ಕ್ಕೂ ಹೆಚ್ಚು ಗಣವೇಷಧಾರಿಗಳು ಭಾಗಿಯಾಗಿದ್ದರು. ಈ ವೇಳೆ, ಆರ್​ಎಸ್ಎಸ್ ವೇಷಭೂಷಣ ತೊಟ್ಟು ಪುಟಾಣಿಗಳು ಗಮನ ಸೆಳೆದರು.

ಕಲಬುರಗಿಯಲ್ಲಿ ನಗರದ ಎಪಿಎಂಸಿ ಆವರಣದಿಂದ ಅಪ್ಪನ ಜಾತ್ರಾ ಮೈದಾನದವರೆಗೆ ನಡೆದ ಆಕರ್ಷಕ ಪಥಸಂಚಲನದಲ್ಲಿ 2,079 ಗಣವೇಷಧಾರಿಗಳು ಭಾಗಿಯಾಗಿದ್ದರು. ಬಳಿಕ, ಶರಣ ಬಸವೇಶ್ವರರ ಜಾತ್ರಾ ಮೈದಾನದಲ್ಲಿ ಸಾರ್ವಜನಿಕ ಸಮಾರಂಭ ನಡೆಯಿತು. ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಬಸವಪಟ್ಟಣದ ಬೀರಲಿಂಗೇಶ್ವರ ದೇವಸ್ಥಾನದ ಪೀಠಾಧಿಪತಿ ಮರೆಪ್ಪಮುತ್ಯಾರವರು ವಹಿಸಿದ್ದರು.

ರಾಯಚೂರು ಜಿಲ್ಲೆ ಮಸ್ಕಿಯಲ್ಲಿ ಪಥ ಸಂಚಲನ ಸಂಚರಿಸುವ ದಾರಿಯುದ್ದಕ್ಕೂ ಮನೆಗಳ ಮುಂದೆ ರಂಗೋಲಿ ಹಾಕಿ, ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿತ್ತು. ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಚಿಕ್ಕ ಚಿಕ್ಕ ಮಕ್ಕಳು ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ ಸೇರಿದಂತೆ ರಾಷ್ಟ್ರ್ರಪುರುಷರ ವೇಷಭೂಷಣ ತೊಟ್ಟು ನಿಂತು ಪಥ ಸಂಚಲನಕ್ಕೆ ಸ್ವಾಗತ ಕೋರಿದರು. ಮನೆಗಳ ಮೇಲಿಂದ ಭಗವಾನ್‌ ಧ್ವಜಕ್ಕೆ ಹಾಗೂ ಸ್ವಯಂ ಸೇವಕರ ಮೇಲೆ ಪುಷ್ಪಾರ್ಪಣೆ ಮಾಡಿ ಜನ ಗೌರವ ಸಲ್ಲಿಸಿದರು. ಕಾರವಾರದಲ್ಲಿ ನಡೆದ ಪಥ ಸಂಚಲನದಲ್ಲಿ ಬಿಜೆಪಿ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ನಾಯ್ಕ ಪಾಲ್ಗೊಂಡಿದ್ದರು. ವಿಜಯಪುರದಲ್ಲಿ ಗಣವೇಷಧಾರಿಯಾಗಿ ಉಮೇಶ ಕಾರಜೋಳ ಪಾಲ್ಗೊಂಡಿದ್ದರು.

ಬಾಗಲಕೋಟೆಯ ವಿದ್ಯಾಗಿರಿಯಲ್ಲಿ ಬಾಲಕ ಗಣವೇಷಧಾರಿಗಳ ಪಥಸಂಚಲನ ನಡೆಯಿತು. ಎಂಜಿನಿಯರಿಂಗ್ ಕಾಲೇಜು ವೃತ್ತದಿಂದ ಆರಂಭಗೊಂಡ ಪಥಸಂಚಲನ, ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಧಾರವಾಡದಲ್ಲಿ ನಡೆದ ಪಥಸಂಚಲನದಲ್ಲಿ 6 ಸಾವಿರಕ್ಕೂ ಹೆಚ್ಚು ಗಣವೇಷಧಾರಿಗಳು ಭಾಗಿಯಾಗಿದ್ದರು.

ಮೈಸೂರಿನ ಗೋಕುಲಂ ಮೈಸೂರು ಒನ್ ನಾಗರೀಕ ಸೇವಾ ಕೇಂದ್ರದ ಮೈದಾನದಲ್ಲಿ ನಡೆದ ಪಥ ಸಂಚಲನದಲ್ಲಿ ಶಾಸಕ ಟಿ.ಎಸ್.ಶ್ರೀವತ್ಸ, ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿ 1,500 ಮಂದಿ ಸ್ವಯಂಸೇವಕರು ಪಾಲ್ಗೊಂಡಿದ್ದರು.

ಈ ಮಧ್ಯೆ, ಪಥ ಸಂಚಲನದ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದು ಯುವಕನೊಬ್ಬ ಮೃತಪಟ್ಟಿದ್ದಾನೆ. ಮೈಸೂರಿನ ಜಯನಗರ ನಿವಾಸಿ ಮಹೇಂದ್ರ ಚೋಯಲ್‌ (37) ಮೃತರು.

ಇದೇ ವೇಳೆ, ಬೆಳಗಾವಿ, ಭಟ್ಕಳ, ಲಕ್ಷ್ಮೇಶ್ವರ, ಗುಳೇದಗುಡ್ಡ, ಕಲಾದಗಿ, ಕಲ್ಲಡ್ಕ, ತೊಕ್ಕೊಟ್ಟು,ಮಡಿಕೇರಿ ಸೇರಿ ರಾಜ್ಯದ ಇತರೆಡೆಯೂ ಗಣವೇಷಧಾರಿಗಳಿಂದಷಾಕರ್ಷಕ ಪಥ ಸಂಚಲನ ನಡೆಯಿತು. ಪಥಸಂಚಲನ ಹಿನ್ನೆಲೆಯಲ್ಲಿ ಎಲ್ಲೆಡೆ ಭಾರೀ ಪೊಲೀಸ್ ಬಂದೋಬಸ್ತ್‌ ಮಾಡಲಾಗಿತ್ತು.