ನೆಹರು ಮೈದಾನದಿಂದ ಎರಡು ತಂಡಗಳಲ್ಲಿ ಹೊರಟ ಗಣವೇಷಧಾರಿಗಳು ನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸಿದರು.

ಹುಬ್ಬಳ್ಳಿ: ರಸ್ತೆಯ ಇಕ್ಕೆಲಗಳಲ್ಲಿ ಜಮಾಯಿಸಿದ ಜನರು, ಗಣವೇಷಧಾರಿಗಳ ಮೇಲೆ ಪುಷ್ಪವೃಷ್ಟಿ, ಮೊಳಗಿದ ಜಯಘೋಷ, ಅಲ್ಲಲ್ಲಿ ಪಟಾಕಿಗಳ ಸದ್ದು...

ಇದು ನಗರದಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಪಥಸಂಚಲನದ ಚಿತ್ರಣ. ಪಥಸಂಚಲನಕ್ಕೆ ಸಾರ್ವಜನಿಕರಿಂದ ದೊರೆತ ಅದ್ಧೂರಿ ಸ್ವಾಗತ ದೊರೆಯಿತು. ವಿಜಯದಶಮಿ ಅಂಗವಾಗಿ ಹುಬ್ಬಳ್ಳಿ ಮಹಾನಗರ ಘಟಕದ ನೇತೃತ್ವದಲ್ಲಿ ನೆಹರು ಮೈದಾನದಿಂದ ಆರಂಭವಾದ ಪಥಸಂಚಲನ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿತು. ವಾದ್ಯಗಳ ನಾದಕ್ಕೆ ತಕ್ಕಂತೆ ಶಿಸ್ತಿನಿಂದ ಹೆಜ್ಜೆ ಹಾಕಿದ ಗಣವೇಷಧಾರಿಗಳನ್ನು ವೀಕ್ಷಿಸಲು ರಸ್ತೆಗಳ ಇಕ್ಕೆಲಗಳಲ್ಲಿ ಜನರು ನೆರೆದಿದ್ದರು. ಹಲವು ಕಡೆ ರಂಗೋಲಿ ಬಿಡಿಸಿ, ಹೂವುಗಳಿಂದ ಅಲಂಕರಿಸಿ ಸ್ವಾಗತ ಕೋರಲಾಯಿತು.

ಭಗವಾ ಧ್ವಜ ಹಾಗೂ ಸಂಘದ ಸಂಸ್ಥಾಪಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಸಾರ್ವಜನಿಕರು ಗೌರವ ಸಮರ್ಪಿಸಿದರು.

ಮಕ್ಕಳ ವೇಷಭೂಷಣ ಆಕರ್ಷಣೆ: ಪಥಸಂಚಲನದ ವೇಳೆ ಭಾರತಮಾತೆ, ಸ್ವಾಮಿ ವಿವೇಕಾನಂದರು ಹಾಗೂ ಆರ್‌ಎಸ್‌ಎಸ್‌ ಗಣವೇಷಧಾರಿಗಳ ವೇಷದಲ್ಲಿ ಸಿದ್ಧಗೊಂಡಿದ್ದ ಮಕ್ಕಳು ವಿಶೇಷ ಗಮನ ಸೆಳೆದರು. ರಸ್ತೆ ಬದಿಯಲ್ಲಿ ನಿಂತು ಪಥಸಂಚಲನವನ್ನು ಸ್ವಾಗತಿಸಿದ ಮಕ್ಕಳ ವೇಷಭೂಷಣಗಳು ನೋಡುಗರ ಆಕರ್ಷಣೆಯ ಕೇಂದ್ರವಾಗಿದ್ದವು.

ಎರಡು ತಂಡಗಳಲ್ಲಿ ಪಥಸಂಚಲನ: ನೆಹರು ಮೈದಾನದಿಂದ ಎರಡು ತಂಡಗಳಲ್ಲಿ ಹೊರಟ ಗಣವೇಷಧಾರಿಗಳು ನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸಿದರು. ಒಂದು ತಂಡ ಕೃಷ್ಣ ಭವನ, ಸರ್‌ ಸಿದ್ದಪ್ಪ ಕಂಬಳಿ ಮಾರ್ಗ, ಸಂಗೊಳ್ಳಿ ರಾಯಣ್ಣ ವೃತ್ತ, ದಾಜಿಬಾನ್‌ ಪೇಟೆ, ತುಳಜಾ ಭವಾನಿ ವೃತ್ತ, ಹಿರೇಪೇಟೆ ಹಾಗೂ ಬೆಳಗಾವಿ ಗಲ್ಲಿ ಮೂಲಕ ಸಾಗಿತು.

ಮತ್ತೊಂದು ತಂಡ ಟೌನ್‌ ಹಾಲ್‌, ಜೆ.ಸಿ. ನಗರ, ಸ್ಟೇಷನ್‌ ರಸ್ತೆ, ಸಿಬಿಟಿ, ರಾಧಾಕೃಷ್ಣ ಗಲ್ಲಿ ಮೂಲಕ ಸಂಚರಿಸಿತು. ಎರಡೂ ತಂಡಗಳು ದುರ್ಗದ ಬೈಲ್‌ ವೃತ್ತದಲ್ಲಿ ಸಂಗಮಗೊಂಡು, ಬಳಿಕ ಬ್ರಾಡ್‌ವೇ, ಶಿವಾಜಿ ವೃತ್ತ ಹಾಗೂ ಕೊಪ್ಪಿಕರ ರಸ್ತೆ ಮೂಲಕ ನೆಹರು ಮೈದಾನಕ್ಕೆ ಮರಳಿದವು.

ಪ್ರಮುಖರು ಭಾಗಿ: ಪಥಸಂಚಲನದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ ಮಹೇಶ ಟೆಂಗಿನಕಾಯಿ, ವಿಪ ಸದಸ್ಯ ಲಿಂಗರಾಜ ಪಾಟೀಲ, ಸ್ವರ್ಣ ಸಮೂಹ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್‌.ವಿ. ಪ್ರಸಾದ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

ಬಿಗಿ ಬಂದೋಬಸ್ತ್‌: ಪಥಸಂಚಲನದ ಹಿನ್ನೆಲೆಯಲ್ಲಿ ಹು-ಧಾ ಮಹಾನಗರ ಪೊಲೀಸ್‌ ಆಯುಕ್ತ ಭೂಷಣ್ ಬೊರಸೆ ಅವರು ಬಿಗಿ ಭದ್ರತೆ ಕಲ್ಪಿಸಿದ್ದರು. ಜತೆಗೆ ಮಾರ್ಗದುದ್ದಕ್ಕೂ ಭದ್ರತೆ ಒದಗಿಸಿ, ಪಥಸಂಚಲನ ಸುಗಮವಾಗಿ ಸಾಗಲು ಕ್ರಮ ಕೈಗೊಳ್ಳಲಾಗಿತ್ತು.