ಸಾರಾಂಶ
ಜಾಮಖಂಡಿ ಗ್ರಾಮದ ಹೊರವಲಯದಲ್ಲಿನ ಸರ್ವೆ ಸಂಖ್ಯೆ 9ರಲ್ಲಿ ಪರಿಶಿಷ್ಟ ಸಮುದಾಯದ ಜನರ ಶವ ಸಂಸ್ಕಾರಕ್ಕೆ 23 ಗುಂಟೆ ಜಮೀನು ಕಾಯ್ದಿರಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ಹುಲಸೂರು
ಇಲ್ಲಿನ ಜಾಮಖಂಡಿ ಗ್ರಾಮದಲ್ಲಿ ಶವ ಸಂಸ್ಕಾರಕ್ಕೆ ಸ್ಥಳವಿಲ್ಲದೆ ಬೇಸರಗೊಂಡ ಶೋಷಿತ ಸಮುದಾಯದ ಕುಟುಂಬವೊಂದು ಮನೆ ಸಮೀಪದ ದೇವಸ್ಥಾನದ ಮುಂದೆಯೇ ಶವ ಸಂಸ್ಕಾರ ಮಾಡುವ ಪಟ್ಟು ಹಿಡಿದ ಪರಿಣಾಮ ಗ್ರಾಮದಲ್ಲಿ ಒತ್ತುವರಿಯಾಗಿದ್ದ ರುದ್ರಭೂಮಿಯ ಸ್ಥಳವನ್ನು ತೆರವುಗೊಳಿಸಿ ಶವ ಸಂಸ್ಕಾರಕ್ಕೆ ಅನುವು ಮಾಡಿಕೊಟ್ಟ ಘಟನೆ ನಡೆದಿದೆ.ಸಮೀಪದ ಜಾಮಖಂಡಿ ಗ್ರಾಮದ ಹೊರವಲಯದಲ್ಲಿನ ಸರ್ವೆ ಸಂಖ್ಯೆ 9ರಲ್ಲಿ ಪರಿಶಿಷ್ಟ ಸಮುದಾಯದ ಜನರ ಶವ ಸಂಸ್ಕಾರಕ್ಕೆ 23 ಗುಂಟೆ ಜಮೀನು ಕಾಯ್ದಿರಿಸಲಾಗಿತ್ತು. ಸದರಿ ರುದ್ರಭೂಮಿ ಸುತ್ತಲಿದ್ದ ರೈತರು ಜಮೀನು ಒತ್ತುವರಿ ಮಾಡಿಕೊಂಡ ಪರಿಣಾಮವಾಗಿ ಪ್ರತಿ ಸಲ ಶವಸಂಸ್ಕಾರ ನೆರವೇರಿಸಲು ಪರದಾಡುವ ಸ್ಥಿತಿ ಈ ಸಮುದಾಯದ ಜನರಿಗೆ ಬಂದದೊದಿತ್ತು.
ಶುಕ್ರವಾರ ಪರಿಶಿಷ್ಟ ಜಾತಿಯ ಹೀರಾಬಾಯಿ ಕೇರಬಾ ಗಾಯಕವಾಡ (85) ಸಾವನ್ನಪ್ಪಿದ್ದು ತೀರ ಬಡ ಕುಟುಂಬದ ಇವರಿಗೆ ಸಮುದಾಯದ ಸಾರ್ವಜನಿಕರುದ್ರ ಭೂಮಿ ಒತ್ತುವರಿ ಆಗಿದ್ದರಿಂದ ಶವಸಂಸ್ಕಾರ ನೆರವೇರಿಸಲು ಪರದಾಡುವ ಸ್ಥಿತಿ ನಿರ್ಮಾಣವಾಯಿತು. ದುಃಖದಲ್ಲಿದ್ದ ಕುಟುಂಬಸ್ಥರು ಹಾಗೂ ಸಂಬಂಧಿಗಳು ಏನು ತೋಚದೆ ಅಸಹಾಯಕತೆಯಿಂದ ಬೇಸತ್ತು ಊರ ಮುಂದಿನ ಮಂದಿರದ ಮುಂಭಾಗದಲ್ಲಿ ಶವ ಸಂಸ್ಕಾರ ನೆರವೇರಿಸುವದಾಗಿ ಪಟ್ಟು ಹಿಡಿದರು. ಸುದ್ದಿ ತಿಳಿದ ತಕ್ಷಣವೇ ತಾಲೂಕು ಆಡಳಿತ, ಪಿಡಿಒ, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಗ್ರಾಮದ ಮುಖಂಡರು ಪರಿಶಿಷ್ಟ ಜಾತಿ ಪ್ರಮುಖರು ಜೊತೆ ಮಾತನಾಡಿ, ರುದ್ರಭೂಮಿ ಸ್ಥಳ ಗುರುತಿಸಿಕೊಟ್ಟ ನಂತರ ಅಲ್ಲಿಯೇ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ಲಹು ಘಾಯಳ, ನಾಗನಾಥ ಬನಸೂಡೆ, ಲಕ್ಷ್ಮಣ ಸಿಂಧೆ, ರಾಜೇಂದ್ರ ಗಾಯಕವಾಡ, ಗೌತಮ ಗಾಯಕವಾಡ, ನರಸಿಂಗ ಸಿಂಧೆ, ಪ್ರಭಾಕರ ಗಾಯಕವಾಡ, ಶೇಷರಾವ್ ಸೂರ್ಯವಂಶಿ, ಲೋಕೇಶ, ಸುರೇಶ ಹಾಗೂ ಗ್ರಾಮದ ಪ್ರಮುಖ ಮುಖಂಡರು, ಮೇಹಕರ ಪೊಲೀಸ್ ಠಾಣೆಯ ಎಎಸ್‌ಐ ಚಂದ್ರಕಾಂತ ಸೇರಿದಂತೆ ಮತ್ತಿತರರು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))