ಮೊಬೈಲ್ ಯುಗದಲ್ಲಿ ಭಾರತೀಯ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ಮುಂದಿನ ಪೀಳಿಗೆಗಾಗಿ ಸಂಸ್ಕೃತಿಯನ್ನು ಉಳಿಸಲು ಜಯಂತಿಗಳು ನಮ್ಮನ್ನು ಜಾಗೃತಿಗೊಳಿಸಬೇಕು.

ನರಗುಂದ: ರಡ್ಡಿ ಸಮಾಜದವರು ಹಿಂದಿನಿಂದಲು ದಾನ, ಧರ್ಮ, ಸಾಮಾಜಿಕ ಕಾರ್ಯಗಳನ್ನು ಮಾಡುವುದರಲ್ಲಿ ದೊಡ್ಡ ಗುಣದವರಾಗಿದ್ದಾರೆ. ನಾಯಕತ್ವ ಗುಣ ರಡ್ಡಿ ಸಮಾಜದವರಿಗೆ ರಕ್ತಗತವಾಗಿ ಬಂದಿದೆ ಎಂದು ಮಾಜಿ ಸಚಿವ ಎಸ್.ಆರ್. ಪಾಟೀಲ ತಿಳಿಸಿದರು.

ಭಾನುವಾರ ಪಟ್ಟಣದ ನೀರಾವರಿ ಕಾಲನಿಯ ಗಣೇಶ ಮಂದಿರದಲ್ಲಿ ತಾಲೂಕು ರಡ್ಡಿ ಸಮಾಜದವರು ಹಮ್ಮಿಕೊಂಡ ಹೇಮರಡ್ಡಿ ಮಲ್ಲಮ್ಮನ 604ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರಡ್ಡಿ ಸಮಾಜದವರು ಸ್ಥಿತಿವಂತರಾಗಿರಬೇಕೆಂದು ಮಹಾಸಾಧ್ವಿ ಶಿವಶರಣೆ ಹೇಮರಡ್ಡಿ ಮಲಮ್ಮವನವರು ಶ್ರೀಶೈಲ ಮಲ್ಲಿಕಾರ್ಜುನ ದೇವರಿಂದ ಆಶೀರ್ವಾದ ಪಡೆದುಕೊಂಡಿದ್ದಾರೆ. ಹೀಗಾಗಿ ಸಮಾಜದವರು ಸಮಾಜದಲ್ಲಿ ಸ್ಥಿತಿವಂತರಾಗಿದ್ದಾರೆ. ರಡ್ಡಿ ಸಮಾಜದವರು ದಾನ, ಧರ್ಮ, ಸಾಮಾಜಿಕ ಕಾರ್ಯಗಳಲ್ಲಿ ಸಹಾಯ ಮಾಡುವುದರಲ್ಲಿ ಹಿಂದೆ ಮುಂದೆ ನೋಡುವುದಿಲ್ಲವೆಂದರು. ಉಪನ್ಯಾಸಕಿ ಡಾ. ವಿಜಯಲಕ್ಷ್ಮೀ ದಾನರಡ್ಡಿ ಮಾತನಾಡಿ, ಜೀವನಮೌಲ್ಯಗಳನ್ನು ಮರೆಯದೇ ಬದುಕು ಸಾಗಿಸಬೇಕು. ಮೊಬೈಲ್ ಯುಗದಲ್ಲಿ ಭಾರತೀಯ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ಮುಂದಿನ ಪೀಳಿಗೆಗಾಗಿ ಸಂಸ್ಕೃತಿಯನ್ನು ಉಳಿಸಲು ಜಯಂತಿಗಳು ನಮ್ಮನ್ನು ಜಾಗೃತಿಗೊಳಿಸಬೇಕು. ಅವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ಜೀವನ ಮಾಡಬೇಕು. ಸ್ವಂತದ ಬದುಕಿಗೆ ಚಿಂತಿಸುವುದು ದುರಂತಮಯವಾಗಿದೆ. ಭಾರತ ಜಗತ್ತಿಗೆ ಗುರುವಾಗಬೇಕು. ಕೇವಲ ಶ್ರೀಮಂತಿಕೆಯಲ್ಲಿ ಕಾಲ ಕಳೆಯದೇ, ದೇಶ ಮತ್ತು ಸಮಾಜವನ್ನು ಸುರಕ್ಷಿತವಾಗಿಡುವಲ್ಲಿ ರಡ್ಡಿ ಸಮಾಜದವರು ಸದಾ ಒಗ್ಗಟ್ಟಾಗಿರಬೇಕು ಎಂದರು.ಮಾಜಿ ಶಾಸಕ ಬಿ.ಆರ್. ಯಾವಗಲ್ಲ ಮಾತನಾಡಿ, ಸಮಾಜದ ಅಸ್ತಿತ್ವ ಉಳಿಸಲು ಬದಲಾಗಬೇಕು. ಸಮಾಜದಲ್ಲಿ ಒಳ್ಳೆಯ ಕೆಲಸ, ಕಾರ್ಯಗಳನ್ನು ಮಾಡಲು ಸರ್ವರೊಂದಿಗೂ ಹೊಂದಿಕೊಂಡು ಹೋಗಬೇಕು ಎಂದರು.ಪಂಚಗೃಹ ಗುಡ್ಡದ ಹಿರೇಮಠದ ಸಿದ್ಧಲಿಂಗ ಶ್ರೀಗಳು, ಪತ್ರೀವನ ಮಠದ ಗುರು ಸಿದ್ಧವೀರ ಶಿವಾಚಾರ್ಯ ಶ್ರೀಗಳು ಆರ್ಶೀವಚನ ನೀಡಿದರು.

ಕಾರ್ಯಕ್ರಮದಲ್ಲಿ 2025- 26ನೇ ಸಾಲಿನ ಎಸ್ಎಸ್ಎಲ್‌ಸಿಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದ 10 ವಿದ್ಯಾರ್ಥಿಗಳು ಮತ್ತು ಪಿಯುಸಿಯಲ್ಲಿ ಶೇ. 80ಕ್ಕಿಂತ ಹೆಚ್ಚು ಅಂಕ ಪಡೆದ 16 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ತಾಲೂಕಿನ ನಿವೃತ್ತ ಸರ್ಕಾರಿ ನೌಕರರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವಿವೇಕ ಯಾವಗಲ್, ಜಿಪಂ ಮಾಜಿ ಅಧ್ಯಕ್ಷ ರಾಜುಗೌಡ ಕೆಂಚನಗೌಡ್ರ, ಬಾಪುಗೌಡ ತಿಮ್ಮನಗೌಡ್ರ, ಶಿಕ್ಷಕ ಡಿ.ಎಚ್. ಅಜ್ಜಿ, ಡಾ. ವೀರನಗೌಡ ವೀರನಗೌಡ್ರ, ಎಸ್.ವೈ. ಪಾಟೀಲ, ವಾಸುರಡ್ಡಿ ವೆಂಕರಡ್ಡಿಯವರ, ಎನ್.ವಿ. ಮೇಟಿ, ಶಾಂತನಗೌಡ ಮಲ್ಲನಗೌಡ್ರ, ವೆಂಕರಡ್ಡಿ ಹುಚ್ಚರಡ್ಡಿಯವರ, ಶ್ರೀನಿವಾಸ ರಾಯರಡ್ಡಿ, ಶ್ರೀನಿವಾಸರಡ್ಡಿ ವೆಂಕರಡ್ಡಿಯವರ, ಹನುಮರಡ್ಡಿ ರಾಯರಡ್ಡಿ, ಶಿವರಡ್ಡಿ ಪೆಟ್ಲೂರ ಸೇರಿದಂತೆ ಮುಂತಾದವರು ಇದ್ದರು.