ಗ್ರಾಮೀಣ ಪ್ರದೇಶಕ್ಕೆ ಹೆಚ್ಚಿನ ಬಸ್ ಓಡಿಸಿ

| Published : Jul 02 2025, 11:48 PM IST / Updated: Jul 02 2025, 11:49 PM IST

ಸಾರಾಂಶ

ತಾಲೂಕಿನಿಂದ ಕೆಎಸ್ಆರ್ ಟಿಸಿ ನಿಗಮಕ್ಕೆ ಪ್ರತಿವರ್ಷ ಹೆಚ್ಚು ಆದಾಯ ಬರುತ್ತಿದ್ದರೂ ಗ್ರಾಮೀಣ ಪ್ರದೇಶಗಳಿಗೆ ಇನ್ನು ಬಸ್ ವ್ಯವಸ್ಥೆ ಕಲ್ಪಿಸದಿರುವುದಕ್ಕೆ ಎಂದು ಶಾಸಕ ಎಂ. ಆರ್. ಮಂಜುನಾಥ್ ಕಿಡಿಕಾಡಿದರು

ಕನ್ನಡಪ್ರಭ ವಾರ್ತೆ ಹನೂರು

ತಾಲೂಕಿನಿಂದ ಕೆಎಸ್ಆರ್ ಟಿಸಿ ನಿಗಮಕ್ಕೆ ಪ್ರತಿವರ್ಷ ಹೆಚ್ಚು ಆದಾಯ ಬರುತ್ತಿದ್ದರೂ ಗ್ರಾಮೀಣ ಪ್ರದೇಶಗಳಿಗೆ ಇನ್ನು ಬಸ್ ವ್ಯವಸ್ಥೆ ಕಲ್ಪಿಸದಿರುವುದಕ್ಕೆ ಎಂದು ಶಾಸಕ ಎಂ. ಆರ್. ಮಂಜುನಾಥ್ ಕಿಡಿಕಾಡಿದರು.

ಪಟ್ಟಣದ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿದರು.

ಹನೂರು ವಿಧಾನಸಭಾ ಕ್ಷೇತ್ರದ ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟದಲ್ಲಿ ನಡೆಯುವ ಹಬ್ಬ ಹರಿದಿನಗಳು ಜಾತ್ರಾ ಮಹೋತ್ಸವ ಸೇರಿದಂತೆ ಇನ್ನಿತರ ವಿಶೇಷ ದಿನಗಳಲ್ಲಿ ನೂರಾರು ಬಸ್ ಗಳು ಸಂಚಾರ ಮಾಡಿ ಹೆಚ್ಚಿನ ಆದಾಯ ಪಡೆದುಕೊಳ್ಳುತ್ತಿದೆ. ಸ್ವಾತಂತ್ರ್ಯ ಬಂದು 78 ವರ್ಷಗಳು ಕಳೆಯುತ್ತಿದ್ದರೂ ಕೆಲವು ಹಳ್ಳಿಗಳಿಗೆ ಕೆಎಸ್ಆರ್ ಟಿಸಿ ಬಸ್ ಸಂಚಾರ ಪ್ರಾರಂಭ ಮಾಡದಿರುವುದು ಎಷ್ಟರ ಮಟ್ಟಿಗೆ ಸರಿ. ಇನ್ನೂ ಮುಂದಿನ ದಿನಗಳಲ್ಲಾದರೂ ಸಂಬಂಧಪಟ್ಟ ಸಾರಿಗೆ ನಿಗಮದ ಅಧಿಕಾರಿಗಳು ಸೂಕ್ತ ಕ್ರಮವಹಿಸಿ ಗ್ರಾಮೀಣ ಪ್ರದೇಶಗಳ ಗ್ರಾಮಗಳಿಗೆ ಹೆಚ್ಚಿನ ಬಸ್, ರಸ್ತೆ ಕಲ್ಪಿಸುವಂತೆ ಸೂಚನೆ ನೀಡಿದರು.ಶಿಕ್ಷಣಾಧಿಕಾರಿಗೆ ತರಾಟೆ:

ಕಳೆದ ಸಾಲಿನಲ್ಲಿ ಹನೂರು ಶೈಕ್ಷಣಿಕ ವಲಯದಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಜಿಲ್ಲೆಯಲ್ಲಿ ಐದನೇ ಸ್ಥಾನ ಪಡೆದುಕೊಂಡಿರುವುದಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಗುರುಲಿಂಗಯ್ಯ ಅವರನ್ನು ಶಾಸಕ ಎಂ ಆರ್ ಮಂಜುನಾಥ್ ತರಾಟೆಗೆ ತೆಗೆದುಕೊಂಡರು. ಕಳೆದ ಹಲವಾರು ವರ್ಷಗಳಿಂದ ಎಸ್ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಹನೂರು ಶೈಕ್ಷಣಿಕ ವಲಯ ಉತ್ತಮ ಫಲಿತಾಂಶ ತಂದಿದೆ. ಆದರೆ ಕಳೆದ ಸಾಲಿನಲ್ಲಿ ಫಲಿತಾಂಶಕ್ಕೆ ಹಿನ್ನೆಡೆಗೆ ಕಾರಣವೇನು ಎಂದು ಪ್ರಶ್ನಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಮಾತನಾಡಿ, ನಮ್ಮ ಶೈಕ್ಷಣಿಕ ವಲಯದಲ್ಲಿ ವಿಷಯವಾರು ಶಿಕ್ಷಕರ ಕೊರತೆ ಇರುವುದರಿಂದ ತೊಂದರೆಯಾಗಿದೆ. ಆದರೂ ಇರುವ ಶಿಕ್ಷಕರನ್ನು ಸಮರ್ಪಕವಾಗಿ ಬಳಸಿಕೊಂಡಿದ್ದೇವೆ. ಪ್ರಸಕ್ತ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಮರುಕಳಿಸದಂತೆ ಕ್ರಮ ವಹಿಸಬೇಕು ಎಂದರು. ಈ ಸಂದರ್ಭದಲ್ಲಿ ತಾಲೂಕು ಆಡಳಿತಾಧಿಕಾರಿ ಶೃತಿ, ತಹಸೀಲ್ದಾರ್ ವೈ.ಕೆ. ಗುರುಪ್ರಸಾದ್, ಇ ಒ ಉಮೇಶ್ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ರಾಚಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.