ಸಾರಾಂಶ
ದೇವದುರ್ಗ ಪಟ್ಟಣದ ರುದ್ರಭೂಮಿಯಲ್ಲಿ ಕುಮಾರ ದರ್ಶನ ಅಕ್ಕರಕಿ ಸ್ಮರಣಾರ್ಥ ಸಂಕ್ರಮಣ ಬಳಗದಿಂದ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ದೇವದುರ್ಗ: ಸರ್ವರಿಗೂ ರುದ್ರಭೂಮಿ ಪವಿತ್ರ ಸ್ಥಳವಾಗಿದ್ದು, ಇಲ್ಲಿ ಸಸಿ ನೆಡುವದು ಶ್ಲಾಘನೀಯ ಸೇವೆ. ಈ ಪರಂಪರೆ ನಿರಂತರವಾಗಿ ನಡೆಯಬೇಕು ಹಾಗೇ ಗಿಡ-ಮರಗಳ ಸಂರಕ್ಷಣೆಗೆ ಹೆಚ್ಚು ಆದ್ಯತೆ ನೀಡಬೇಕೆಂದು ಸಾಹಿತಿ ಅಮರೇಶ ಬಲ್ಲಿದವ ತಿಳಿಸಿದರು.
ಪಟ್ಟಣದ ರುದ್ರಭೂಮಿಯಲ್ಲಿ ಕುಮಾರ ದರ್ಶನ ಅಕ್ಕರಕಿ ಸ್ಮರಣಾರ್ಥ ಸಂಕ್ರಮಣ ಬಳಗ ಭಾನುವಾರ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿ, ಅತಿ ಚಿಕ್ಕವಯಸ್ಸಿನಲ್ಲಿ ಚಂದ್ರಕಾಂತ ಹಾಗೂ ನಾಗರತ್ನ ದಂಪತಿಗಳ ಮಗ ದರ್ಶನ ಬಾಳಿ ಬೆಳುಗುವ ಮುನ್ನವೇ ನಮ್ಮಿಂದ ದೂರವಾಗಿದ್ದಾನೆ. ಆದರೆ ಈ ದಂಪತಿಗಳ ಇಂಥ ಸೇವೆ ಇತರರಿಗೆ ಮಾದರಿಯಾಗಿದೆ.ರುದ್ರಭೂಮಿಯಲ್ಲಿ ಆಸನಗಳು, ಕುಡಿವ ನೀರು, ಸ್ವಚ್ಛತೆಯಂತಹ ಕಾರ್ಯಗಳಿಗೆ ದಾನ ಮಡುವರೆಲ್ಲರ ಬದುಕು ಸಾರ್ಥಕ. ಈ ಬೆಳವಣಗೆ ತಾಲೂಕಿನ ಎಲ್ಲಾ ಗ್ರಾಮ, ಪಟ್ಟಣಗಳಲ್ಲಿ ರುದ್ರಭೂಮಿಗಳ ನಿರ್ಮಾಣವಾಗಬೇಕೆಂದು ಅಭಿಪ್ರಾಯ ಪಟ್ಟರು.
ಈ ವೇಳೆ ಉದ್ಯಮಿ ಭಾನುಪ್ರಕಾಶ ಖೆಣೇದ್, ಜಿಪಂ ಮಾಜಿ ಅಧ್ಯಕ್ಷ ರಾಮಣ್ಣ ಇರಬಗೇರಾ, ಪುರಸಭೆ ಮಾಜಿ ಅಧ್ಯಕ್ಷ ಚಂದಪ್ಪ ಅಕ್ಕರಕಿ, ನಿವೃತ್ತ ಸೈನಿಕ ಪಂಪಣ್ಣ ಅಕ್ಕರಕಿ, ಉಪನ್ಯಾಸಕ ಸುಭಾಶ್ಚಂದ್ರ ಪಾಟೀಲ್, ಬಸವರಾಜ ಮಡಿವಾಳರ, ಸಾಮಾಜಿಕ ಅರಣ್ಯ ಅಧಿಕಾರಿ ಬಸವರಾಜ ಹಾಗೂ ಇತರರು ಪಾಲ್ಗೊಂಡಿದ್ದರು.