ಸಾರಾಂಶ
ಕಾರವಾರ: ಲೋಕಸಭೆ ಚುನಾವಣೆಯಲ್ಲಿ ನಿರಂತರವಾಗಿ ಪಕ್ಷದ ಪರವಾಗಿ ಪ್ರಚಾರ ಮಾಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಪಕ್ಷದ ಪ್ರಭಾವಿ ನಾಯಕಿಯಾಗಿ ಹೊರಹೊಮ್ಮಿದ್ದಾರೆ.
ರೂಪಾಲಿ ನಾಯ್ಕ ಸ್ವತಃ ಟಿಕೆಟ್ ಆಕಾಂಕ್ಷಿಯಾಗಿದ್ದರು. ಹಾಗಂತ ಸಂಸದರಾಗಿದ್ದ ಅನಂತಕುಮಾರ ಹೆಗಡೆ ಸ್ಪರ್ಧಿಸುವುದಾದರೆ ತಾವು ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದ್ದರು. ಪಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಟಿಕೆಟ್ ನೀಡಿದಾಗ ಪಕ್ಷದ ಪ್ರಚಾರ ಸಭೆಯ ನೇತೃತ್ವ ವಹಿಸಿದ್ದು ಇದೇ ರೂಪಾಲಿ ಎಸ್. ನಾಯ್ಕ.ಉತ್ತರ ಕನ್ನಡ ಜಿಲ್ಲೆಯ ಪ್ರತಿಯೊಂದು ಕಡೆಯೂ ಕಾಗೇರಿ ಅವರೊಂದಿಗೆ ಪ್ರಚಾರ ಸಭೆಯಲ್ಲಿ ಭಾಗವಹಿಸಿದರು. ಪರಿಣಾಮಕಾರಿಯಾಗಿ ಪ್ರಚಾರದಲ್ಲಿ ತೊಡಗಿಕೊಂಡರು. ಪ್ರತಿ ಸಭೆಯಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆ, ಕೇಂದ್ರ ಸರ್ಕಾರದ ಯೋಜನೆಗಳನ್ನು ಬಣ್ಣಿಸಿ, ವಿಶೇಷವಾಗಿ ಮಹಿಳಾ ಮತದಾರರ ಮೇಲೆ ಪ್ರಭಾವ ಬೀರಿದರು. ಕಾರವಾರ- ಅಂಕೋಲಾ ವಿಧಾನಸಭೆ ಕ್ಷೇತ್ರದ ಬೂತ್ ಮಟ್ಟದಲ್ಲೂ ಹೋಗಿ ಪ್ರಚಾರ ನಡೆಸಿದರು. ಕಾರ್ಯಕರ್ತರು, ಪದಾಧಿಕಾರಿಗಳನ್ನು ಹುರಿದುಂಬಿಸಿ ಪಕ್ಷದ ಪರವಾಗಿ ದುಡಿಯುವಂತೆ ಉತ್ತೇಜಿಸಿದರು.
ಕಾಗೇರಿ ಅವರ ಪರವಾಗಿ ಬಿಜೆಪಿಯ (ಅನಂತಕುಮಾರ ಹೆಗಡೆ ಹೊರತಾಗಿ) ಎಲ್ಲ ಟಿಕೆಟ್ ಆಕಾಂಕ್ಷಿಗಳೂ ತೊಡಗಿಕೊಂಡರು. ಪ್ರಚಾರದಲ್ಲಿ ಭಾಗವಹಿಸಿ ಪಕ್ಷಕ್ಕೆ ಶಕ್ತಿ ತುಂಬಿದರು. ಶಾಸಕರು, ಮಾಜಿ ಶಾಸಕರು, ಜೆಡಿಎಸ್ ಮುಖಂಡರು ಭಾಗವಹಿಸಿದರು. ಆದರೆ ಎಲ್ಲರಿಗಿಂತ ಹೆಚ್ಚು ಪ್ರಚಾರದಲ್ಲಿ ಗಮನ ಸೆಳೆದವರು ರೂಪಾಲಿ ನಾಯ್ಕ. ಕಾಗೇರಿ ಅವರನ್ನು ಗೆಲ್ಲಿಸುವ ಮೂಲಕ ಮೋದಿ ಅವರನ್ನು ಮತ್ತೊಮ್ಮ ಪ್ರಧಾನಿಯನ್ನಾಗಿಸೋಣ. ಮೋದಿ ಅವರಿಗೆ ಇನ್ನಷ್ಟು ಶಕ್ತಿ ತುಂಬೋಣ ಎಂದು ಮತದಾರರಲ್ಲಿ ಮನವಿ ಮಾಡಿದರು.ಬಿಜೆಪಿ ರಾಜ್ಯ ಉಪಾಧ್ಯಕ್ಷೆಯಾಗಿ ನೇಮಕಗೊಂಡ ರೂಪಾಲಿ ನಾಯ್ಕ ಅವರ ತವರು ಕ್ಷೇತ್ರದಲ್ಲಿ ಬಿಜೆಪಿ ಜಯಗಳಿಸಿರುವುದು ರೂಪಾಲಿ ನಾಯ್ಕ ಅವರಿಗೂ ಬಲ ಬಂದಂತಾಗಿದೆ. ರೂಪಾಲಿ ನಾಯ್ಕ ಪ್ರಭಾವಿ ನಾಯಕಿಯಾಗಿ ಹೊರಹೊಮ್ಮಿದ್ದಾರೆ. ಪಕ್ಷದಲ್ಲಿ ರೂಪಾಲಿ ನಾಯ್ಕ ಅವರಿಗೆ ಇನ್ನೂ ಮಹತ್ವದ ಸ್ಥಾನಮಾನ ದೊರೆಯುವ ಸಾಧ್ಯತೆ ಇದೆ.
ಹೆಬ್ಬಾರ್ ವಿರುದ್ಧ ಅಬ್ಬರಿಸಿದ ರೂಪಾಲಿಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಬಿಜೆಪಿ ಪ್ರಚಾರಕ್ಕೆ ಬಾರದೆ, ಕಾಂಗ್ರೆಸ್ಸಿನತ್ತ ಮುಖ ಮಾಡಿದ್ದರೂ ಯಾರೂ ತುಟಿ ಬಿಚ್ಚಿರಲಿಲ್ಲ. ಆದರೆ ರೂಪಾಲಿ ನಾಯ್ಕ ಮೊದಲ ಬಾರಿಗೆ ಹೆಬ್ಬಾರ್ ವಿರುದ್ಧ ಅಬ್ಬರಿಸಿದರು. ನಂತರ ಬಿಜೆಪಿಯ ಎಲ್ಲರೂ ದನಿಗೂಡಿಸಿದರು. ಯಾರೇ ಆಗಲಿ ಪಕ್ಷ ವಿರೋಧಿಗಳನ್ನು ಮುಲಾಜಿಲ್ಲದೆ ರೂಪಾಲಿ ನಾಯ್ಕ ತರಾಟೆಗೆ ತೆಗೆದುಕೊಳ್ಳುವ ಮೂಲಕ ಗಮನ ಸೆಳೆದರು.