ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರ ವಾಹನಗಳ ಚಾಲಕರಿಂದ ಆರ್‌ಟಿಒ ಅಧಿಕಾರಿಗಳು ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಂಚಾಲಕ ಚಂದನ್ ಆರೋಪಿಸಿದ್ದಾರೆ.ಕಳೆದ 15 ದಿನಗಳಿಂದ ಆರ್‌ಟಿಒ ಅಧಿಕಾರಿಗಳು ತಮ್ಮ ಸರ್ಕಾರಿ ವಾಹನದಲ್ಲಿ ಆಗಮಿಸಿ, ಪಟ್ಟಣದ ಪ್ರವಾಸಿ ತಾಣ, ಪಾರ್ಕಿಂಗ್ ಸೇರಿದಂತೆ ಇತರೆ ಸ್ಥಳಗಳಲ್ಲಿ ನಿಂತಿದ್ದ ವಾಹನಗಳ ಚಾಲಕರಿಂದ ಯಾವುದೇ ರಸೀದಿ ನೀಡದೆ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದ್ದಾರೆ.
ಆರ್‌ಟಿಒ ಅಧಿಕಾರಿಗಳು ಹೆಚ್ಚಾಗಿ ಹೊರ ರಾಜ್ಯದ ವಾಹನಗಳನ್ನೇ ಆಯ್ಕೆಮಾಡಿಕೊಂಡು ಈ ರೀತಿ ವಸೂಲಾತಿಗೆ ನಿಂತಿದ್ದಾರೆ. ಇದರಿಂದ ವಾಹನ ಚಾಲಕರು ಅಸಮಧಾನಗೊಂಡು ಮತ್ತೊಮ್ಮೆ ಈ ಸ್ಥಳಕ್ಕೆ ಬರುವುದಿಲ್ಲ ಎಂದು ಹೇಳುತ್ತಿದ್ದಾರೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಅಕ್ರಮವಾಗಿ ಹಣ ವಸೂಲಿ ಮಾಡುತ್ತಿರುವವರ ವಿರುದ್ಧ ಕ್ರಮ ವಹಿಸುವಂತೆ ಒತ್ತಾಯಿಸಿದ್ದಾರೆ.ಟಿ.ಸಿ.ರಾಜಣ್ಣ ಸಾವಿನ ಬಗ್ಗೆ ನೈಜ ತನಿಖೆ ಮಾಡಿ ಕಾನೂನು ಕ್ರಮಕೈಗೊಳ್ಳಿ: ಸಿ.ಎಂ.ಕೃಷ್ಣ
ಮಂಡ್ಯ:ಮದ್ದೂರು ತಾಲೂಕಿನ ತಿಪ್ಪೂರು ಗ್ರಾಮದ ಅನಾರೋಗ್ಯ ಪೀಡಿತ ಟಿ.ಸಿ.ರಾಜಣ್ಣರನ್ನು ಬಲವಂತವಾಗಿ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ ಹತ್ತಿಸಿ ಅವರ ಸಾವಿಗೆ ಕಾರಣರಾದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ನೈಜ ತನಿಖೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನೈಜ ಪರಿಶಿಷ್ಟ ಜಾತಿ (ಹೊಲೆಯ ಮಾದಿಗ) ಸಮುದಾಯಗಳ ಸಂವಿಧಾನಿಕ ಹಕ್ಕು ಅವಕಾಶಗಳ ಸಂರಕ್ಷಣೆ ವೇದಿಕೆ ರಾಜ್ಯಾಧ್ಯಕ್ಷ ಸಿ.ಎಂ.ಕೃಷ್ಣ ಒತ್ತಾಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 2023ರ ಡಿ.24ರಂದು ತಿಪ್ಪೂರು ಗ್ರಾಮದ ಲಿಂಗಾಯತ ಸಮುದಾಯಕ್ಕೆ ಸೇರಿದ ಟಿ.ಎಲ್.ಸ್ವಾಮಿ ಅವರು ತೆಂಗಿನ ತೋಟದಲ್ಲಿ ವಿದ್ಯುತ್ ಕೆಲಸ ಮಾಡಿಸುವ ಸಲುವಾಗಿ ಅನಾರೋಗ್ಯ ಪೀಡಿತ ಟಿ.ಸಿ.ರಾಜಣ್ಣನನ್ನು ಬೆದರಿಸಿ ಟ್ರಾನ್ಸ್‌ಫಾರ್ಮರ್‌ಗೆ ಹತ್ತಿಸಿದ್ದರಿಂದ ಅವರು ಸಾವನ್ನಪ್ಪಿದ್ದಾರೆ ಎಂದರು.ಈ ಸಂಬಂಧ ಮರುದಿನವೇ ಮೃತರ ಪತ್ನಿ ಮಹಾಲಕ್ಷ್ಮಿ ಅವರು ಲಿಖಿತ ದೂರು ನೀಡಿದ್ದು, ಮದ್ದೂರು ಠಾಣಾ ಪೊಲೀಸರು ಐಪಿಸಿ 304 ಎ ಮತ್ತಿತರ ಪ್ರಕರಣೆ ಸಂಬಂಧಿತ ಕಾನೂನಿನಡಿ ದೂರು ದಾಖಲಿಸದೇ ಕೇವಲ ಯುಡಿಆರ್ ದಾಖಲಿಸಿ ಅಂತಿಮ ವರದಿ ಸಲ್ಲಿಸಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ದೂರಿದರು.
ಗ್ರಾಮದ ಮುಖ್ಯಸ್ಥರು ಪೊಲೀಸ್ ದೂರು ಮಾಡಿದ್ದು, ನಂತರ ನ್ಯಾಯ ಪಂಚಾಯ್ತಿ ಮಾಡಿ ಅವರೇ ಸಂತ್ರಸ್ತ ಕುಟುಂಬಕ್ಕೆ 4 ಲಕ್ಷ ರು. ಒದಗಿಸುವುದಾಗಿ ಮಾತನಾಡಿದ್ದು, ಇದುವರೆವಿಗೂ ಸಂತ್ರಸ್ತರಿಗೆ ನ್ಯಾಯ ಒದಗಿಸುವ ಕ್ರಮ ಜರುಗಿಸಿಲ್ಲ. ಮೃತರಿಗೆ ಮೂರು ಜನ ಹೆಣ್ಣು ಮಕ್ಕಳಿದ್ದು, ಯಾವುದೇ ಹೋರಾಟ ಮಾಡಲು ಸಾಧ್ಯವಾಗಿಲ್ಲ. ಕೂಡಲೇ ಈ ಸಂಬಂಧ ಪ್ರಕರಣ ದಾಖಲಿಸಿ ನ್ಯಾಯ ಒದಗಿಸಲು ಪೊಲೀಸ್ ಇಲಾಖೆ ಮುಂದಾಗುವಂತೆ ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಎಸ್.ಪೂರ್ಣಚಂದ್ರ, ಮೃತರ ಪತ್ನಿ ಮಹಾಲಕ್ಷ್ಮಿ, ಮಕ್ಕಳಾದ ಟಿ.ಆರ್.ಅಮೃತ, ಟಿ.ಆರ್.ಅರ್ಪಿತ, ಟಿ.ಆರ್.ಅಕ್ಷತ ಇದ್ದರು.