ಸಾರಾಂಶ
ಕಾರವಾರ: ರಾಜ್ಯದಲ್ಲಿ ನೈಸರ್ಗಿಕವಾಗಿ ಅತ್ಯಂತ ಶ್ರೀಮಂತ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಉತ್ತರ ಕನ್ನಡ ಹಾಗೂ ಕಾರವಾರ ಅಂಕೋಲಾ ಕ್ಷೇತ್ರದಲ್ಲಿ ಪ್ರವಾಸೋದ್ಯಮವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುವಂತೆ ಕೇಂದ್ರ ಸಂಸ್ಕೃತಿ, ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ವಿನಂತಿಸಿದ್ದಾರೆ.
ಸಚಿವರು ಗೋಕರ್ಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಸಚಿವರನ್ನು ಜಿಲ್ಲೆಯ ಜನತೆಯ ಪರವಾಗಿ ಸತ್ಕರಿಸಿ, ಗೌರವಿಸಿ, ಲಿಖಿತ ಮನವಿಯನ್ನು ಸಚಿವರು ಹಾಗೂ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ನೀಡಿದರು.ಉತ್ತರ ಕನ್ನಡ ಜಿಲ್ಲೆಯಲ್ಲಿ ನೈಸರ್ಗಿಕ, ಪೌರಾಣಿಕ, ಐತಿಹಾಸಿಕ ಮತ್ತಿತರ ಪ್ರವಾಸಿ ತಾಣಗಳಿವೆ. ವಿಶಾಲವಾದ ಕಡಲತೀರ ಇದೆ. ಇಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿವೆ. ಹೀಗೆ ಪ್ರವಾಸಿ ತಾಣಗಳನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುವಂತೆ ವಿನಂತಿಸಿದರು.
ಕಾರವಾರ-ಅಂಕೋಲಾ ತಾಲೂಕಿನ ಸುಂದರ ಕರಾವಳಿಯಲ್ಲಿ ಅನೇಕ ಆಕರ್ಷಕ ಕಡಲತೀರಗಳಿವೆ. ಈ ಕಡಲತೀರಗಳನ್ನು ಅಭಿವೃದ್ಧಿಪಡಿಸಿದರೆ ಪ್ರವಾಸಿಗರ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆಯಾಗಲಿದೆ. ಪಂಚಲಿಂಗ ಕ್ಷೇತ್ರಗಳಾದ ಗೋಕರ್ಣ ಮಹಾಬಲೇಶ್ವರ, ಕಾರವಾರದ ಶೆಜ್ಜೇಶ್ವರ, ಗುಣವಂತೇಶ್ವರ ಹಾಗೂ ಧಾರೇಶ್ವರಗಳನ್ನು ಅಭಿವೃದ್ಧಿಪಡಿಸಿದರೆ, ಧಾರ್ಮಿಕ ಪ್ರವಾಸೋದ್ಯಮ ಬೆಳೆಯಲಿದೆ. ಇದರ ಜೊತೆಗೆ, ಪೌರಾಣಿಕ ಹಿನ್ನೆಲೆಯನ್ನು ಹೊಂದಿರುವ ಶ್ರೀ ಕ್ಷೇತ್ರ ಯಾಣದ ಅಭಿವೃದ್ಧಿಯು ಜಿಲ್ಲೆಯ ಪ್ರವಾಸೋದ್ಯಮಕ್ಕೆ ಇನ್ನಷ್ಟು ಗರಿಮೆ ನೀಡಲಿದೆ ಎಂದರು.ಮೊಘಲರ ದೌರ್ಜನ್ಯದ ವಿರುದ್ಧ ಸಿಡಿದೆದ್ದು ಹಿಂದವಿ ಸಾಮ್ರಾಜ್ಯವನ್ನು ಸ್ಥಾಪಿಸಿದ ಹಿಂದೂ ಹೃದಯಸ್ಪರ್ಶಿ ಶಿವಾಜಿ ಮಹಾರಾಜರೊಂದಿಗೆ ಕಾರವಾರ ಅವಿನಾಭಾವ ಸಂಬಂಧವನ್ನು ಹೊಂದಿದೆ. ಶಿವಾಜಿ ಮಹಾರಾಜರು 1665 ಮತ್ತು 1673 ರಲ್ಲಿ ಎರಡು ಬಾರಿ ಕಾರವಾರಕ್ಕೆ ಭೇಟಿ ನೀಡಿದ್ದರು. ಅಲ್ಲಿ ಭವಾನಿ ದೇವಿಯನ್ನೂ ಪ್ರತಿಷ್ಠಾಪಿಸಲಾಗಿತ್ತು. ಅಲ್ಲಿ ದುರ್ಗಾದೇವಿ ಮಂದಿರ ತಲೆ ಎತ್ತಿ ಪೂಜಿಸಲಾಗುತ್ತಿದೆ. ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಸ್ಥಾಪಿಸಿ, ಆ ಐತಿಹಾಸಿಕ ಸ್ಥಳವನ್ನು ಸ್ಮಾರಕವಾಗಿ ನಿರ್ಮಿಸಿದರೆ, ಒಂದೆಡೆ ಪ್ರವಾಸೋದ್ಯಮವನ್ನು ಉತ್ತೇಜಿಸಿದಂತಾಗಲಿದೆ. ಮತ್ತೊಂದೆಡೆ, ಅದು ಹಿಂದುತ್ವದ ರಕ್ಷಕ ಶಿವಾಜಿ ಮಹಾರಾಜರ ಆಶಯಗಳನ್ನು ಈಡೇರಿಸಿದಂತಾಗಲಿದೆ ಎಂದರು.
ತಾಲೂಕಿನ ಕಡವಾಡ ಗ್ರಾಮದ ನಂದವಾಳದಲ್ಲಿ ಸೋಂದಾ ಅರಸ ರಾಜಾ ಸದಾಶಿವ ನಾಯಕ ಅವರ ಸ್ವಾತಂತ್ರ್ಯ ಹೋರಾಟದ ಸ್ಮರಣಾರ್ಥ ನಾವು ಕಳೆದ 10 ವರ್ಷಗಳಿಂದ ವಿಜಯ ದಿವಸ್ ಆಚರಿಸಿ ಧ್ವಜಾರೋಹಣ ಸಮಾರಂಭ ನಡೆಸುತ್ತಿದ್ದೇವೆ. ಫೆಬ್ರವರಿ 26, 1725 ರಂದು, ಸೋದೆಯ ರಾಜ ಸದಾಶಿವ ರಾಯ, ಭಾರತದಲ್ಲಿ ಮೊದಲ ಬಾರಿಗೆ ಬ್ರಿಟಿಷರನ್ನು ಸೋಲಿಸಿ ಅವರ ಧ್ವಜವನ್ನು ಕೆಳಗಿಳಿಸಿ ಭಗವಾಧ್ವಜವನ್ನು ಹಾರಿಸಿದರು. ಅವರ ಸ್ಮರಣಾರ್ಥ ಒಂದು ಸ್ಮಾರಕವನ್ನು ನಿರ್ಮಿಸಿದಲ್ಲಿ ಭವಿಷ್ಯದ ಪೀಳಿಗೆಗೆ ಇಲ್ಲಿನ ಸ್ವಾತಂತ್ರ್ಯ ಹೋರಾಟದ ಬಗ್ಗೆ ತಿಳಿಸಿದಂತಾಗಲಿದೆ.ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಿಂದ ಈ ಪ್ರದೇಶದ ಆರ್ಥಿಕ ಚಟುವಟಿಕೆಯೂ ಹೆಚ್ಚಲಿದೆ. ಸರ್ಕಾರಕ್ಕೂ ಆದಾಯ ಬರಲಿದೆ. ಈ ಎಲ್ಲ ಕಾರಣಗಳಿಂದ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ರೂಪಾಲಿ ಎಸ್.ನಾಯ್ಕ ಆಗ್ರಹಿಸಿದರು.