ಗೆದ್ದ ಮೋದಿ ಗ್ಯಾರಂಟಿ, ಸೋತ ಕಾಂಗ್ರೆಸ್ ಗ್ಯಾರಂಟಿ

| Published : Jun 05 2024, 12:32 AM IST / Updated: Jun 05 2024, 01:07 PM IST

ಸಾರಾಂಶ

ಸರ್ಕಾರದ ಗ್ಯಾರಂಟಿ ಪ್ರಯೋಜನ ಪಡೆದವರೂ ಕೇಂದ್ರದಲ್ಲಿ ಬಿಜೆಪಿಗೆ ಮತ ನೀಡಿರುವುದು ಈ ಫಲಿತಾಂಶದಿಂದ ವೇದ್ಯವಾಗಿದೆ.

ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಮೋದಿ ಗ್ಯಾರಂಟಿ ಹಾಗೂ ಕಾಂಗ್ರೆಸ್ ಗ್ಯಾರಂಟಿಯ ನಡುವೆಯೇ ಚುನಾವಣೆ ಕೇಂದ್ರೀಕೃತವಾಗಿತ್ತು. ಕೊನೆಗೂ ಮೋದಿ ಗ್ಯಾರಂಟಿಯೇ ಗೆದ್ದು, ಕಾಂಗ್ರೆಸ್ ಗ್ಯಾರಂಟಿ ಸೋಲುವಂತಾಗಿದೆ.

ಆರು ಬಾರಿ ಗೆದ್ದು ಈ ಬಾರಿ ಟಿಕೆಟ್ ವಂಚಿತ ಅನಂತಕುಮಾರ ಹೆಗಡೆ ಬೆಂಬಲಿಗರ ನಿರಂತರ ವಿರೋಧ, ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಪರೋಕ್ಷವಾಗಿ ಕಾಂಗ್ರೆಸ್ ಜತೆ ಕೈಜೋಡಿಸಿದ ನಡುವೆಯೂ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಭರ್ಜರಿ ನಿರೀಕ್ಷೆಗೂ ಮೀರಿ ಗೆಲುವಿನ ನಗೆ ಬೀರಿದ್ದಾರೆ. ಡಾ. ಅಂಜಲಿ ನಿಂಬಾಳ್ಕರ್ ಸೋಲನ್ನು ಅನುಭವಿಸಿದ್ದಾರೆ.

ಈ ಚುನಾವಣೆಯಲ್ಲಿ ಅಭ್ಯರ್ಥಿಗಳು ಸಾಂಕೇತಿಕವಾಗಿದ್ದರು. ಕಾಗೇರಿ ಸಹ ಇದನ್ನು ಪ್ರಸ್ತಾಪಿಸಿದ್ದರು. ಅಂಜಲಿ ನಿಂಬಾಳ್ಕರ್ ಜಿಲ್ಲೆಯಲ್ಲಿ ಅಪರಿಚಿತರಾಗಿದ್ದರು. ಬಿಜೆಪಿಯವರು ಮೋದಿ ಅಸ್ತ್ರವನ್ನೇ ಬಳಸಿದರೆ, ಕಾಂಗ್ರೆಸ್ ಗ್ಯಾರಂಟಿಯನ್ನು ನಂಬಿಯೇ ಚುನಾವಣೆ ಎದುರಿಸಿತು. ಆದರೆ ಕಾಂಗ್ರೆಸ್ ಗ್ಯಾರಂಟಿಗಿಂತ ಮೋದಿ ಅಸ್ತ್ರವೇ ಹೆಚ್ಚು ಕೆಲಸ ಮಾಡಿರುವುದು ಈ ಫಲಿತಾಂಶದಿಂದ ಸ್ಪಷ್ಟವಾಗಿದೆ.ಜಾಲತಾಣದಲ್ಲಿ 

ತೇಜೋವಧೆ: ಅನಂತಕುಮಾರ ಹೆಗಡೆ ತಮ್ಮ ಬೆಂಬಲಿಗರ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಕಾಗೇರಿ ವಿರುದ್ಧ ತೇಜೋವಧೆ ನಡೆಯುವಂತೆ ನೋಡಿಕೊಂಡಿದ್ದಾರೆ. ಆದರೆ ಹಿಂದೆ ಅನಂತಕುಮಾರ ಹೆಗಡೆ ಅವರಿಗೆ ಮತ ನೀಡಿದವರು ಈಗ ಬಿಜೆಪಿಗೆ ಮತ ನೀಡಿದ್ದು ಸ್ಪಷ್ಟವಾಗಿದೆ. ಅನಂತಕುಮಾರ ಹೆಗಡೆ ತಮ್ಮ ನಡೆಯಿಂದ ಜನಬೆಂಬಲವನ್ನು ಕಳೆದುಕೊಂಡಂತಾಗಿದೆ. ಅನಂತಕುಮಾರ ಹೆಗಡೆ ಅವರೇ ಅನಿವಾರ್ಯವಲ್ಲ. ಮೋದಿ ಅವರ ಜನಪ್ರಿಯತೆಯಿಂದಾಗಿ ಯಾರೇ ಪಕ್ಷದ ಅಭ್ಯರ್ಥಿಯಾದರೂ ಗೆಲುವು ಸಾಧಿಸಬಹುದು ಎನ್ನುವುದನ್ನು ಈ ಚುನಾವಣೆ ತೋರಿಸಿಕೊಟ್ಟಿದೆ.

ಪ್ರಚಾರಕ್ಕೆ ಬಾರದ ಹೆಬ್ಬಾರ: ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಬಿಜೆಪಿಯ ಪ್ರಚಾರದಲ್ಲಿ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ಮೇಲಾಗಿ ಪುತ್ರ ವಿವೇಕ ಹೆಬ್ಬಾರ್ ಹಾಗೂ ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆಗೊಂಡು ಕಾಂಗ್ರೆಸ್ ಪರವಾಗಿ ಸಕ್ರಿಯವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡರು. ಶಿವರಾಮ ಹೆಬ್ಬಾರ್ ತಾಂತ್ರಿಕವಾಗಿ ಬಿಜೆಪಿಯಲ್ಲಿ ಇದ್ದರೂ ಮಾನಸಿಕವಾಗಿ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಹಿಂದೆ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದವರು. ಜಿಲ್ಲಾದ್ಯಂತ ಅವರ ಪ್ರಭಾವವೂ ಇದೆ. ಆದರೆ ಅದಾವುದೂ ಕಾಂಗ್ರೆಸ್ ಗೆಲ್ಲಿಸುವಲ್ಲಿ ಸಫಲವಾಗಲಿಲ್ಲ. ಮೋದಿ ಸುನಾಮಿಯ ಮುಂದೆ ಉಳಿದೆಲ್ಲವೂ ನಿಸ್ಫಲವಾಯಿತು.

ಬಿಜೆಪಿಗೆ ಮಣೆ: ಕಾಂಗ್ರೆಸ್‌ನ ಅಂಜಲಿ ನಿಂಬಾಳ್ಕರ್ ರಾಜ್ಯ ಸರ್ಕಾರದ ಗ್ಯಾರಂಟಿಯನ್ನೇ ನಂಬಿಕೊಂಡಿದ್ದರು. ಸರ್ಕಾರದ ಗ್ಯಾರಂಟಿ ಪ್ರಯೋಜನ ಪಡೆದವರೂ ಕೇಂದ್ರದಲ್ಲಿ ಬಿಜೆಪಿಗೆ ಮತ ನೀಡಿರುವುದು ಈ ಫಲಿತಾಂಶದಿಂದ ವೇದ್ಯವಾಗಿದೆ. ಜತೆಗೆ ರಾಷ್ಟ್ರೀಯತೆ, ರಾಷ್ಟ್ರದ ಸುರಕ್ಷತೆ, ಭದ್ರತೆಯ ದೃಷ್ಟಿಯಿಂದ ಮೋದಿ ಅವರಿಗೆ ಮತದಾರರು ಮಣೆ ಹಾಕಿದ್ದಾರೆ.